ಮೈಸೂರಲ್ಲಿ ಇನ್ನೂ 3 ದಿನ ಜಿಟಿಜಿಟಿ ಮಳೆ
ಮೈಸೂರು

ಮೈಸೂರಲ್ಲಿ ಇನ್ನೂ 3 ದಿನ ಜಿಟಿಜಿಟಿ ಮಳೆ

August 6, 2019

ಮೈಸೂರು,ಆ.5(ಆರ್‍ಕೆ)-ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಇನ್ನೂ 3 ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಡಗು, ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದ್ದು, ಪರಿಣಾಮ ಮೈಸೂರು ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಮಳೆ ಸುರಿಯುತ್ತಿದೆ. ಮೋಡ ಮುಸುಕಿದ ವಾತಾವರಣವಿದ್ದು, ಮಧ್ಯಾಹ್ನ 12.45 ಗಂಟೆಯಿಂದ ನಿರಂತರವಾಗಿ ಜಿಟಿಜಿಟಿ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ಶಾಲಾ-ಕಾಲೇಜು, ಕಚೇರಿ, ಕೈಗಾರಿಕೆಗಳಿಗೆ ತೆರಳುವವರು, ಕೂಲಿ ಕಾರ್ಮಿಕರುಗಳಿಗೆ ತೊಂದರೆಯಾಗಿದ್ದು, ಜನಜೀವನಕ್ಕೆ ತೊಂದರೆಯಾಗಿದೆ. ದೇವರಾಜ ಮಾರುಕಟ್ಟೆ, ಕೆ.ಆರ್.ಮಾರುಕಟ್ಟೆ, ಮಂಡಿ ಮಾರುಕಟ್ಟೆ, ಚಿಕ್ಕಗಡಿಯಾರ, ಮಕ್ಕಾಜಿ ಚೌಕ, ಬಂಡೀ ಪಾಳ್ಯ ಎಪಿಎಂಸಿ ಯಾರ್ಡ್ ಸೇರಿದಂತೆ ಮೈಸೂರಿನ ಹಲವು ವಾಣಿಜ್ಯ ಕೇಂದ್ರ ಗಳಲ್ಲಿ ವ್ಯಾಪಾರ-ವಹಿವಾಟಿಗೆ ಮಳೆಯಿಂದ ತೊಂದರೆ ಉಂಟಾಗಿದ್ದು, ಜನರು ಆಟೋ, ಕಾರು, ಬಸ್ಸುಗಳನ್ನು ಅವಲಂಬಿಸುವಂತಾಗಿತ್ತು. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಕಾವೇರಿ ಜಲಾನಯನ ಭಾಗದಲ್ಲಿ ಒಳಹರಿವಿನ ಪ್ರಮಾಣವೂ ಹೆಚ್ಚಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

Translate »