ತುರ್ತಾಗಿ ಸಮನ್ವಯ ಸಮಿತಿ ಸಭೆ ಕರೆಯಿರಿ
ಮೈಸೂರು

ತುರ್ತಾಗಿ ಸಮನ್ವಯ ಸಮಿತಿ ಸಭೆ ಕರೆಯಿರಿ

August 28, 2018

ಮೈಸೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಜನ ತತ್ತರಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಭೀಕರ ಅನಾಹುತವೇ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಸಭೆ ಕರೆದು ಚರ್ಚಿಸುವಂತೆ ಶಾಸಕ, ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.

ಮೈಸೂರಿನ ಖಾಸಗಿ ಹೊಟೇಲ್‍ವೊಂದರಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದೆಡೆ ನದಿಗಳು ಉಕ್ಕಿ ಹರಿಯುತ್ತಿದ್ದರೆ, ಮತ್ತೊಂದೆಡೆ ಹನಿ ಮಳೆಯೂ ಆಗದೆ ಭೀಕರ ಬರಗಾಲ ತಲೆದೋರಿದೆ. ಎಂದೂ ಕೇಳಯರಿಯದಂತಹ ಪ್ರಕೃತಿ ವಿಕೋಪಕ್ಕೆ ಕೊಡಗು ಸಾಕ್ಷಿಯಾಗಿ, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ನಾಡ ಹಬ್ಬ ದಸರಾ ಮಹೋತ್ಸವವೂ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ನೆರೆ ಹಾಗೂ ಬರ ಪೀಡಿತ ಪ್ರದೇಶದಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕು. ಕೊಡಗು ಕಟ್ಟುವುದಕ್ಕೆ ಏನು ಮಾಡಬೇಕು. ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚಿಸಿ, ನಿರ್ಧಾರ ಕೈಗೊಳ್ಳಲು ತಕ್ಷಣ ಸಮನ್ವಯ ಸಮಿತಿ ಸಭೆ ಕರೆಯಬೇಕೆಂದು ಅವರು ಆಗ್ರಹಿಸಿದರು.

ಎರಡೂ ಪಕ್ಷದ ಅಧ್ಯಕ್ಷರು ಇರಬೇಕು: ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯತೆ ಕಾಪಾಡಿಕೊಳ್ಳಲು ರಚಿಸಲಾಗಿರುವ ಸಮನ್ವಯ ಸಮಿತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಧ್ಯಕ್ಷರು ಇರಬೇಕು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಯಶಸ್ವಿ, ಒಟ್ಟಿಗೆ ಹೋಗುವ ಕಾರಣ ಪಕ್ಷದ ಅಧ್ಯಕ್ಷರಿಬ್ಬರು ಸದಸ್ಯರಾಗುವುದು ಅಗತ್ಯವಾಗಿದೆ. ಸಮನ್ವಯ ಸಮಿತಿಯಲ್ಲಿ ಯಾರು ಇರಬೇಕು, ಯಾರು ಬೇಡ ಎನ್ನುವುದನ್ನು ಮುಖ್ಯಮಂತ್ರಿಗಳು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ಕೈಗೊಳ್ಳುತ್ತಾರೆ. ಆದರೆ ಸಮನ್ವಯ ಸಮಿತಿಯ ಅಧ್ಯಕ್ಷರು ಸಮಿತಿಗೆ ಇವರು ಬೇಕು, ಅವರು ಬೇಡ ಎನ್ನುವುದು ಸರಿಯಲ್ಲ. ಎರಡು ಪಕ್ಷಗಳ ಅಧ್ಯಕ್ಷರು ಸಮಿತಿಯಿಂದ ಹೊರಗುಳಿದರೆ ಪರಿಪೂರ್ಣ ಸಮಿತಿಯಾಗಿರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ನೆನಪು ಮಾಡಿಕೊಳ್ಳಲಿ: ಮೈಸೂರು ಮಹಾ ನಗರಪಾಲಿಕೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಎ.ಹೆಚ್.ವಿಶ್ವನಾಥ್, ಸಿದ್ದರಾಮಯ್ಯ ಅವರು ದಳದಲ್ಲಿದ್ದಾಗಲೇ ಮಂತ್ರಿಗಳಾದರು, ಉಪಮುಖ್ಯಮಂತ್ರಿಯಾದರು. ಪಕ್ಷದ ಅಧ್ಯಕ್ಷರಾಗಿದ್ದರು ಅನ್ನುವುದನ್ನು ಮರೆಯಬಾರದು ಎಂದು ಛೇಡಿಸಿದರು.

ಯಶಸ್ಸಿಗೆ ಧಾರೆ ಎರೆಯಿರಿ: ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿರುವ ಅಪಾರ ಅನುಭವ ಹೊಂದಿದವರಾಗಿದ್ದಾರೆ. ಹಲವು ವರ್ಷಗಳಿಂದ ಅವರು ನನಗೆ ಸ್ನೇಹಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ಯಶಸ್ಸಿಗೆ ತಮ್ಮ ಅನುಭವ ಧಾರೆ ಎರೆಯಬೇಕು ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. ಮುಖ್ಯಮಂತ್ರಿಗಳ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ಸಚಿವ ಶಿವಶಂಕರರೆಡ್ಡಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ಇದು ನನಗೆ ಗೊತ್ತಿಲ್ಲ. ಸಮನ್ವಯ ಸಮಿತಿ ಇರೋದು ಒಂದು ಮಾಡಲು ಹೊರತು ಒಡೆಯದಕ್ಕಲ್ಲ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.

ಎರಡು ಪಕ್ಷಕ್ಕೂ ಕ್ರೆಡಿಟ್: ರೈತರ ಸಾಲ ಮನ್ನಾ ಸಮ್ಮಿಶ್ರ ಸರ್ಕಾರದ ಕ್ರೆಡಿಟ್ ಆಗಿದೆ. ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೆಗೆದುಕೊಂಡ ನಿಲುವು ಶ್ಲಾಘನೀಯವಾಗಿದೆ. ನಾವಿಬ್ಬರೂ (ಕಾಂಗ್ರೆಸ್-ಜೆಡಿಎಸ್) ಮದುವೆಯಾಗಿ ಬಿಟ್ಟಿದ್ದೇವೆ. ಕೆಲವನ್ನು ಅನುಸರಿಸಿಕೊಂಡು ಹೋಗಬೇಕು ಎಂದರು.

ಜೆಡಿಎಸ್ ಸೇರ್ಪಡೆ: ಇದೆ ವೇಳೆ ಎಸ್‍ಡಿಪಿಐ ಹಾಗೂ ಜನತಾ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದ ಎಂ.ಎಸ್.ಖಲೀಂ ಅವರು ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್‍ಗೆ ಸೇರಿದರು.

ಸುದ್ದಿಗೋಷ್ಠಿಯಲ್ಲಿ ಸಚಿವ ಜಿ.ಟಿ.ದೇವೇಗೌಡ, ಮುಖಂಡರಾದ ಪ್ರೊ.ಕೆ.ಎಸ್.ರಂಗಪ್ಪ, ಅಬ್ದುಲ್ ಅಜೀಜ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಇನ್ನಿತರರು ಇದ್ದರು.

ಮೈಸೂರು ನಗರ ಜನತೆಗೆ ಮೂಲ ಸೌಕರ್ಯ ಕಲ್ಪಿಸಲು ಜೆಡಿಎಸ್ ಬದ್ಧವಾಗಿದೆ
ಜೆಡಿಎಸ್ ಬೆಂಬಲಿಸಲು ಪಕ್ಷದ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್ ಮನವಿ
ಮೈಸೂರು: ಮೈಸೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸೇರಿದಂತೆ ನಗರದ ಜನತೆಗೆ ಮೂಲ ಸೌಲಭ್ಯ ಕಲ್ಪಿಸಲು ಜೆಡಿಎಸ್ ಬದ್ಧವಾಗಿರುವುದರಿಂದ ಆ.31ರಂದು ನಡೆಯಲಿರುವ ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್ ಮನವಿ ಮಾಡಿದ್ದಾರೆ.

ಮೈಸೂರಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಳೆ ಉಂಡವಾಡಿ ಕುಡಿಯುವ ನೀರಿನ ಯೋಜನೆಯನ್ನು ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೂರೇ ತಿಂಗಳಲ್ಲಿ ಚಾಲನೆ ನೀಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಮೈಸೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗಲಿದೆ. ಜನರಿಗೆ ಮೂಲ ಸೌಲಭ್ಯವನ್ನು ಕಲ್ಪಿಸುವುದಕ್ಕೆ ಜೆಡಿಎಸ್ ಬದ್ದವಾಗಿದೆ. ಅಲ್ಲದೆ ಮೈಸೂರು ನಗರದ ಸುತ್ತಮುತ್ತಲಿನ ಹಲವು ಗ್ರಾಮಗಳನ್ನು ನಗರ ಪಾಲಿಕೆಯ ವ್ಯಾಪ್ತಿಗೆ ತಂದು ಬೃಹತ್ ಮೈಸೂರು ಮಹಾನಗರ ಪಾಲಿಕೆ ಮಾಡುವ ಉದ್ದೇಶ ನಮ್ಮದಾಗಿದೆ. ಇದರೊಂದಿಗೆ ಪಾಲಿಕೆ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶವೂ ನಮ್ಮದಾಗಿದೆ ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದಿದೆ. ಉಸ್ತುವಾರಿ ಸಚಿವರನ್ನು ನೇಮಿಸಿ ಆಡಳಿತ ಯಂತ್ರ ಚುರುಕುಗೊಳಿಸುವ ಹೊತ್ತಿಗೆ ಚುನಾವಣೆ ಘೋಷಣೆಯಾಯಿತು. ಈಗ ನಗರಪಾಲಿಕೆ ಸೇರಿ 105 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿರುವುದರಿಂದ ಇರುವ ಕಾಲಾವಕಾಶದಲ್ಲಿ ಎಲ್ಲರೂ ಒಟ್ಟಾಗಿ ಎದುರಿಸುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲೇ ಆಯಾಯ ಜಿಲ್ಲೆಯಲ್ಲಿ ಚುನಾವಣೆ ಎದುರಿಸುತ್ತಿದ್ದರೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಪರಾಜಿತ ಅಭ್ಯರ್ಥಿಗಳ ನಿರ್ಧಾರಕ್ಕೆ ಬಿಡಲಾಗಿತ್ತು. ಈಗ ಅವರೇ ಎಲ್ಲ ಹೊಣೆ ಹೊತ್ತು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಮೈಸೂರು ನಗರ ಸ್ವಚ್ಛತೆಯಲ್ಲಿ ಮತ್ತೆ ಮೊದಲ ಸ್ಥಾನ ಪಡೆಯಬೇಕಾಗಿದೆ. ಅದಕ್ಕಾಗಿ ಪೌರಕಾರ್ಮಿಕರಿಗೆ ಸರಿಯಾದ ವೇತನ, ಮೂಲ ಸೌಕರ್ಯ ಸೇರಿ ಎಲ್ಲವನ್ನು ಒದಗಿಸಬೇಕಾಗಿದೆ. ಇದೇ ರೀತಿ ನಗರದ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಬೇಕಿದೆ ಎಂದು ನುಡಿದರು.

ಮೈಸೂರು ದಸರಾ ಮಹೋತ್ಸವ ಪ್ರಾಧಿಕಾರ ರಚನೆ ಮಾಡಬೇಕಾಗಿದೆ. ಏಕೆಂದರೆ ವರ್ಷಪೂರ್ತಿ ದಸರಾ ವಸ್ತು ಪ್ರದರ್ಶನ ನಡೆಯಬೇಕು. ಸ್ಥಳೀಯವಾಗಿ ಆರ್ಥಿಕ ಉತ್ತೇಜನ ಜತೆಗೆ ಸಣ್ಣಪುಟ್ಟ ವ್ಯಾಪಾರದಿಂದ ಎಲ್ಲರಿಗೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಜರುಗುವ ದಸರಾ ಉನ್ನತಮಟ್ಟದ ಸಭೆಯಲ್ಲೂ ಪ್ರಸ್ತಾಪಿಸುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದರೂ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದೇವೆ. ರೈತರಿಗೆ ಕೊಟ್ಟ ಮಾತಿನಂತೆ ರೈತರ ಸಾಲ ಮನ್ನಾ ಮಾಡಲಾಗಿದೆ. ಮೀಟರ್ ಬಡ್ಡಿ ಲೇವಾದೇವಿಗಾರರಿಂದ ಆಗುತ್ತಿರುವ ಕಿರುಕುಳ ತಡೆಗೆ ಕ್ರಮಕೈಗೊಂಡಿದ್ದಾರೆ. ನಗರಪಾಲಿಕೆ ಚುನಾವಣೆಯಲ್ಲಿ ಸಮಯ ಇಲ್ಲದ ಕಾರಣ ನಾನು, ಅಧ್ಯಕ್ಷರಾದ ಎಚ್.ವಿಶ್ವನಾಥ್ ಕೆಲವು ಕಡೆ ಪ್ರಚಾರ ಮಾಡಿದ್ದೇವೆ. ಪ್ರೊ.ಕೆ.ಎಸ್.ರಂಗಪ್ಪ,ಅಬ್ದುಲ್ ಅಜೀಜ್, ಕೆ.ವಿ.ಮಲ್ಲೇಶ್ ಇನ್ನಿತರರು ತಮ್ಮ ತಮ್ಮ ಕ್ಷೇತ್ರದಲ್ಲಿ ಗೆಲುವಿಗೆ ಹೋರಾಟ ಮಾಡುತ್ತಿದ್ದಾರೆ. ನಗರದ ಜನರು ಜೆಡಿಎಸ್ ಬೆಂಬಲಿಸಿ ಅಧಿಕಾರಕ್ಕೆ ತರುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.

ಕೊಡಗು ಮುಳುಗಿಲ್ಲ:

ನೆರೆ ಹಾಗೂ ಭೂ ಕುಸಿತದಿಂದ ಕೊಡಗು ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ಕೊಡಗು ಮುಳುಗಿದೆ ಎಂದು ವರದಿ ತೋರಿಸುವ ಮೂಲಕ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಕೊಡಗಿನಲ್ಲಿ ಹಾನಿಯಾಗಿದೆಯಾದರೂ ಸಂಪೂರ್ಣ ಮುಳುಗಿಲ್ಲ. ಕೊಡಗು ಕಟ್ಟುವ ಕೆಲಸಕ್ಕೆ ಸರ್ಕಾರ, ಸಂಘ-ಸಂಸ್ಥೆಗಳು, ಮಾದ್ಯಮಗಳು ಸೇರಿದಂತೆ ಎಲ್ಲರೂ ಶ್ರಮಿಸಬೇಕು. ಕೊಡಗು ಕೇವಲ ಮೈಸೂರು, ಕರ್ನಾಟಕಕ್ಕೆ ಮಾತ್ರವಲ್ಲದೆ, ಇಡೀ ಜಗತ್ತಿಗೆ ಬೇಕಾಗಿದೆ. – ಅಡಗೂರು ಹೆಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ

Translate »