ಮೈಸೂರಲ್ಲಿ ವಿಭಿನ್ನ ರೀತಿ ನಾನಾ ಪಕ್ಷಗಳ ಪ್ರಚಾರ ಭರಾಟೆ
ಮೈಸೂರು

ಮೈಸೂರಲ್ಲಿ ವಿಭಿನ್ನ ರೀತಿ ನಾನಾ ಪಕ್ಷಗಳ ಪ್ರಚಾರ ಭರಾಟೆ

August 28, 2018

ಮೈಸೂರು:  ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲೀಗ ಪ್ರಚಾರದ ಭರಾಟೆ ಜೋರಾಗಿದೆ. ಎಲ್ಲೆಂದರಲ್ಲಿ ಆಟೋರಿಕ್ಷಾ ಸೇರಿದಂತೆ ವಿವಿಧ ಪ್ರಚಾರ ವಾಹನಗಳು ಅಭ್ಯರ್ಥಿಗಳ ಭಾವಚಿತ್ರ ಸೇರಿದಂತೆ ಮತದಾನಕ್ಕಾಗಿ ಮನವಿ ಮಾಡುವ ಸಂದೇಶವಿರುವ ಬ್ಯಾನರ್‍ಗಳನ್ನು ಕಟ್ಟಿಕೊಂಡು ಸುತ್ತಾಡುತ್ತಿವೆ.

ನಗರದ 65 ವಾರ್ಡ್‍ಗಳಲ್ಲೂ ಅಭ್ಯರ್ಥಿಗಳ ಮನೆ ಮನೆ ಭೇಟಿಯೂ ಕಳೆಗಟ್ಟಿದೆ. ಮತದಾರರ ಮನೆ-ಮನಗಳನ್ನು ಮುಟ್ಟಲು ಅಭ್ಯರ್ಥಿಗಳು ಮುದ್ರಿಸಿರುವ ಕರಪತ್ರಗಳು ಇದೀಗ ನಗರದ ಮನೆ-ಮನೆಗಳಲ್ಲೂ ಮಾತ್ರವಲ್ಲದೆ, ಅಂಗಡಿ-ಮುಂಗಟ್ಟು ಸೇರಿದಂತೆ ವಿಶೇಷವಾಗಿ ಚಹ ಅಂಗಡಿಗಳಲ್ಲಿ ಕಾಣಸಿಗುತ್ತಿವೆ.

ಮತದಾರರನ್ನು ಖುದ್ದು ಭೇಟಿ ಮಾಡುತ್ತಿರುವ ಅಭ್ಯರ್ಥಿಗಳು ಆಯ್ಕೆಯಾದಲ್ಲಿ ಈಡೇರಿಸುವ ವಿವರ ಹಾಗೂ ಅವರ ಪಕ್ಷ, ಚಿಹ್ನೆ ಮತ್ತು ಕ್ರಮ ಸಂಖ್ಯೆಯ ಮಾಹಿತಿ ಒಳಗೊಂಡ ಕರಪತ್ರಗಳನ್ನು ನೀಡಿ ತಮಗೇ ಮತ ನೀಡುವಂತೆ ಮತದಾರ ಪ್ರಭುಗಳ ಬೆಂಬಲ ಕೋರುತ್ತಿದ್ದಾರೆ.

ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಮ್ಮ ಅಭ್ಯರ್ಥಿಗಳ ಪರ ತೆರೆದ ವಾಹನದಲ್ಲಿ ರೋಡ್ ಶೋ ಸಹ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್ ಸೇರಿದಂತೆ ಇನ್ನಿತರ ಪಕ್ಷದ ಮುಖಂಡರು ಪ್ರಚಾರಕ್ಕಿಳಿದಿದ್ದರೆ, ಜೆಡಿಎಸ್ ಅಭ್ಯರ್ಥಿಗಳಿಗೆ ಗೆಲುವು ತಂದುಕೊಡಲು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರೂ ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಇಂದು ಬೆಳಿಗ್ಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿರುವ ಜಿ.ಟಿ.ದೇವೇಗೌಡ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ಪ್ರಚಾರ ನಡೆಸಿದರು.

ಇನ್ನು ಕಾಂಗ್ರೆಸ್ ಅಭ್ಯರ್ಥಿಗಳ ಪರ ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾನ ಮಾಡುವಂತೆ ಜನತೆಯಲ್ಲಿ ಕೋರಿದ್ದು, ಪಕ್ಷದ ಮುಖಂಡರಾದ ಸಿ.ಹೆಚ್.ವಿಜಯಶಂಕರ್, ತನ್ವೀರ್‍ಸೇಠ್, ಎಂ.ಕೆ.ಸೋಮಶೇಖರ್ ಪ್ರಚಾರದಲ್ಲಿ ನಿರತರಾಗಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು ಸಹ ಪ್ರಚಾರದಲ್ಲಿ ತೊಡಗಿದ್ದು, ಗೆಲುವು ಸಾಧಿಸಲು ಕರಸತ್ತು ನಡೆಸುತ್ತಿದ್ದಾರೆ.

ಆಟೋರೀಕ್ಷಾದಲ್ಲಿ ಮೈಕಾಸುರರ ಅಬ್ಬರ: ಬಹುತೇಕ ಅಭ್ಯರ್ಥಿಗಳು ತಮ್ಮ ಪರ ಪ್ರಚಾರಕ್ಕಾಗಿ ಆಟೋರೀಕ್ಷಾಗಳನ್ನೇ ಹಿಡಿದಿದ್ದಾರೆ. ನಗರದ ರಸ್ತೆಗಳಲ್ಲೀಗ ಪ್ರಚಾರಕ್ಕೀಳಿದ ಆಟೋರಿಕ್ಷಾಗಳದ್ದೇ ಸದ್ದು. ಧ್ವನಿವರ್ಧಕಗಳ ಮೂಲಕ ಅಭ್ಯರ್ಥಿ ಪರ ಮತದಾನ ಮಾಡುವಂತೆ ಕೋರುತ್ತಿರುವ ಸದ್ದು ಇದೀಗ ನಗರದ ಎಲ್ಲ ಮೂಲೆ ಮೂಲೆಗಳಲ್ಲಿ ರಿಂಗಣಿಸಿದೆ. ಜೊತೆಗೆ ಓಪನ್ ಜೀಪ್, ನಾಲ್ಕು ಚಕ್ರದ ವಾಹನಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಓಪನ್ ಜೀಪ್‍ನಲ್ಲಿ ಪಕ್ಷಗಳ ನಾಯಕರು ಪ್ರಚಾರ ನಡೆಸುತ್ತಿದ್ದರೆ, ನಾಲ್ಕು ಚಕ್ರದ ವಾಹನಗಳಲ್ಲಿ ಅನೇಕ ಅಭ್ಯರ್ಥಿಗಳು ಎಲ್‍ಇಡಿ ಪರದೆ ಅಳವಡಿಸಿ ತಮ್ಮ ಪರ ಪ್ರಚಾರ ಮಾಡಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣ: ಸಾಮಾಜಿಕ ಜಾಲತಾಣದ ಮೂಲಕವೂ ಅಭ್ಯರ್ಥಿಗಳು ಮತದಾರರ ಮನ ಗೆಲ್ಲಲು ಮುಂದಾಗಿದ್ದಾರೆ. ಕರಪತ್ರದ ಸಾಫ್ಟ್ ಕಾಫಿಯನ್ನು ಕಳುಹಿಸುವ ಮೂಲಕ ಹಾಗೂ ವೀಡಿಯೋ ರವಾನಿಸುವ ಮೂಲಕವೂ ತಮಗೆ ಮತ ನೀಡುವಂತೆ ಕೋರುತ್ತಿದ್ದಾರೆ. ಫೇಸ್‍ಬುಕ್, ವಾಟ್ಸಾಪ್, ಟ್ವಿಟರ್‍ಗಳ ಮೊರೆ ಹೋಗಿರುವ ಅಭ್ಯರ್ಥಿಗಳು ತಮ್ಮ ಪರ ಮತದಾರರನ್ನು ಒಲೈಸಿಕೊಳ್ಳಲು ಕರಸತ್ತು ನಡೆಸುತ್ತಿದ್ದಾರೆ.

ಪ್ರಚಾರ ಕಾರ್ಯಕ್ರಮಗಳ ಮಾರ್ಗಸೂಚಿಗಳು

  • ಸಾರ್ವಜನಿಕ ಸಭೆ, ರಸ್ತೆ ಮೂಲೆಗಳಲ್ಲಿ ಸಭೆ ಹಾಗೂ ಮೆರವಣಿಗೆಗೆ ಪೊಲೀಸ್ ಇಲಾಖೆಯ ಅನುಮತಿ ಪತ್ರ ಪಡೆದಿರಬೇಕು. ಈ ಪತ್ರದೊಂದಿಗೆ ವೆಚ್ಚ ಪಟ್ಟಿಯನ್ನು ನಿಗದಿತ ನಮೂನೆಯೊಂದಿಗೆ ಆಯಾಯ ಚುನಾವಣಾಧಿಕಾರಿ ಕಚೇರಿಗೆ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು.
  • ರಸ್ತೆ ಮೂಲೆಗಳಲ್ಲಿ ಸಭೆ ನಡೆಸಲು ವೇದಿಕೆ ರಹಿತವಾಗಿ 50 ಜನರಿಗಿಂತ ಕಡಿಮೆ ಜನ ಸೇರಿಸಲು ಅವಕಾಶವಿದೆ. ಜೊತೆಗೆ ವಾಹನ ಸಂಚಾರ ಹಾಗೂ ಪಾದಚಾರಿಗಳಿಗೆ ಯಾವುದೇ ಅಡಚಣೆ ಆಗದಂತೆ ಎಚ್ಚರ ವಹಿಸಬೇಕು.
  • ಸಭೆ, ಸಮಾರಂಭಗಳಿಗೆ ಬಳಸುವ ಧ್ವನಿವರ್ಧಕಗಳು ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳ ದೈನಂದಿನ ಕೆಲಸ ಕಾರ್ಯಗಳ ಮೇಲೆ ತೀವ್ರತರ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಾರದು.

Translate »