ಮೇಲು, ಕೀಳು ಜಾತಿ ಎಂಬುದು ಮಾನಸಿಕ ರೋಗ
ಮೈಸೂರು

ಮೇಲು, ಕೀಳು ಜಾತಿ ಎಂಬುದು ಮಾನಸಿಕ ರೋಗ

May 20, 2019

ಮೈಸೂರು: ನಾನು ಮೇಲು ಜಾತಿ ಅಥವಾ ಕೀಳು ಜಾತಿ ಎಂಬುದು ಮಾನಸಿಕ ರೋಗದ ಲಕ್ಷಣ ಎಂದು ವಿಶ್ವಮೈತ್ರಿ ಬುದ್ಧವಿಹಾರದ ಬಂತೆ ಕಲ್ಯಾಣಸಿರಿ ಅಭಿಪ್ರಾಯಿಸಿದರು. ಕಲಾಮಂದಿರದ ಕಿರುಮಂದಿರದಲ್ಲಿ ಮಹಾಬೆಳಕು ಸಂಸ್ಥೆ ವತಿಯಿಂದ ಬುದ್ಧ ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ‘ಸಂಗೀತ, ಧ್ಯಾನ, ಕವಿಗೋಷ್ಟಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ ಎಂದರೆ ವ್ಯಕ್ತಿಯಲ್ಲ, ಜ್ಞಾನ. ಬುದ್ಧನಿಗೆ ಶರಣಾಗಿ ಎಂದರೆ ಜ್ಞಾನಕ್ಕೆ ಶರಣಾಗಿ ಎಂದರ್ಥ ಎಂದರು.

ನಗರದಲ್ಲಿದ್ದ ಮಾತ್ರಕ್ಕೆ ನಾಗರಿಕರಾಗಲು ಸಾಧ್ಯವಿಲ್ಲ. ಮೊದಲು ಜೀವನದ ಕ್ರಮ ವನ್ನು ಅರಿತುಕೊಳ್ಳಬೇಕು. ನಮ್ಮನ್ನು ನಿಜವಾಗಿ ತುಳಿಯುತ್ತಿರುವುದು ಅಜ್ಞಾನ ಮತ್ತು ಮೌಢ್ಯತೆ. ಅವುಗಳನ್ನು ಎದುರಿಸಬೇಕಾದರೆ ಸ್ಥಿರತೆ, ಬದ್ಧತೆ, ನೈಜತೆಯನ್ನು ಬೆಳೆಸಿ ಕೊಳ್ಳಬೇಕು ಎಂದರು. ಯುದ್ದದಲ್ಲಿ ಗೆದ್ದವನು ಶೂರನಲ್ಲ. ತನ್ನನ್ನು ತಾನು ಗೆದ್ದವನು ನಿಜವಾದ ಶೂರ. ನಮಗೆ ಸರಿಯಾದ ಗ್ರಹಿಕೆ ಮುಖ್ಯ. ಸತ್ಯವನ್ನು ಇದ್ದಂತೆ ತೋರುವ ಕನ್ನಡಿಯಂತೆ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮನಸ್ಸೇ ಎಲ್ಲದಕ್ಕೂ ಮೂದಾಳು. ಆದ್ದರಿಂದ ಮನಸ್ಸು ಸರಿಯಾದ ಮಾರ್ಗದಲ್ಲಿ ಸಾಗಬೇಕು ಎಂದು ತಿಳಿಸಿದರು.

ಬೆಂಗಳೂರಿನ ಬಿಎಂಎಸ್ ಇಂಜಿನಿಯರ್ ಕಾಲೇಜು ನಿರ್ದೇಶಕ ಪ್ರೊ.ಸಾಕ್ಯ ಶ್ಯಾಮ್ ಮಾತನಾಡಿ, ಬುದ್ದ ಎಂದರೆ ಬುದ್ದಿ ಬಳಸಿ ಜೀವನವನ್ನು ನಡೆಸುವುದು ಎಂದರ್ಥ. ಬೇರೆಯವರನ್ನು ಅನುಸರಿಸಿದೆ ಸ್ವಂತ ಬುದ್ದಿ ಶಕ್ತಿಯಿಂದ ಬೆಳೆಯಬೇಕು. ಜಗತ್ತಿನಲ್ಲಿ ಕತ್ತಲು ಎಲ್ಲೆಡೆ ಇದೆ. ಬೆಳಕಿನ ಕತ್ತಲೆಯನ್ನು ಸೂರ್ಯ ತೊಲಗಿಸುತ್ತಾನೆ. ಆದರೆ, ತನ್ನ ಅಂತರಾತ್ಮದಲ್ಲಿರುವ ಕತ್ತಲನ್ನು ಯಾರಿಂದಲೂ ಹೋಗಲಾಡಿಲು ಸಾಧ್ಯವಿಲ್ಲ. ಅದು ನಿಮ್ಮಿಂದ ಮಾತ್ರ ಸಾಧ್ಯ ಎಂದು ಬುದ್ದರು ತಿಳಿಸಿದ್ದಾರೆ ಎಂದರು. ಬಳಿಕ ನಾರಾಯಣ ಸ್ವಾಮಿ ತಂಡದಿಂದ ಗೀತಗಾಯನ, ಧ್ಯಾನ ಮತ್ತು ಪರಿವರ್ತನಾ ತಂಡದಿಂದ ಬೆಳದಿಂಗಳ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ನಾ.ದಿವಾಕರ್, ಸೋಸಲೆ ಗಂಗಾಧರ್, ಮಹಾಬೆಳಕು ಸಂಸ್ಥೆ ಸ್ಥಾಪಕಿ ಕಾತ್ಯಾಯಿನಿ, ಆರ್.ಕವಿತಾ ಉಪಸ್ಥಿತರಿದ್ದರು.

Translate »