ಪ್ರವಾಸಿಗರ ಮೇಲೆ ನಾಲ್ವರಿಂದ ತೀವ್ರ ಹಲ್ಲೆ: ಓರ್ವ ಬಂಧನ
ಮೈಸೂರು

ಪ್ರವಾಸಿಗರ ಮೇಲೆ ನಾಲ್ವರಿಂದ ತೀವ್ರ ಹಲ್ಲೆ: ಓರ್ವ ಬಂಧನ

May 20, 2019

ಮೈಸೂರು: ನಾಲ್ವರ ಗುಂಪೊಂದು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ಭಾನುವಾರ ನಡೆದಿದೆ. ಬೆಂಗಳೂರು ಮೂಲದ ಪ್ರವಾಸಿಗರು ಟೆಂಪೋ ಟ್ರಾವೆಲರ್(ಕೆಎ-51-ಎ-1849)ನಲ್ಲಿ ಚಾಮುಂಡಿ ಬೆಟ್ಟದಿಂದ ಬಲಮುರಿ ಫಾಲ್ಸ್‍ಗೆ ತೆರಳುತ್ತಿದ್ದಾಗ ನಗರದ ಚಾಮರಾಜ ಜೋಡಿ ರಸ್ತೆ, ಶಾಂತಲಾ ಥಿಯೇಟರ್ ಸಿಗ್ನಲ್ ಬಳಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ.

ಟೆಂಪೋ ಟ್ರಾವೆಲರ್ ಸಿಗ್ನಲ್‍ನಲ್ಲಿ ನಿಂತಿದ್ದಾಗ, ರಸ್ತೆ ಪಕ್ಕದಲ್ಲೇ ಮದ್ಯಪಾನ ಮಾಡುತ್ತಿದ್ದ ನಾಲ್ವರು, ಚಾಲಕ ಕಾರ್ತಿಕ್‍ನನ್ನು ದಿಟ್ಟಿಸಿ ನೋಡಿದ್ದಾರೆ. ಇದರಿಂದ ಕೊಂಚ ವಿಚಲಿತನಾದ ಕಾರ್ತಿಕ್, ವಾಹನದಲ್ಲಿ ಮಕ್ಕಳು, ಮಹಿಳೆಯರಿದ್ದಾರೆ ತೊಂದರೆ ಮಾಡಬೇಡಿ ಎಂದು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಆ ನಾಲ್ವರು ಏಕಾಏಕಿ ವಾಹನದೊಳಗೆ ನುಗ್ಗಿ, ಅಲ್ಲಿದ್ದ ಮಹಿಳೆಯೊಬ್ಬರನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಲ್ಲದೆ ರಕ್ಷಣೆಗೆ ಧಾವಿಸಿದ ಪರಮೇಶ್ ಅವರ ತಲೆಗೆ ಬಿಯರ್ ಬಾಟೆಲ್‍ನಿಂದ ಹೊಡೆದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಚಾಲಕ ಕಾರ್ತಿಕ್ ನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆಂದು ತಿಳಿದುಬಂದಿದೆ. ಸಾರ್ವಜನಿಕರಿಂದ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ಮೂವರು ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದಿರುವ ಚಂದು (24)ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗು ತ್ತಿದೆ. ಹಲ್ಲೆಗೊಳಗಾಗಿರುವ ಚಾಲಕ ಕಾರ್ತಿಕ್ ಹಾಗೂ ಪ್ರವಾಸಿಗ ಪರಮೇಶ್ ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರವಾಸಿಗರು ನೀಡಿರುವ ದೂರಿನನ್ವಯ ಕೆ.ಆರ್. ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Translate »