ಮೈಸೂರು,ಆ.5(ಎಸ್‍ಬಿಡಿ)- ಖಾಸಗಿ ಕ್ಯಾಬ್ ಸರ್ವೀಸ್ ಮೂಲಕ ಬಾಡಿಗೆ ಪಡೆದ ಕಾರನ್ನೇ ಕಳ್ಳತನ ಮಾಡಿರುವ ಮತ್ತೊಂದು ಪ್ರಕರಣ ಮೈಸೂರಿನಲ್ಲಿ ನಡೆದಿದೆ.
ಇಮ್ಯಾನುವೆಲ್ ಸಚ್ಚಿನ್ ಎಂಬುವರು ಕಾರು ಕಳೆದು ಕೊಂಡಿದ್ದಾರೆ. ಆ.3ರಂದು ರಾತ್ರಿ 7.30ರಲ್ಲಿ ಅರ್ಜುನ್ ಹೆಸರಿನಲ್ಲಿ ಕಾರು ಬಾಡಿಗೆ ಪಡೆದಿದ್ದ ಖದೀಮ, ಹರ್ಷ ರಸ್ತೆಯಲ್ಲಿರುವ ಪ್ಯಾಲೇಸ್ ಪ್ಲಾಜಾ ಹೊಟೇಲ್ ಬಳಿ ಕಾರನ್ನೇರಿ ಶ್ರೀರಂಗಪಟ್ಟಣ ಸಮೀಪ ದರಸನಗುಪ್ಪೆ ಗ್ರಾಮಕ್ಕೆ ಹೋಗುವಂತೆ ತಿಳಿಸಿದ್ದಾನೆ. ಅಲ್ಲಿ ಮುಖ್ಯರಸ್ತೆ ಯಲ್ಲಿ ಮಾತ್ರ ಸರ್ವೀಸ್ ಇರುವುದಾಗಿ ಗ್ರಾಮದೊಳಗೆ ಕಾರು ಚಾಲಿಸಲು ನಿರಾಕರಿಸಿದಾಗ ವಾಪಸ್ಸು ಮೈಸೂರಿನ ಪ್ರೇಮ್ ಇಂಡಸ್ಟ್ರೀಸ್ ಯುನಿಟ್-2ರ ಬಳಿ ಕರೆದು ಕೊಂಡು ಬಂದಿದ್ದಾನೆ. ಅಲ್ಲಿ ಸ್ನೇಹಿತನ ಭೇಟಿಯಾಗಿ ಬರುವುದಾಗಿ ಕಾರಿನಿಂದ ಇಳಿದು ಹೋದ ಖದೀಮ, ಸೆಕ್ಯೂರಿಟಿಯೊಂದಿಗೆ ಕೆಲ ಸಮಯ ಮಾತನಾಡಿ ಮತ್ತೆ ಕಾರಿನ ಬಳಿ ಬಂದಿದ್ದಾನೆ. ಸೆಕ್ಯೂರಿಟಿ ಸರಿಯಾಗಿ ಹೇಳು ತ್ತಿಲ್ಲ. ದಯವಿಟ್ಟು ನೀವೊಮ್ಮೆ ಅವನನ್ನು ಮಾತನಾಡಿಸಿ ಎಂದು ಚಾಲಕ ಇಮ್ಯಾನುವೆಲ್ ಸಚಿನ್‍ರನ್ನು ಕೇಳಿ ಕೊಂಡಿದ್ದಾನೆ. ಕಾರಿನ ಕೀ, ಮೊಬೈಲ್ ಹಾಗೂ 10 ಸಾವಿರ ರೂ. ಹಣ ಅಲ್ಲಿಯೇ ಬಿಟ್ಟು ಚಾಲಕ ಕೆಳಗಿಳಿದು ಸೆಕ್ಯೂರಿಟಿ ಬಳಿ ಹೋಗುವಷ್ಟರಲ್ಲಿ ಖದೀಮ ಕಾರು ಚಾಲಿಸಿಕೊಂಡು ಪರಾರಿಯಾಗಿದ್ದಾನೆ. ಮೋಸದ ಜಾಲಕ್ಕೆ ಸಿಲುಕಿ ಸ್ವಿಫ್ಟ್ ಡಿಸೈರ್ (ಕೆಎ-09, ಸಿ-9294) ಕಾರು, ಮೊಬೈಲ್ ಹಣ ಕಳೆದುಕೊಂಡಿರುವ ಇಮ್ಯಾನುವೆಲ್ ವಿಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಮೈಸೂರಿನಲ್ಲಿ ಈ ಹಿಂದೆ ಇಂತಹ 2 ಪ್ರಕರಣಗಳು ನಡೆದಿವೆ.