ಖೋಟಾ ನೋಟು ದಂಧೆ: ಮಹಿಳೆ ಸೆರೆ
ಮೈಸೂರು

ಖೋಟಾ ನೋಟು ದಂಧೆ: ಮಹಿಳೆ ಸೆರೆ

August 28, 2018

ಮೈಸೂರು: ಖೋಟಾ ನೋಟು ತಯಾರಿಕೆ ಹಾಗೂ ಚಲಾವಣೆ ದಂಧೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರನ್ನು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಜೆಪಿ ನಗರ ನಿವಾಸಿ ಗೌರಮ್ಮ (40) ಬಂಧಿತ ಆರೋಪಿ. ವಿದ್ಯಾರಣ್ಯಪುರಂ ವ್ಯಾಪ್ತಿಯ ಗ್ರಂಥಾಲಯ ಬಳಿ ರಸ್ತೆಬದಿ ವ್ಯಾಪಾರಿಗಳಿಂದ ಬಟ್ಟೆ ಖರೀದಿಸಿದ ಗೌರಮ್ಮ ಜೆರಾಕ್ಸ್ ನೋಟುಗಳನ್ನು ನೀಡಿದ್ದರಿಂದ ಸಂಶಯಗೊಂಡ ವ್ಯಾಪಾರಿ ಸ್ವೀಕರಿಸಲು ನಿರಾಕರಿಸಿದ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದ ಸಂದರ್ಭ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಧಾವಿಸಿದ ವಿದ್ಯಾರಣ್ಯ ಪುರಂ ಠಾಣೆ ಇನ್ಸ್‍ಪೆಕ್ಟರ್ ಓಂಕಾರಪ್ಪ ಹಾಗೂ ಸಿಬ್ಬಂದಿ, ಪರೀಕ್ಷಿಸಿದಾಗ 500 ಹಾಗೂ 2000 ರೂ. ನಕಲಿ ನೋಟುಗಳು ಸಿಕ್ಕಿದವು. ಆಕೆ ನೀಡಿದ ಮಾಹಿತಿಯನ್ವಯ ತಿಲಕ್‍ನಗರದ ಜೆರಾಕ್ಸ್ ಅಂಗಡಿಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, ನೋಟು ಕಲರ್ ಜೆರಾಕ್ಸ್‌ಗೆ ಬಳಸುತ್ತಿದ್ದ ಕಂಪ್ಯೂಟರ್, ಪ್ರಿಂಟರ್ ಹಾಗೂ ಜೆರಾಕ್ಸ್ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ನಿಖಿಲ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Translate »