ಮೈಸೂರು,ಸೆ.26(ಪಿಎಂ)-ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮಾನತೆಗೆ ಒತ್ತು ನೀಡಲಾಗಿದೆ ಎಂದು ರಾಜ್ಯ ಸರ್ಕಾ ರದ ಎನ್‍ಇಪಿ-2020 ಕಾರ್ಯಪಡೆ ಸದಸ್ಯರೂ ಆದ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ತಿಳಿಸಿದರು.
ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈವಿವಿ ಹಾಗೂ ಮೈವಿವಿ ಶೈಕ್ಷಿಕ್ ಸಂಘ್ (ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ್ ಸಂಯೋಜಿತ) ಜಂಟಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಸಾಮಾಜಿಕ ನ್ಯಾಯ, ಸಮಾನತೆಗೆ ಸಂಬಂಧಿಸಿ ಹಿಂದಿನ ಯಾವುದೇ ಶಿಕ್ಷಣ ನೀತಿ ಕೊಡದಷ್ಟು ಒತ್ತನ್ನು ಈಗಿನ ಶಿಕ್ಷಣ ನೀತಿ ಕೊಟ್ಟಿದೆ. ಇದರಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ಈ ನೀತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳದ ಕೆಲವರು, ಸಂವಿಧಾನದ ಆಶಯಗಳಿಗೆ ಈ ನೀತಿ ಪೂರಕವಾಗಿಲ್ಲ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
1968ರಲ್ಲಿ ದೇಶದ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಂಡಿತು. 1986 ಮತ್ತು 1992ರಲ್ಲೂ ಹೊಸ ಶಿಕ್ಷಣ ನೀತಿಗಳು ಬಂದರೂ ಇಚ್ಛಾಶಕ್ತಿ ಕೊರತೆಯಿಂದ ಪೂರ್ಣ ಅನುಷ್ಠಾನ ಆಗಲಿಲ್ಲ. ಗ್ರಾಪಂನಿಂದ ದೆಹಲಿವ ರೆಗೂ ನೂತನ ಶಿಕ್ಷಣ ನೀತಿಯ ಚರ್ಚೆಯಾಗಿದೆ. 16 ತಿಂಗಳ ಪರಿಶ್ರಮ ಮೂಲಕ ಡಾ.ಕಸ್ತೂರಿರಂಗನ್ ನೇತೃ ತ್ವದ ಸಮಿತಿ ಉತ್ತಮ ನೀತಿ ಹೊರತಂದಿದೆ. ಕಸ್ತೂರಿ ರಂಗನ್ ಕೇರಳದವರಾದರೂ ಅವರ ಕರ್ಮಭೂಮಿ ಕರ್ನಾಟಕ. ಹೀಗಾಗಿ ಕರ್ನಾಟಕದ ಪಾತ್ರವೂ ನೂತನ ಶಿಕ್ಷಣ ನೀತಿ ರೂಪುಗೊಳ್ಳುವುದರ ಹಿಂದೆ ಇದೆ ಎಂದು ಹೆಮ್ಮೆಯಿಂದ ಹೇಳಬಹುದು. ಕರ್ನಾಟಕದ ಯಶಸ್ವಿ ಮಾದರಿಗಳು ಈ ನೀತಿಯ ಭಾಗವಾಗಿವೆ ಎಂದರು.
ನೂತನ ನೀತಿ ಸಂಬಂಧ ಇಂಗ್ಲಿಷ್‍ನಲ್ಲಿ 465 ಪುಟ, ಹಿಂದಿಯಲ್ಲಿ 635 ಪುಟಗಳ ಕರಡು ಸಿದ್ಧವಾಗಿ ವ್ಯಾಪಕ ಚರ್ಚೆಯಾಗಿದೆ. 2 ಲಕ್ಷ ಸಲಹೆ ಪಡೆದ ಬಳಿಕ ಅಂತಿಮ ವಾಗಿ 65 ಪುಟಗಳ ಅಮೃತದಂತಹ ಉತ್ತಮ ನೀತಿ ನಮಗೆ ದೊರಕಿದೆ. ಈ ನೀತಿ ರೂಪುಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ಆಸಕ್ತಿ ಕಾರಣ ಎಂದರು.
ಕಳೆದ ವರ್ಷ 776 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ (ಎಲ್‍ಕೆಜಿ-ಯುಕೆಜಿ) ಆರಂಭಿಸಿದ್ದು, ಇದರಿಂದ ಈ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಈ ನೀತಿಯಲ್ಲೂ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಲಾಗಿದ್ದು, ಇದರಿಂದ ಮಗು 3 ವರ್ಷ ಆಗುತ್ತಿದ್ದಂತೆ ಶಾಲೆಗೆ ಹೋಗಲು ಶುರುವಾಗುತ್ತದೆ ಎಂದರು.
ನೀತಿಯಲ್ಲಿ ಅಂಗನವಾಡಿ ಕೇಂದ್ರ ವ್ಯವಸ್ಥೆ ಉಳಿಸಿ ಕೊಂಡಿದ್ದು, 12ನೇ ತರಗತಿ ಓದಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಶಿಕ್ಷಕ ತರಬೇತಿ ಪಡೆಯಲು ಅವಕಾಶ ನೀಡಲಾಗಿದೆ. 5ನೇ ತರಗತಿ ಮಗು, 2ನೇ ತರಗತಿ ಪುಸ್ತಕ ಓದಲಾಗುತ್ತಿಲ್ಲ ಹಾಗೂ ಗಣಿತದಲ್ಲಿ ಹಿಂದುಳಿ ಯುವಿಕೆ ಗುರುತಿಸಿ ಅವನ್ನು ನಿವಾರಿಸಲು ನೀತಿಯಲ್ಲಿ ಪೂರಕ ಕ್ರಮಗಳನ್ನು ಸೂಚಿಸಲಾಗಿದೆ. ಪಿಯು ಶಿಕ್ಷಣದಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ಎಂದು ವರ್ಗೀಕರಿಸಲಾ ಗಿದೆ. ಆದರೆ ನೂತನ ನೀತಿ ಜಾರಿ ಬಳಿಕ ಈ ವಿಭಜನೆ ಬದಲಿಸಿ, ಕಡ್ಡಾಯ ಕ್ರೆಡಿಟ್ಸ್ ಹಾಗೂ ಆಯ್ಕೆ ವಿಷಯ ಗಳ ವ್ಯವಸ್ಥೆ ಬರಲಿದೆ ಎಂದರು. ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಉದ್ಘಾಟನೆ ನೆರವೇರಿಸಿದರು. ಜೆಎನ್‍ಯು ಪ್ರಾಧ್ಯಾಪಕ ಪ್ರೊ.ವಿಶ್ವನಾಥ್, ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿಂಧನಕೇರಾ, ಮೈವಿವಿ ಆಡಳಿತಾಂಗ ಕುಲಸಚಿವ ಪ್ರೊ.ಆರ್.ಶಿವಪ್ಪ, ಕಾನೂನು ವಿಭಾಗದ ಮುಖ್ಯಸ್ಥ ಪ್ರೊ. ಸಿ.ಬಸವರಾಜು, ಮೈಸೂರು ವಿವಿ ಶೈಕ್ಷಿಕ್ ಸಂಘ್‍ನ ಕಾರ್ಯದರ್ಶಿ ಪ್ರೊ. ಎಂ.ಆರ್.ಗಂಗಾಧರ್ ಮತ್ತಿತರರಿದ್ದರು.