ಮೈಸೂರಲ್ಲಿ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ
ಮೈಸೂರು

ಮೈಸೂರಲ್ಲಿ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ

August 28, 2018

ಮೈಸೂರು:  ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಅವರ 164ನೇ ಜಯಂತಿಯನ್ನು ಸೋಮವಾರ ಆಚರಿಸಲಾಯಿತು.

ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಯಂತ್ಯೋತ್ಸವವನ್ನು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಉದ್ಘಾಟಿಸಿ, ನಾರಾಯಣ ಗುರುಗಳ ಚಿತ್ರಪಟಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಋಗ್ವೇದಲ್ಲಿ ಹೇಳುವಂತೆ ಉದಾತ್ತ ಚಿಂತನೆಗಳನ್ನು ಸ್ವೀಕರಿಸಲು ಜಾತಿ, ಮತ, ಪ್ರದೇಶ ಹಾಗೂ ಭಾಷೆ ಸೇರಿದಂತೆ ಯಾವುದೇ ಅಂಗಿಲ್ಲ. ಅದೇ ರೀತಿ ನಾರಾಯಣ ಗುರುಗಳು ಮೂಲತಃ ಕೇರಳದವರಾದರೂ ಅವರ ಉದಾತ್ತ ಚಿಂತನೆಗಳು ಕನ್ನಡ ನಾಡಿಗೂ ವ್ಯಾಪಿಸಿದ್ದು, ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.

ನಾರಾಯಣ ಗುರುಗಳು ಸಮಾಜದಲ್ಲಿನ ಅಸಮಾನತೆ ತೊಡೆದು ಹಾಕಲು ಹೋರಾಡಿದರಲ್ಲದೆ, ಮಾನವನ ವ್ಯಕ್ತಿತ್ವ ಹೇಗೆ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂಬ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ಅವರ ಜೀವನ ಶೈಲಿಯು ಯೋಗಾಸನ ಹಾಗೂ ವ್ಯಾಯಾಮದಿಂದ ಕೂಡಿತ್ತು. ಅವರ ಜೀವನ ಕ್ರಮಗಳನ್ನು ನಾವು ಅನುಸರಿಸಿದರೆ ಇಂದಿನ ಒತ್ತಡಮಯ ಬದುಕಿನಿಂದ ಎದುರಾಗುತ್ತಿರುವ ಅನಾರೋಗ್ಯ ಸಮಸ್ಯೆ ದೂರವಾಗಲಿದೆ. ಕಳೆದ ಬಾರಿ ನಡೆದ ಗುರುಗಳ ಜಯಂತಿ ವೇಳೆ ನನಗೆ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ತವಕ ಉಂಟಾಯಿತು. ಬಳಿಕ ಅವರ ಜೀವನ, ಸಾಧನೆ ಹಾಗೂ ಚಿಂತನೆಗಳನ್ನು ಸಾಕಷ್ಟು ತಿಳಿದುಕೊಂಡೆ ಎಂದು ನುಡಿದರು.

ನಾರಾಯಣ ಗುರುಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಗಂಗಾವತಿ ಮೂಲದ ವಕೀಲ ನಾಗರಾಜು ಎಸ್.ಗುತ್ತೇದಾರ್, 1854ರಲ್ಲಿ ಕೇರಳದ ಪುಟ್ಟ ಗ್ರಾಮದಲ್ಲಿ ಜನಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಕುಟುಂಬ ವೈಚಾರಿಕ ಚಿಂತನೆ ಹೊಂದಿತ್ತು. ನಾರಾಯಣ ಗುರುಗಳು ತಮ್ಮ 26ನೇ ವಯಸ್ಸಿನಲ್ಲಿ ವೈರಾಗ್ಯತಾಳಿ ಮನೆ ಬಿಟ್ಟು ಕಾಡು ಸೇರುತ್ತಾರೆ. ಇವರ ಕಾಲಘಟ್ಟದಲ್ಲಿ ಕೇರಳದಲ್ಲಿ ಅಸಮಾನತೆ ತಾಂಡವವಾಡುತ್ತಿತ್ತು. ಅಲ್ಲಿ ಇವರು ಜನಿಸಿದ ಈಳವ ಸಮುದಾಯ ಅಸ್ಪೃಶ್ಯ ಜಾತಿಗೆ ಸೇರಿತ್ತು. ಅನಿಷ್ಠ ಪದ್ಧತಿಗಳ ಮೂಲಕ ಅಸ್ಪೃಶ್ಯ ಜಾತಿಗಳ ವಿರುದ್ಧ ನಿರಂತರ ಶೋಷಣೆ ನಡೆಯುತ್ತಿತ್ತು. ಇದನ್ನು ಕಂಡ ಸ್ವಾಮಿ ವಿವೇಕಾನಂದರು ಕೇರಳ ಒಂದು ಹುಚ್ಚರ ಸಂತೆ ಎಂದು ನೊಂದು ನುಡಿದಿದ್ದಾರೆ ಎಂದು ತಿಳಿಸಿದರು.

ಅಂದು ಕೇರಳದಲ್ಲಿ ಬಹುಸಂಖ್ಯಾತರು ದೇವಸ್ಥಾನದತ್ತ ಸುಳಿವಂತೆಯೇ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕ್ರಾಂತಿಕಾರಕ ನಿಲುವು ತಾಳಿದ ನಾರಾಯಣ ಗುರುಗಳು ಅರಿವೀಪುರಂ ಎಂಬಲ್ಲಿ ಅಸ್ಪೃಶ್ಯರಿಗಾಗಿಯೇ ಶಿವನ ದೇವಸ್ಥಾನ ನಿರ್ಮಿಸುತ್ತಾರೆ. ಇದಕ್ಕೆ ಬ್ರಾಹ್ಮಣ ಸಮುದಾಯದ ವಿರೋಧವೂ ವ್ಯಕ್ತವಾಗುತ್ತದೆ. ಅದೇ ರೀತಿ 70ಕ್ಕೂ ಹೆಚ್ಚು ದೇವಾಲಯಗಳನ್ನು ಅವರು ಸ್ಥಾಪನೆ ಮಾಡುತ್ತಾರೆ. ಒಂದು ಹಂತದಲ್ಲಿ ದೇವಸ್ಥಾನದಲ್ಲಿ ಮೂರ್ತಿಗೆ ಬದಲು ಗರ್ಭಗುಡಿಯಲ್ಲಿ ಜ್ಯೋತಿ ಬೆಳಗಿಸುತ್ತಾರೆ. ಅವರು ನಿರ್ಮಿಸಿದ ಇನ್ನು ಕೆಲ ದೇವಾಲಯಗಳ ಗರ್ಭಗುಡಿಯಲ್ಲಿ ಮೂರ್ತಿಗೆ ಬದಲು `ಸತ್ಯ, ಧರ್ಮ, ದಯೆ, ಪ್ರೇಮ’ ಎಂಬ ಬರೆದ ಫಲಕಗಳನ್ನಿಡುತ್ತಾರೆ. ಮತ್ತೊಂದು ವಿಶೇಷವೆಂದರೆ ಗರ್ಭಗುಡಿಯಲ್ಲಿ ಕನ್ನಡಿಯನ್ನು ಪ್ರತಿಷ್ಠಾಪಿಸಿ `ನಿಮ್ಮಲ್ಲಿಯೇ ದೇವರಿದ್ದಾನೆ’ ಎಂಬ ಸಂದೇಶ ಸಾರುತ್ತಾರೆ.

ಕೇರಳದ ಶೈಕ್ಷಣಿಕ ಕ್ರಾಂತಿಗೆ ನಾರಾಯಣರೇ ಕಾರಣ: ಮುಂದೆ ನಾರಾಯಣ ಗುರುಗಳು ಇನ್ನು ದೇವಸ್ಥಾನ ನಿರ್ಮಿಸಿದ್ದು ಸಾಕು. ಶಾಲಾ-ಕಾಲೇಜು ಆರಂಭಿಸಿ ಶಿಕ್ಷಣ ಕ್ರಾಂತಿಗೆ ವೇದಿಕೆ ಸಜ್ಜುಗೊಳಿಸುವಂತೆ ಕರೆ ನೀಡುತ್ತಾರೆ. ಇಂದು ಕೇರಳ ರಾಜ್ಯ ಸಾಕ್ಷರತೆ ಪ್ರಮಾಣದಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದ್ದು, ಇದಕ್ಕೆ ಕಾರಣ ಅಂದು ನಾರಾಯಣ ಗುರುಗಳು ಹಾಕಿದ ಬುನಾದಿಯೇ ಆಗಿದೆ ಎಂದ ಅವರು, ಎಲ್ಲಾ ಜಾತಿ-ಜನಾಂಗಗಳೊಂದಿಗೆ ನಮ್ಮ ಸಮುದಾಯ ಸಾಮರಸ್ಯದಿಂದ ಬದುಕುತ್ತಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಸಮುದಾಯದ ಒಳಗೇ ಉಳ್ಳವರು ಹಾಗೂ ಬಡವರ ನಡುವೆ ಕಂದಕ ಹೆಚ್ಚುತ್ತಿದ್ದು, ಪರಿಣಾಮ ನಮ್ಮ ಜನಾಂಗದಲ್ಲಿ ಒಗ್ಗಟ್ಟಿನ ಕೊರತೆ ಉಂಟಾಗಿದೆ ಎಂದು ವಿಷಾದಿಸಿದರು.

ಇದಕ್ಕೂ ಮುನ್ನ ಅಮ್ಮರಾಮಚಂದ್ರ, ಡಾ.ನಿಂಗರಾಜು ತಂಡ ನಾರಾಯಣ ಗುರುಗಳ ಕುರಿತ ಗಾಯನ ಸಾದರಪಡಿಸಿದರು. ಜೊತೆಗೆ ಬ್ರಹ್ಮಶ್ರೀ ನಾರಾಯಣ ಗುರು ಯೋಗ ಮಂದಿರದ ಯೋಗಪಟುಗಳು ಯೋಗ ನೃತ್ಯ ರೂಪಕ ಪ್ರದರ್ಶಿಸಿದರು. ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಮುಡಾ ಆಯುಕ್ತ ಕಾಂತರಾಜು, ಅಧೀಕ್ಷಕ ಅಭಿಯಂತರ ಸುರೇಶ್‍ಬಾಬು, ಮೈಸೂರು ತಹಸೀಲ್ದಾರ್ ರಮೇಶ್‍ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಗೌರವಾಧ್ಯಕ್ಷ ಜೆ.ಪಿ.ಪೂಜಾರಿ, ಅಧ್ಯಕ್ಷ ಎಂ.ಕೆ.ಪೊತರಾಜು, ವಿವಿಧ ಸಂಘಟನೆಗಳ ಮುಖಂಡರಾದ ರಾಜಶೇಖರ ಕದಂಬ, ಸರೋಜಮ್ಮ ಪಾಪೇಗೌಡ, ಟಿ.ಎಸ್.ಮುರಳಿ ಮತ್ತಿತರರು ಹಾಜರಿದ್ದರು. ಪಾಲಿಕೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ನಡೆಯಿತು.

ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಗಳಿಗೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ

ಮೈಸೂರು:  ಬ್ರಹ್ಮಶ್ರೀ ನಾರಾಯಣ ಗುರುಗಳಿಗೂ ಕರ್ನಾಟಕದ ಮೈಸೂರಿಗೂ ಅವಿನಾಭಾವ ನಂಟಿದೆ ಎಂದು ವಕೀಲ ನಾಗರಾಜು ಎಸ್.ಗುತ್ತೇದಾರ್ ತಿಳಿಸಿದರು.

ನಾರಾಯಣ ಗುರುಗಳು ಸ್ಥಾಪಿಸಿದ `ಶ್ರೀ ನಾರಾಯಣ ಧರ್ಮಪರಿಪಾಲನಾ ಯೋಗಂ (ಎಸ್‍ಡಿಎನ್‍ಪಿ)’ನ ಉಪಾಧ್ಯಕ್ಷರಾಗಿ ಕೆಲಸ ಮಾಡಿದ ಡಾ.ಪಲ್ಪು ಮೈಸೂರಿನವರು. ಡಾ.ಪಲ್ಪು ಮೈಸೂರು ಸಂಸ್ಥಾನದಲ್ಲಿ ಮಹಾರಾಜರ ಮುಖ್ಯ ವೈದ್ಯಾಧಿಕಾರಿಯಾಗಿ ಕೆಲಸ ಮಾಡಿದ್ದವರು. ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದ ವೇಳೆ ಅವರ ಬಳಿಗೆ ತೆರಳಿದ ಡಾ.ಪಲ್ಪು, ಅಸಮಾನತೆಯಿಂದ ನಲಗುತ್ತಿದ್ದ ಕೇರಳದ ಪರಿಸ್ಥಿತಿ ಸುಧಾರಿಸಲು ಏನಾದರೂ ಸಲಹೆಗಳಿವೆಯೇ ಎಂದು ಕೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ ವಿವೇಕಾನಂದರು, ಕೇರಳದಲ್ಲಿ ಸುಧಾರಣೆ ತರಲು ಒಬ್ಬ ಯುವಕ ಶ್ರಮಿಸುತ್ತಿದ್ದು, ನೀವು ಅಲ್ಲಿಗೆ ತೆರಳಿ ಅವರೊಂದಿಗೆ ಕೈಜೋಡಿಸಿ ಎಂಬ ಸಲಹೆ ನೀಡುತ್ತಾರೆ. ಆ ಬಳಿಕ ಡಾ.ಪಲ್ಪು, ಎಸ್‍ಡಿಎನ್‍ಪಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ ಎಂದು ತಿಳಿಸಿದರು.

Translate »