ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗುವ ಹೊರಟ್ಟಿ ಪ್ರಸ್ತಾಪಕ್ಕೆ ಶಾಸಕ ವಿಶ್ವನಾಥ್ ವಿರೋಧ
ಮೈಸೂರು

ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗುವ ಹೊರಟ್ಟಿ ಪ್ರಸ್ತಾಪಕ್ಕೆ ಶಾಸಕ ವಿಶ್ವನಾಥ್ ವಿರೋಧ

May 20, 2019

ಮೈಸೂರು: ಉಸಿರು ಕಟ್ಟಿಸುವ ವಾತಾವರಣದಲ್ಲಿ ಸರ್ಕಾರ ನಡೆಸುವುದಕ್ಕಿಂತ ಸರ್ಕಾರ ವಿಸರ್ಜಿಸಿ, ಚುನಾವಣೆಗೆ ಹೋಗುವುದೇ ಸೂಕ್ತ ಎಂಬ ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್.ವಿಶ್ವನಾಥ್ ವಿರೋಧ ವ್ಯಕ್ತಪಡಿಸಿ ದ್ದಾರೆ. ಮೈಸೂರಿನಲ್ಲಿ ಭಾನುವಾರ ಮಾಧ್ಯಮಗಳಿಗೆ ಪ್ರತಿ ಕ್ರಿಯಿಸಿದ ಅವರು, ಸರ್ಕಾರ ರಚನೆಯಾಗಿ ಒಂದು ವರ್ಷದಲ್ಲೇ ಮತ್ತೆ ಚುನಾವಣೆಗೆ ನಡೆಸುವುದು ಸರಿಯಲ್ಲ.

ಮೈತ್ರಿ ಸರ್ಕಾರದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಅಷ್ಟು ಮಾತ್ರಕ್ಕೆ ಸರ್ಕಾರ ವಿಸರ್ಜನೆ ಮಾಡೋಕೆ ಆಗುತ್ತಾ?. ಸಮನ್ವಯ ಸಮಿತಿ ಅದ್ಯಕ್ಷರಾದ ಸಿದ್ದರಾಮಯ್ಯನವರು ಇಂದು ದೆಹಲಿಗೆ ಹೋಗಿ ಸಮಸ್ಯೆ ಸರಿಮಾಡಿಕೊಂಡು ಬರುತ್ತಾರೆ. ನಾನು ಬಸವರಾಜ ಹೊರಟ್ಟಿ ಒಟ್ಟಿಗೆ ವಿಧಾನ ಸೌಧ ಪ್ರವೇಶಿಸಿದ್ದೇವೆ. ಅವರು ಪರಿಷತ್‍ನಲ್ಲಿ ನಾನು ವಿಧಾನಸಭೆಯಲ್ಲಿ ಕೆಲಸ ಮಾಡಿದ್ದೇವೆ. ನಾವಿಬ್ಬರೂ ಆತ್ಮೀಯ ಗೆಳೆಯರು. ಆದರೆ ಹೊರಟ್ಟಿ ಅವರ ಈ ಹೇಳಿಕೆ ಸರಿಯಲ್ಲ ಎಂದು ಹೇಳಿದರು.

ಲೋಕಸಭಾ ಚುನಾವಣೆ ಸಂಬಂಧ ಪ್ರತಿಕ್ರಿಯಿಸಿದ ವಿಶ್ವನಾಥ್, ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶವನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಹಾಲಿ ಸರ್ಕಾರದ ವಿರುದ್ದ ಆಕ್ರೋಶವಿರುವ ಜನ ಈ ಬಾರಿ ಸ್ವಯಂಪ್ರೇರಿತವಾಗಿ ಮತದಾನ ಮಾಡಿದ್ದಾರೆ. ಯಾವ ಚಿಂತನೆಯಲ್ಲಿ ಜನ ಮತಹಾಕಿದ್ದಾರೆ ಅಂತ ಊಹಿಸಲು ಆಗುವುದಿಲ್ಲ ಎಂದರು.

ಮಾಧ್ಯಮಗಳ ನಿಯಂತ್ರಣಕ್ಕೆ ಕಾಯ್ದೆ ಜಾರಿಗೆ ತರುವ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಇಂಗಿತಕ್ಕೆ  ಸಹಮತ ವ್ಯಕ್ತಪಡಿಸಿದ ಅವರು, ಮಾಧ್ಯಮಗಳಲ್ಲಿ ಬಿತ್ತರವಾಗುವ ಕೆಲವು ಕಾರ್ಯಕ್ರಮಗಳಿಗೆ ನಿಯಂತ್ರಣ ಅಗತ್ಯವಾಗಿದೆ. ಕೆಲ ಮಾಧ್ಯಮಗಳಲ್ಲಿ ರಾಜಕಾರಣಿಗಳನ್ನ ಬಫೂನ್ ರೀತಿ ಬಿಂಬಿಸುತ್ತಾರೆ. ಸಾರ್ವಜನಿಕ ವಾಗಿ ನಗೆ ಪಾಟಲಿಗೀಡು ಮಾಡಿ, ಮುಜುಗರ ತರುತ್ತಾರೆ. ಇದು ಒಳ್ಳೆಯ ಬೆಳ ವಣಿಗೆ ಅಲ್ಲ. ರಾಜಕಾರಣಿಗಳನ್ನು ಅವಮಾನಿಸುವ ಕೆಲಸ ಮಾಡಬೇಡಿ ಎಂದು ಮಾಧ್ಯಮಗಳಿಗೆ ಕೈ ಮುಗಿದು ಮನವಿ ಮಾಡುತ್ತೇನೆ ಎಂದು ಹೇಳಿದರು.

 

Translate »