ಕಾಂಗ್ರೆಸ್-ಜೆಡಿಎಸ್ ಮುಖಂಡರ ವರ್ತನೆಯಿಂದಲೇ ಸರ್ಕಾರ ಪತನ
ಮೈಸೂರು

ಕಾಂಗ್ರೆಸ್-ಜೆಡಿಎಸ್ ಮುಖಂಡರ ವರ್ತನೆಯಿಂದಲೇ ಸರ್ಕಾರ ಪತನ

August 5, 2019

ಮೈಸೂರು,ಆ.4(ಎಂಟಿವೈ)-ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ 20 ಶಾಸಕರಾಗಲೀ ಅಥವಾ ಬಿಜೆಪಿಯಾಗಲಿ ಕಾರಣ ವಲ್ಲ. ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳ ಮಾಲೀಕರು ಹಾಗೂ ಮುಖಂಡರ ವರ್ತನೆಯಿಂದಲೇ ಸರ್ಕಾರ ಪತನವಾಗಿದೆ ಎಂದು ಅನರ್ಹಗೊಂಡ ಶಾಸಕ ಅಡಗೂರು ಹೆಚ್.ವಿಶ್ವನಾಥ್ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ರಾಜಕೀಯದಲ್ಲಿ ಹೊಸಶಕೆ ಆರಂಭವಾಗಿದೆ. ಕಳೆದ 14 ತಿಂಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಲು ನಾವು 17 ಮಂದಿ ಕಾರಣರಲ್ಲ. ಎಲ್ಲೆಡೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ 20 ಮಂದಿಯಿಂದಲೇ ಸರ್ಕಾರ ಪತನವಾಗಿದೆ ಎಂದು ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಕಳೆದ ಸರ್ಕಾರದ ಅವಧಿ ಯಲ್ಲಿ ಶಾಸಕರಿಗೆ ಕನಿಷ್ಠ ಗೌರವ ಕೊಡದೆ, ಆಂತರಿಕ ಸಮ ನ್ವಯತೆ ಇಲ್ಲದೆ ಸದಾ ಸಂಶಯದಿಂದ ನೋಡುವುದು ಹೆಚ್ಚಾ ಗಿದ್ದರಿಂದ ದೋಸ್ತಿ ಸರ್ಕಾರ ಪತನವಾಯಿತು. ಇದಕ್ಕೆ ಪಾಲುದಾರ ಪಕ್ಷದ ಮಾಲೀಕರು-ನಾಯಕರೇ ಕಾರಣ ಹೊರತು ನಾವ್ಯಾರು ಹೊಣೆಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕಾಗಿ ಈಗಾಗಲೇ ಕ್ಷೇತ್ರದ ಮತದಾರರಿಗೆ ಕ್ಷಮೆ ಕೇಳಿದ್ದೇನೆ. ಮತ ಕೊಟ್ಟ ಮಾಲೀಕರ ಗೌರವ, ಸ್ವಾಭಿಮಾನ ಉಳಿಸಲು ಇಂತಹ ನಿರ್ಧಾರ ಕೈಗೊಳ್ಳಲಾಯಿತು. ರಾಜ್ಯದ ಇತಿಹಾಸದಲ್ಲಿ ಮೂವರು ಸಚಿವರೂ ಸೇರಿ 20 ಜನ ಶಾಸಕರು ದಂಗೆ ಎದ್ದು ರಾಜೀನಾಮೆ ಕೊಟ್ಟಿದ್ದನ್ನು ಗಮನಿಸಿದರೆ, ಸರ್ಕಾರದ ಆಡಳಿತ ವೈಖರಿಯನ್ನು ವಿಶ್ಲೇಷಿಸಬಹುದು. ಈ ಲಘು ಮನಸ್ಥಿತಿಯೇ ಪತನಕ್ಕೆ ದಾರಿಯಾಯಿತು ಎಂದರು.

ಗೌಡರು ಸದಾ ಸ್ಮರಣೀಯರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕಾಗಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡರಲ್ಲಿ ಕ್ಷಮೆ ಕೋರುತ್ತೇನೆ. ನನಗೆ ಅವಕಾಶ ನೀಡಿ ಶಾಸಕರಾಗಿ ಮಾಡಿ ದ್ದಲ್ಲದೆ ಪ್ರೀತಿ-ವಿಶ್ವಾಸದಿಂದ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದರು. ಆದರೆ, ಸನ್ನಿವೇಶದ ಒತ್ತಡ, ನನಗಾದ ಅವಮಾನದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ನಾನು ಕೆ.ಆರ್.ಪೇಟೆ ಬ್ಲಾಕ್ ಅಧ್ಯಕ್ಷರನ್ನು ನೇಮಿಸಿದರೆ ಮರುದಿನ ಅದಕ್ಕೆ ತಡೆ ಬರುತ್ತದೆ. ಒಬ್ಬರು ಬ್ಲಾಕ್ ಅಧ್ಯಕ್ಷರನ್ನು ನೇಮಿಸುವ ಅಧಿಕಾರ ಇಲ್ಲದ ಹುದ್ದೆ ನನಗೆ ಬೇಡವಾಯಿತು. ಇದು ಕೆ.ಆರ್.ಪೇಟೆ ಶಾಸಕರಿಗೂ ಗೊತ್ತಿತ್ತು. ಮುಂದೆ ಅವರಿಗೆ ಟಿಕೆಟ್ ಸಿಗಲ್ಲ. ಗೌಡರ ಮಗಳೇ ಬರುತ್ತಾರೆಂದು ಬ್ಲಾಕ್ ಅಧ್ಯಕ್ಷರ ನೇಮಕವನ್ನು ತಡೆಹಿಡಿಯಲಾಯಿತು. ಕೆ.ಆರ್.ನಗರದಲ್ಲಿ ನಾನು ಹಾಗೂ ನನ್ನ ಪತ್ನಿ ಮತಚಲಾಯಿಸುವ ವಾರ್ಡ್‍ನಲ್ಲಿ ನನ್ನ ಬೆಂಬಲಿಗನಿಗೆ ಟಿಕೆಟ್ ಕೊಡಿಸಲಾಗದಷ್ಟು ಅಸಹಾಯಕತೆ ನನ್ನದ್ದಾಗಿತ್ತು. ಆದರೂ ಹೆಚ್.ಡಿ.ದೇವೇಗೌಡರು ಸದಾ ಸ್ಮರಣೀಯರು. ದೇವೇಗೌಡರ ಫೋಟೋವನ್ನೂ ನನ್ನ ಮನೆಯ ದೇವರ ಮನೆ ಯಲ್ಲಿ ಇಟ್ಟು ಪೂಜೆ ಮಾಡುತ್ತೇನೆ. ಅವರ ಬಗ್ಗೆ ಅಪಾರ ಗೌರವವಿದೆ ಎಂದರು.

ಹಣಕ್ಕೆ ನಾವು ಮಾರಿಕೊಂಡವರಲ್ಲ: ನಾವ್ಯಾರು ಹಣಕ್ಕಾಗಿ ರಾಜೀನಾಮೆ ಕೊಟ್ಟವರಲ್ಲ, ಮಾರಿಕೊಂಡವರಲ್ಲ. ಪದವಿಗಾಗಿ ಪದವಿ ತ್ಯಾಗ ಮಾಡಿದವರು ಅಲ್ಲ. ಮನಸ್ಸಿಗೆ ಘಾಸಿ ಯಾಗಿ ಅವಮಾನ ಆಗಿದ್ದರಿಂದ ಈ ತೀರ್ಮಾನಕ್ಕೆ ಬಂದಿದ್ದೇವೆ. ನಾವು ಅತೃಪ್ತರಲ್ಲ. ನಮಗೆ ತೃಪ್ತಿ ಇಲ್ಲ ಅಂದವರಿಗೆ ಅತೃಪ್ತಿ ಇತ್ತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈತ್ರಿ ಸರ್ಕಾರದ ನಡವಳಿಕೆ, ಕಾರ್ಯವೈಖರಿ ಬಗ್ಗೆ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ನಿಮ್ಮ ಅತೃಪ್ತಿ, ಸಂಶಯ, ಸಮನ್ವಯ ಇಲ್ಲದಿದ್ದಕ್ಕೆ ಸರ್ಕಾರ ಪತನಕ್ಕೆ ನಾಂದಿಯಾಯಿತು. ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದರೂ ಕೆಲವರು ಈಗಲೂ ನಮಗೆ ಸಿದ್ದರಾಮಯ್ಯ ಸಿಎಂ ಆಗಿ ಕಾಣ್ತಾರೆ ಎನ್ನುತ್ತಿದ್ದರು. ಇದೆಲ್ಲವೂ ಒಂದೊಂದಾಗಿ ಕ್ರೋಢೀಕರಣವಾಗಿ ಸರ್ಕಾರ ಪತನಕ್ಕೆ ಕಾರಣವಾಯಿತು. ನಾವು 20 ಜನರು ದುಡ್ಡಿಗಾಗಿ ಮಾರಿಕೊಂಡವರಲ್ಲ. ಎಂ.ಟಿ.ಬಿ. ನಾಗರಾಜ್, ಮುನಿರತ್ನ, ಎಸ್.ಟಿ.ಸೋಮಶೇಖರ್, ಆರ್.ಶಂಕರ್ ಇವರೆಲ್ಲರೂ ದುಡ್ಡಿನ ಕುಳಗಳು. ಇವರು ಹಣಕ್ಕಾಗಿ ಶಾಸಕ ಸ್ಥಾನ ತ್ಯಾಗ ಮಾಡುವವರೇ? ಎಂದು ಪ್ರಶ್ನಿಸಿದರಲ್ಲದೆ, ಅವರ ತಪ್ಪು ಮುಚ್ಚಿಕೊಳ್ಳಲು ನಮ್ಮಿಂದ ಸÀರ್ಕಾರ ಪತನವಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅಸಮಾ ಧಾನ ಹೊರ ಹಾಕಿದರು. ಮಾಜಿ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ಸದನದ ನೀತಿ ನಿಯಮಾವಳಿಯನ್ನು ಗಾಳಿಗೆ ತೂರಿದ್ದಾರೆ. ಸದನದಲ್ಲಿ ಇಲ್ಲದವರ ಬಗ್ಗೆ ಮಾತನಾಡಲು ಅವಕಾಶ ಕೊಟ್ಟಿದ್ದೂ ಅಲ್ಲದೇ ತಾವು ಮಾತನಾಡಿದ್ದು ಸರಿಯಲ್ಲ. ಸದನದಲ್ಲಿ ಇಲ್ಲದವರ ಬಗ್ಗೆ ಮಾತನಾಡಲು ಅವಕಾಶ ಕೊಡುವ ಅಧಿಕಾರ ಸ್ಪೀಕರ್‍ಗೆ ಇಲ್ಲ. ಸಂಪ್ರದಾಯ, ಕಾನೂನು ಎಂದು ಹೇಳಿಕೊಂಡು ಅದನ್ನೆಲ್ಲಾ ಉಲ್ಲಂಘನೆ ಮಾಡಿ ಮಾತನಾಡಲು ಬಿಟ್ಟಿದ್ದಾರೆ. ಶಾಸಕರನ್ನು ನಿಂದಿಸಲು ಸಮಯ ಮೀಸಲಿಟ್ಟಿರಿ ಎಂದು ಹರಿಹಾಯ್ದರು.

ಕಾಲಾಯ ತಸ್ಮೈಯಿ ನಮಃ: ಬಿಜೆಪಿಯನ್ನು ಕೋಮುವಾದಿ ಎಂದು ಹೇಳಿದ್ದು ನಿಜ. ಈಗ ಕಾಲ ಬದಲಾಗಿದೆ. ಆಯಾಯ ಕಾಲಘಟ್ಟಕ್ಕೆ ಎಲ್ಲವೂ ಬದಲಾಗಿದೆ. ‘ಕಾಲಾಯ ತಸ್ಮೈಯಿ ನಮಃ’ ಆಗಿದೆ. ಆದರೆ ಈಗ ನಾನು ಹಾಗೆ ಹೇಳಲಾರೆ. ಕೋಮುವಾದ, ಜಾತ್ಯತೀತ ವಾದ, ಕಮ್ಯುನಿಸ್ಟ್ ವಾದ ಎಲ್ಲವನ್ನು ನಮ್ಮ ಪರವಾಗಿ ಮಾಡಿಕೊಂಡಿದ್ದೇವೆ ಹೊರತು ಜನರ ಪರವಲ್ಲ. ಜನರಿಗೆ ಊಟಕ್ಕೆ ಅನ್ನ, ಕುಡಿಯಲಿಕ್ಕೆ ನೀರು, ಬದುಕಲು ಸೂರು, ಶಿಕ್ಷಣ, ಉದ್ಯೋಗ ಕೊಡಿ ಅನ್ನುತ್ತಿದ್ದಾರೆ ಹೊರತು ನಮ್ಮ ಸಿದ್ಧಾಂತವನ್ನಲ್ಲ ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡರು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದೆ. ಎಲ್ಲವೂ ಬದಲಾಗಿದೆ. ಕಾಲವೂ ಬದಲಾಗಿದೆ. ದೇಶವೂ ಬದಲಾಗಿದೆ. ಆಯಾಯ ಕಾಲಘಟ್ಟದಲ್ಲಿ ಜನರ ನಂಬಿಕೆ, ಬದುಕಲು ಅವಕಾಶ ಕೊಡುವುದು ಮುಖ್ಯ ಎನ್ನುವ ಮೂಲಕ ಬಿಜೆಪಿ ಸೇರುವಿರಾ ಎಂದು ಕೇಳಿದ ಪ್ರಶ್ನೆಗೆ ಬಿಜೆಪಿ ಮೇಲಿನ ಮೃದು ಧೋರಣೆ ವ್ಯಕ್ತಪಡಿಸಿದರು.

ದೇವೇಗೌಡರ ಕುಟುಂಬಕ್ಕೆ ವಿಷವುಣಿಸಿದ ಕೀರ್ತಿ ಸಾ.ರಾ.ಮಹೇಶ್‍ಗೆ ಸಲ್ಲುತ್ತದೆ
ಮೈಸೂರು,ಆ.4(ಎಂಟಿವೈ)- ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತನ್ನದೇ ಆದ ವೈಯಕ್ತಿಕ ವರ್ಚ ಸ್ಸಿದೆ. ಆದರೆ ಅಪ್ರಬುದ್ಧ ರಾಜಕಾರಣಿ, ಚಾಡಿ ಹೇಳುವ ತೀಟೆ ಬುದ್ಧಿ ಹೊಂದಿ ರುವ ಸಾ.ರಾ.ಮಹೇಶ್ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬಕ್ಕೆ ವಿಷವುಣಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಅಡಗೂರು ಹೆಚ್.ವಿಶ್ವನಾಥ್ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಸಾ.ರಾ. ಮಹೇಶ್ ಅಪ್ರಬುದ್ಧ ರಾಜಕಾರಣಿ ಎಂದು ತನ್ನ ನಡವಳಿಕೆಯಿಂದಲೇ ತೋರಿಸಿ ಕೊಳ್ಳುತ್ತಿದ್ದಾರೆ. ಮಂತ್ರಿಯಾದ ನಂತರ ಅವರ ವರ್ತನೆಯಲ್ಲಿ ಮಿತಿ ಮೀರಿದ ಬದ ಲಾವಣೆಯಾಗಿದೆ. ನಾನು 28 ಕೋಟಿ ರೂ. ಸಾಲ ಮಾಡಿದ್ದು, ಅದನ್ನು ತೀರಿ ಸಲು ಒಪ್ಪಿಗೆ ಸೂಚಿಸಿದ್ದಾಗಿ ಸದನದಲ್ಲಿ ಹೇಳಿದ್ದಾರೆ. ಅಲ್ಲದೆ, ಅಪ್ಪನಾಣೆ, ನಮ್ಮ ವ್ವನ ಮೇಲಾಣೆ, ಮಕ್ಕಳಾಣೆ ಅಂತ ಸದನ ದಲ್ಲಿ ಹೇಳಿದ್ದಾರೆ. ಸದನದಲ್ಲಿ ಯಾವ ಪದ ಬಳಸಬೇಕೆಂಬ ಅರಿವು ಅವರಿಗಿಲ್ಲ. ಇಂತ ವರೆಲ್ಲಾ ಮಂತ್ರಿಗಳಾಗಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾ.ರಾ.ಮಹೇಶ್ ವಿಷವುಣಿಸಿದ್ದು: ಲೋಕ ಸಭಾ ಚುನಾವಣೆಯಲ್ಲಿ ಮಂಡ್ಯದ ಜನರು ದೇವೇಗೌಡರ ಕುಟುಂಬಕ್ಕೆ ವಿಷ ವುಣಿಸಿ ದ್ದರು ಎಂದು ಕುಮಾರಸ್ವಾಮಿ ಹೇಳಿ ದ್ದಾರೆ. ಮಂಡ್ಯದ ಜನರಾಗಲೀ, ನಾಡಿನ ಜನರಾಗಲೀ ಯಾವತ್ತು ರಾಜಕೀಯ ನಾಯಕರಿಗೆ ವಿಷ ಉಣಿಸಿಲ್ಲ. ನಿಮ್ಮ ಕುಟುಂ ಬಕ್ಕೆ ವಿಷ ಉಣಿಸಿದ ಕೀರ್ತಿ ಸಾ.ರಾ. ಮಹೇಶ್‍ಗೆ ಸಲ್ಲುತ್ತದೆ ಎಂದು ದೂರಿದರು.

ನಿಮ್ಮ ನಡವಳಿಕೆಯಲ್ಲಿ ಏನಾಯ್ತು? ಚಾಡಿ ಹೇಳೋದನ್ನ ಕೇಳುವುದು. ನಲ ವತ್ತು ವರ್ಷದಿಂದ ಕೆ.ಆರ್.ನಗರದಲ್ಲಿ ನಿಮ್ಮ ಪಕ್ಷಕ್ಕೆ ವೋಟ್ ಹಾಕಿ ಬರ್ತಾ ಇದ್ದ ನನ್ನ ಕೇರಿಯವನಿಗೆ ಟಿಕೆಟ್ ಕೊಡಲು ಸಾಧ್ಯವಾಗಲಿಲ್ಲ. ಹಾಳಾಗಿ ಹೋಗಲಿ ಎಂದು ಸುಮ್ಮನಿದ್ದೆ. ಲೋಕಸಭಾ ಚುನಾ ವಣೆಯಲ್ಲಿ ರಾಹುಲ್‍ಗಾಂಧಿಗೆ ಮಾಲಾ ರ್ಪಣೆ ಮಾಡಿ ಶುಭಾಶಯ ಹೇಳಲು ರೆಡಿಯಾಗಿದ್ದೆ. ಏಕೆಂದರೆ 1978ರಲ್ಲಿ ಇಂದಿರಾಗಾಂಧಿ, 1983ರಲ್ಲಿ ರಾಜೀವ್ ಗಾಂಧಿ ನನ್ನ ಪರ ಪ್ರಚಾರ ಮಾಡಲು ಬಂದಿದ್ದರು. ಈಗ ರಾಹುಲ್ ಗಾಂಧಿ ಚುನಾವಣೆ ಪ್ರಚಾರಕ್ಕೆ ಬರ್ತಾ ಇದ್ದಾರೆ ಎಂದು ಹೇಳಿ ಭೇಟಿ ಮಾಡಬೇಕು ಅಂದಿದ್ದೆ. ಆದರೆ, ನನಗೆ ಒಂದು ಮೆಸೇಜ್ ಬಂತು. ವೇದಿಕೆಯಲ್ಲಿ ಸಿದ್ದರಾಮಯ್ಯ ಇರುತ್ತಾರೆ. ನೀವು ಬರೋದು ಬೇಡ ಅಂದರು. ನನಗೂ-ಸಿದ್ದರಾಮಯ್ಯ ಅವರಿಗೂ ಮಧ್ಯೆ ಒಡಕು ಉಂಟು ಮಾಡಿದ್ದು ಸಾ.ರಾ. ಮಹೇಶ್. ಕಾಂಗ್ರೆಸ್‍ನಲ್ಲಿ ಕೊಟ್ಟ ಕಿರುಕುಳ ಸಹಿಸದೆ ಜೆಡಿಎಸ್‍ಗೆ ಬಂದರೆ ಇಲ್ಲಿಯೂ ಅದೇ ಆಯ್ತು. ಸಮನ್ವಯ ಸಮಿತಿ ಅಂದರೆ ಸಿದ್ದ ರಾಮಯ್ಯ ಇದ್ದಾರೆ ಅಂದರು. ಸಮಿತಿಗೆ ವಿಶ್ವನಾಥ್ ತೆÀಗೆದುಕೊಳ್ಳಿ ಎಂದು ಹೇಳುವ ನೈತಿಕ ಬಲ ಇರಲಿಲ್ಲವೇ? ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಸರ್ಕಾರ ನಡೆಸೋದು ಹೇಗೆ ಮತ್ತೆ, ಅವರೊಬ್ಬರೇ ಇದ್ದರೆ ಸಾಕಾ ಎಂದು ಪ್ರಶ್ನಿಸಿದರು.

ಚರ್ಚೆಗೆ ಸಿದ್ಧ: ನಾವು ಯಾರೂ ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ಇದನ್ನು ಅಪ್ರಬುದ್ಧ ಸಾ.ರಾ.ಮಹೇಶ್ ಹೇಳಿರುವ ಮಾತು. ನಾವು ದುಡ್ಡಿಗಾಗಿ ಮಾರಿಕೊಂಡವರಲ್ಲ. ಸಾ.ರಾ. ಮಹೇಶ್ ದುಡ್ಡಿನವರೇ ಹೊರತು ನಾವು ಅಲ್ಲ ಎಂದು ತಿರುಗೇಟು ನೀಡಿದರು. ಸದನ ದಲ್ಲಿ ಮಾತನಾಡುವ ಮಾತಿಗೆ ಮಾನನಷ್ಟ ಮೊಕದ್ದಮೆ ಹಾಕಲು ಬರಲ್ಲ. ಸಾರ್ವಭೌಮ ಸದನ ಬಿಟ್ಟು ಹೊರಗೆ ಬಂದು ಮಾತನಾಡಲಿ ಅಂದಿದ್ದೆ. ಈಗಲೂ ಅದರ ಬಗ್ಗೆ ಚರ್ಚೆಗೆ ನಾನು ಸಿದ್ಧನಿದ್ದೇನೆ. ವಿಶ್ವನಾಥ್ 28 ಕೋಟಿಗೆ ಸೇಲ್ ಆಗಿದ್ದಾರೆಂದು ಒಂದು ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇಲ್ಲೊಬ್ಬ ಪ್ರೆಸ್ ಕ್ಲಬ್‍ನಲ್ಲೇ ಇದ್ದ. ಆತ ಯುಟ್ಯೂಬ್‍ನಲ್ಲಿ ವಿಶ್ವನಾಥ್ ಸೇಲ್ ಆಗಿದ್ದಾರೆಂದು ವಿಡಿಯೋ ಮಾಡಿ ಅಪ್‍ಲೋಡ್ ಮಾಡಿದ್ದ. ಸಾ.ರಾ.ಮಹೇಶ್‍ನಿಗೆ ಆತ ಸೇಲ್ ಆಗಿ ಈ ಕೆಲಸ ಮಾಡಿದ್ದ. ಆತನಿಗೆ ಲಾಯರ್ ನೋಟಿಸ್ ಕಳುಹಿಸಿದ್ದೇನೆ ಎಂದರು.

ನನ್ನ ಕುಟುಂಬಕ್ಕೆ ಬ್ಲಾಕ್‍ಮೇಲ್ ಮಾಡ್ತೀರಾ: ಸಿದ್ದರಾಮಯ್ಯ ಸರ್ಕಾರ ಇದ್ದಾಗ ಇಂಜಿನಿಯರ್ ಆಗಿರುವ ನನ್ನ ಅಳಿಯನನ್ನು ಮೂರು ವರ್ಷ ಬಾಗಲಕೋಟೆಗೆ ವರ್ಗಾವಣೆ ಮಾಡಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೇಲೆ ಅಳಿಯನನ್ನು ಕರೆಸಿ ಸೇವೆಯಿಂದ ವಜಾ ಮಾಡ್ತೀವಿ ಎಂದು ಬೆದರಿಕೆ ಹಾಕೋದು, ಬ್ಲಾಕ್‍ಮೇಲ್ ಮಾಡ್ತೀರಾ? ಇಷ್ಟು ವರ್ಷ ರಾಜಕಾರಣ ಮಾಡಿಕೊಂಡು ಬಂದ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜೀನಾಮೆ ನೀಡಬೇಕಿತ್ತು: ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ದಿನವೇ ಮೈತ್ರಿ ಸರ್ಕಾರ ಪತನವಾಗಬೇಕಾಗಿತ್ತು. ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷ ಸ್ಥಾನದಿಂದ ರಾಹುಲ್ ಗಾಂಧಿ ರಾಜೀನಾಮೆ ನೀಡಿದರು. ನಾನು ಕೂಡ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಆದರೆ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಯಾಕೆ ರಾಜೀನಾಮೆ ನೀಡಲಿಲ್ಲ. ಗೂಟ ಹೊಡೆದುಕೊಂಡು ಕುಳಿತಿದ್ದೀರಿ ಎಂದು ಕಿಡಿಕಾರಿದರಲ್ಲದೆ, ಯಾವ ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ಪಕ್ಷ ಬಿಟ್ಟೆನೋ, ಅದೇ ಸಿದ್ದರಾಮಯ್ಯನಿಂದ ಜೆಡಿಎಸ್‍ನಲ್ಲೂ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಇದಕ್ಕೆ ಪಕ್ಷದ ಮುಖಂಡರು ಸಾಥ್ ನೀಡಿದರು ಎಂದರು.

ನಾನು ಬೆಂಗಳೂರು ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿ ಮುಗಿಸಿ ಬರುವಾಗ ಸುಮಲತಾ ಅವರು ಬಂದರು. ‘ಅಣ್ಣ ಮರೆತುಬಿಟ್ರಾ. ನಿಮ್ಮ ಆಶೀರ್ವಾದ ಬೇಕು ಅಂದ್ರು’. ‘ಏನಮ್ಮಾ ಅಂಬರೀಶ್ ಇದ್ದಾಗ ನಿಮ್ಮ ಮನೆಯಲ್ಲಿ ಎಷ್ಟು ದಿನ ಊಟ ಮಾಡಿಲ್ಲ. ನಿಮಗೆ ಒಳ್ಳೆಯದು ಆಗಲಿ’ ಎಂದಿದ್ದೆ. ಇದು ರಾಜಕೀಯ ಸಂಸ್ಕøತಿ, ಗೌರವ ಇದ್ದವರು ಹೇಳುವ ಮಾತು. ಇದನ್ನೇ ವಿಶ್ವನಾಥ್ ಸುಮಲತಾ ಅವರಿಗೆ ಒಳ್ಳೆಯದು ಆಗಲಿ ಅಂದು ಬಿಟ್ಟರು ಎಂದು ಚಾಡಿ ಹೇಳಿದರು. ಒಬ್ಬ ಸಚಿವರಾಗಿ ಸದನದಲ್ಲಿ ಹೇಗೆ ಮಾತನಾಡಬೇಕು ಅನ್ನುವುದು ಗೊತ್ತಿಲ್ಲ ದವರು ಸಚಿವರು? ಸಾ.ರಾ.ಮಹೇಶ್ ಅವರ ಮನೆದೇವರೇ ಸುಳ್ಳಿನ ದೇವರು ಎಂದರು.

ನಾನು ಕೆ.ಆರ್.ನಗರಕ್ಕೆ ಹೋಗ್ತಾ ಇದ್ದಾಗ ನಿಮ್ಮ ಜತೆ ಮಾತನಾಡಬೇಕು ಬನ್ನಿ ಎಂದು ಮಹೇಶ್ ಕರೆದರು. ಆಗ ಎಲ್ಲಿಗೆ ಬರಬೇಕು ಅಂದಾಗ ತೋಟದ ಮನೆಗೆ ಬನ್ನಿ ಅಂದರು. ನನಗೆ ಅವರ ತೋಟನೂ ಗೊತ್ತಿರಲಿಲ್ಲ. ರಸ್ತೆಯಲ್ಲೇ ಕಾರು ನಿಲ್ಲಿಸಿ ಹೋಗಿದ್ದೆ. ಕುಮಾರಸ್ವಾಮಿ ಅವರು ನಿಮಗೆ ಸಾಲ ಇದೆ ಎಂದು ಹೇಳ್ತಾ ಇದ್ರು. ಎಷ್ಟು ಇದೆ ಅಂದಾಗ ನಾನು ಒಂದು ಚೀಟಿ ಕೊಟ್ಟಿದ್ದು ನಿಜ. ಆದರೆ, ಸಾಲ ತೀರಿಸದಿದ್ದರೆ ಬಿಜೆಪಿಗೆ ಹೋಗ್ತೀನಿ ಎಂದು ಮಾತನಾಡಿರಲಿಲ್ಲ. ಈ ಬಗ್ಗೆ ನಾನು ಯಾವುದೇ ವೇದಿಕೆಯಲ್ಲೂ ಚರ್ಚೆಗೆ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

ಪತ್ರಕರ್ತರ ಭವನ ಸುತ್ತ ಬಿಗಿ ಬಂದೋಬಸ್ತ್
ಎ.ಹೆಚ್.ವಿಶ್ವನಾಥ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹಲವು ದಿನಗಳ ಬಳಿಕ ಮೈಸೂರಿಗೆ ಆಗಮಿಸಿ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸುವ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಲಿದ್ದಾರೆ ಎಂಬ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಪತ್ರಕರ್ತರ ಭವನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಒಬ್ಬರು ಎಸಿಪಿ, ಮೂವರು ಇನ್ಸ್‍ಪೆಕ್ಟರ್, ಐವರು ಪಿಎಸ್‍ಐ, ಸೇರಿದಂತೆ 45ಕ್ಕೂ ಹೆಚ್ಚು ಪೊಲೀಸರು ಹಾಗೂ ಎರಡು ಕೆಎಸ್ ಆರ್‍ಪಿ ತುಕಡಿ ನಿಯೋಜಿಸಲಾಗಿತ್ತು. ಪತ್ರಕರ್ತರನ್ನು ಹೊರತುಪಡಿಸಿ ಬೇರ್ಯಾರಿಗೂ ಪತ್ರಕರ್ತರ ಭವನಕ್ಕೆ ಪ್ರವೇಶ ನಿರಾಕರಿಸಲಾಯಿತು. ಅಕ್ಕನಬಳಗ ರಸ್ತೆ, ತ್ಯಾಗರಾಜ ರಸ್ತೆ ಸೇರಿ ಇನ್ನಿತರ ಕಡೆಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪತ್ರಿಕಾ ಗೋಷ್ಠಿ ಮುಗಿಸಿ ವಾಪಸ್ ಹೋಗುವ ತನಕ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಆರಂಭಕ್ಕೂ ಮುನ್ನ ಪೊಲೀಸರನ್ನ ನಿಯೋಜನೆ ಮಾಡಿದ್ದರ ಬಗ್ಗೆ ವಿಶ್ವನಾಥ್ ಅಚ್ಚರಿಗೊಂಡರಲ್ಲದೆ, ಇರಲಿ ಬಿಡಿ ಏನೂ ಮಾಡಲಾಗದು ಎಂದರು.

Translate »