ಚುನಾವಣಾ ರಾಜಕಾರಣದಿಂದ ಜಿಟಿಡಿ ನಿವೃತ್ತಿ
ಮೈಸೂರು

ಚುನಾವಣಾ ರಾಜಕಾರಣದಿಂದ ಜಿಟಿಡಿ ನಿವೃತ್ತಿ

August 5, 2019

ಮೈಸೂರು, ಆ.4(ಎಸ್‍ಬಿಡಿ)- ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಚುನಾವಣಾ ರಾಜ ಕಾರಣದಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ ಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದರ ಬೆನ್ನಲ್ಲೇ ಭಾನುವಾರ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇ ಗೌಡರು, 50 ವರ್ಷದಿಂದ ಹಿರಿಯ ಮುತ್ಸದ್ಧಿ ಗಳೊಂದಿಗೆ ರಾಜಕಾರಣ ಮಾಡಿದ್ದೇನೆ. ಈಗಿನ ಪರಿಸ್ಥಿತಿಯಲ್ಲಿ ರಾಜಕಾರಣ ಸಾಕು ಎನಿಸಿದೆ. ಬಹಳಷ್ಟು ನೊಂದಿದ್ದೇನೆ. ಹಾಗಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದು ಕ್ಷೇತ್ರದ ಜನರ ಸೇವೆ ಮಾಡಬೇ ಕೆಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಜೊತೆಗೆ ತಮ್ಮ ರಾಜಕೀಯ ಜೀವನವನ್ನೂ ಸ್ಮರಿಸಿಕೊಂಡ ಜಿಟಿಡಿ, ರಾಜ್ಯ ಮಾತ್ರವಲ್ಲ ಇಡೀ ದೇಶದ ಜನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ನೋಡಿದ್ದಾರೆ. ಜನರ ಆಶೀರ್ವಾದದಿಂದ 5 ದಶಕಗಳಿಂದ ರಾಜ ಕೀಯ ಜೀವನದಲ್ಲಿದ್ದೇನೆ. ಹಿರಿಯರೊಂ ದಿಗೆ ಕೆಲಸ ಮಾಡಿದ್ದೇನೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ರಾಜಕೀಯ ಸಾಧ್ಯವಿಲ್ಲ. ನಾನು ಕಳೆದ 12 ತಿಂಗಳು ಸಚಿವನಾಗಿ ಕೆಲಸ ಮಾಡಿದ್ದೇನೆ. ಸರ್ಕಾರದಲ್ಲಿ ಏನಾಯ್ತು. ನಮ್ಮ ಜಿಲ್ಲೆಯಲ್ಲಿ ಯಾವ ರೀತಿ ಆಡಳಿತವಾಯ್ತು, ನನಗೆ ಏನಾಯ್ತು ಎಲ್ಲವನ್ನೂ ಈಗ ಹೇಳು ವುದು ಉಚಿತವಲ್ಲ. ನಾನು ಅನುಭವಿಸಿರುವ ನೋವು ದೇವರಿಗೆ ಮಾತ್ರ ಗೊತ್ತು. ನಾನು ಪ್ರಾಮಾಣಿಕವಾಗಿ ದೇವೇಗೌಡರು, ಕುಮಾರಸ್ವಾಮಿಯನ್ನು ದೇವರು ಅಂದು ಕೊಂಡು ಕೆಲಸ ಮಾಡಿದ್ದೇನೆ. ನನಗೆ ಚುನಾವಣಾ ರಾಜಕೀಯ ಸಾಕಾಗಿದೆ ಎಂದು ಇವರಿಬ್ಬರಿಗೂ ಹೇಳಿದ್ದೇನೆ ಎಂದರು.

ಯಾರ ಹಂಗಿನಲ್ಲೂ ನಾನು ಬದುಕಿಲ್ಲ. ನನಗೆ ಯಾರೂ ರಾಜಕೀಯ ಗುರುಗಳಿಲ್ಲ. ಕುಮಾರಸ್ವಾಮಿ, ದೇವೇಗೌಡರು, ಸಿದ್ದರಾಮಯ್ಯ ಯಾರಿಂದಲೂ ಈವರೆಗೆ ಒಂದು ಪೈಸೆ ಸಹಾಯವಾಗಿಲ್ಲ. `ಕುಮಾರಪರ್ವ’ ಸಮಾವೇಶ ಹಾಗೂ ಚುನಾವಣೆಗಳಿಗೆ ಜೆಡಿಎಸ್‍ನಿಂದ ಒಂದು ರೂಪಾಯಿ ಹಣ ಪಡೆದಿಲ್ಲ. ನನ್ನ ಸ್ವಂತ ಹಣದಿಂದ ಎಲ್ಲವನ್ನು ಮಾಡಿದ್ದೇನೆ. ಈ ಹಿಂದೆ ಮುಂದಿನ ಚುನಾವಣೆಯಲ್ಲಿ ಹರೀಶ್‍ಗೌಡನೇ ಅಭ್ಯರ್ಥಿ ಅಂದಿದ್ದರು. ಎಂಎಲ್‍ಸಿ ಮಾಡುತ್ತೇವೆ ಎಂದಿದ್ದರು. ಆದರೆ ಯಾವುದೂ ಆಗಲಿಲ್ಲ. ಮೈತ್ರಿ ಸರ್ಕಾರದಲ್ಲಿ ನನಗೆ ಉನ್ನತ ಶಿಕ್ಷಣ ಖಾತೆ ಬೇಡ ಎಂದು ಒಂದು ತಿಂಗಳು ದೂರ ಸರಿದಿದ್ದೆ. ನನಗಿಷ್ಟವಾದ ಖಾತೆ ಸಿಗಲಿಲ್ಲ. ಹೀಗೆ ಹೇಳುತ್ತಾ ಹೋದರೆ ಸಾಕಷ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ ಜಿಟಿಡಿ, ಆರಂಭದಿಂದ ಈವರೆಗೂ ಕಾರ್ಯಕರ್ತರು ನನಗೆ ಯಾವುದೇ ರೀತಿ ತೊಂದರೆ ಮಾಡಿಲ್ಲ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ನನಗೆ ಅಭೂತಪೂರ್ವ ಗೆಲುವು ತಂದು ಕೊಟ್ಟರು. ಹಗಲಿರುಳು ನನಗಾಗಿ ಶ್ರಮಿಸಿದ ಕಾರ್ಯಕರ್ತರಿಗೂ ಧನ್ಯವಾದ ಅರ್ಪಿಸಲು ಸಾಧ್ಯವಾಗಿಲ್ಲ. ನೀವು ಮಂತ್ರಿ ಆಗುವುದಕ್ಕಿಂತ ಬರೀ ಶಾಸಕರಾಗಿದ್ದಾಗಲೇ ಚೆನ್ನಾಗಿತ್ತು ಎಂದು ಜನ ಬೇಸರ ವ್ಯಕ್ತಪಡಿಸುತ್ತಿದ್ದರು. ಹಾಗಾಗಿ ಚುನಾವಣಾ ರಾಜ ಕಾರಣದಿಂದ ನಿವೃತ್ತಿ ಪಡೆದು ಜನರೊಂದಿಗೆ ಬೆರೆಯಬೇಕೆಂದು ತೀರ್ಮಾನಿಸಿದ್ದೇನೆ ಎಂದು ಹೇಳಿದರು.

ಹುಣಸೂರು ವಿಧಾನಸಭಾ ಉಪ ಚುನಾವಣೆಗೆ ಸ್ಪರ್ಧಿಸು ವಂತೆ ನೂರಾರು ಕಾರ್ಯಕರ್ತರು ಜಿ.ಡಿ.ಹರೀಶ್‍ಗೌಡರನ್ನು ಒತ್ತಾಯಿಸಿದ್ದಾರೆ. ಅದು ಹರೀಶ್‍ಗೌಡನ ವೈಯಕ್ತಿಕ ವಿಚಾರ. ಈವರೆಗೂ ಅವನು ಸ್ವಂತ ಶಕ್ತಿಯಿಂದ ಬೆಳೆದಿದ್ದಾನೆ. ಕುಮಾರ ಸ್ವಾಮಿ ಅವರಾಗಲಿ, ನಾನಾಗಲಿ ಯಾರೂ ಅವನಿಗೆ ಸಹಾಯ ಮಾಡಿಲ್ಲ. ಹುಣಸೂರು ವಿಚಾರ ಹರೀಶ್‍ಗೌಡ ಹಾಗೂ ಅಲ್ಲಿನ ಜನರಿಗೆ ಸಂಬಂಧಿಸಿದ್ದು. ಉಪಚುನಾವಣೆಗೆ ಮಗನನ್ನು ನಿಲ್ಲಿಸ್ತಿನಿ, ಗೆಲ್ಲಿಸ್ತೀನಿ ಅನ್ನೋ ವಿಚಾರಕ್ಕೆ ನಾನು ಕೈ ಹಾಕುವುದಿಲ್ಲ. ನಾನು ನೆಮ್ಮದಿಯಾಗಿ ಚಾಮುಂಡೇಶ್ವರಿ ಕ್ಷೇತ್ರದ ಜನತೆ ಜೊತೆ ಸೇವೆ ಮಾಡಿಕೊಂಡು ಇರುತ್ತೇನೆ. ಹರೀಶ್‍ಗೌಡ ಚಿಕ್ಕವನಲ್ಲ ನಿರ್ಧರಿಸುವ ಸ್ವಾತಂತ್ರ, ಶಕ್ತಿಯಿದೆ. ನನ್ನಂತೆ ಅವನೂ ಸ್ವಂತ ಶಕ್ತಿಯಿಂದ ಬೆಳೆಯಬೇಕು ಎಂದರು.

ಹೆಚ್‍ಡಿಕೆ ನನ್ನನ್ನು ಪ್ರೀತಿಯಿಂದ ಕಾಣಲಿಲ್ಲ
ಮೈಸೂರು: ರಾಜಕೀಯ ಜೀವನದ ಪ್ರತೀ ಹಂತದಲ್ಲೂ ಜನ ನನಗೆ ಆಶೀರ್ವದಿಸಿ, ಗೌರವದಿಂದ ಕಂಡಿದ್ದಾರೆ. ಯಾಕೋ ಏನೋ ಗೊತ್ತಿಲ್ಲ ಕುಮಾರಸ್ವಾಮಿ ಅವರು ನನ್ನನ್ನು ಪ್ರೀತಿಯಿಂದ ಕಾಣಲಿಲ್ಲ ಎಂದು ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಜಿಟಿಡಿ ಬೇಸರ ವ್ಯಕ್ತಪಡಿಸಿದರು.

ನನಗೆ ವಯಸ್ಸಾಗಿದೆ ಎಂತಲೋ ಅಥವಾ ನೇರವಾಗಿ ಮಾತ ನಾಡುತ್ತೇನೆ ಎಂಬ ಕಾರಣಕ್ಕೋ ಅವರಿಗೆ ಸಹಿಸಲಾಗಿಲ್ಲ. ಆ ರೀತಿ ನಡೆದುಕೊಂಡಿದ್ದಾರೆ. ದೇವೇಗೌಡರು ಮುಖ್ಯಮಂತ್ರಿ ಗಳಾಗಿ ಮಾಡಿದ ಕೆಲಸ ಅವರ ಮಕ್ಕಳಿಂದ ಸಾಧ್ಯವಿಲ್ಲ. ಇರು ವಷ್ಟು ದಿನ ಪ್ರಾಮಾಣಿಕವಾಗಿದ್ದೇನೆ ಎಂಬ ತೃಪ್ತಿ ನನಗಿದೆ ಎಂದ ಜಿಟಿಡಿ, ಬಿಜೆಪಿಯಲ್ಲಿ ನನಗೆ ಹಲವಾರು ಸ್ನೇಹಿತರಿದ್ದಾರೆ. ನಾನು ಚುನಾವಣೆಯಲ್ಲಿ ಸೋತಾಗಲೂ ಯಡಿಯೂರಪ್ಪ ಗೃಹ ಮಂಡಳಿ ಅಧ್ಯಕ್ಷ ಹುದ್ದೆ ನೀಡಿದ್ದರು. ನಾನು ಈಗ ಬಿಜೆಪಿಗೆ ಹೋಗುವ ತೀರ್ಮಾನ ಮಾಡಿಲ್ಲ. ಕೆಲವು ಕಾರ್ಯಕರ್ತರು ಆ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಈ ರಾಜಕೀಯ ನನ್ನಿಂದಾಗದು: ಚುನಾವಣೆ ರಾಜಕಾರಣ ದಿಂದ ನಿವೃತ್ತಿ ಹೊಂದುವ ನಿರ್ಧಾರವನ್ನು ಜನ ವಿರೋಧಿಸ ಬಹುದು. ಚುನಾವಣೆ ಎದುರಿಸುವ ಶಕ್ತಿಯನ್ನು ನನಗೆ ದೇವರು ಕೊಟ್ಟಿದ್ದಾನೆ. ಆದರೆ ಹಿಂದಿನ ರಾಜಕಾರಣಕ್ಕೂ ಪ್ರಸ್ತುತ ರಾಜ ಕೀಯಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಸಿಎಂ ಜೊತೆ ಚೆನ್ನಾಗಿರ ಬೇಕೆಂದರೆ ಅವರಿವರ ವಿರುದ್ಧ ಚಾಡಿ ಹೇಳಬೇಕು. ಅವರ ಆಕಾಂಕ್ಷೆಗಳನ್ನು ಪೂರೈಸಬೇಕು. ನಮಗೆ

ಈ ರೀತಿಯ ರಾಜಕಾರಣ ಸಾಧ್ಯವಿಲ್ಲ. ಹೇಗೋ ಕಷ್ಟಪಟ್ಟು ಈವರೆಗೆ ಸಹಿಸಿಕೊಂಡು ಬಂದಿದ್ದೇನೆ. ಸ್ವಂತಕ್ಕಿಂತ ಜನರ ಸೇವೆ ಮಾಡುವುದು ಮುಖ್ಯ. ನಾನು ಎದುರಿಸಿದ ದುಸ್ಥಿತಿ ಯಾರಿಗೂ ಬರುವುದಿಲ್ಲ ಎಂದು ತಿಳಿಸಿದರು.

ನಾನು, ಸಿದ್ದರಾಮಯ್ಯ ಸೇರಿ ಚಾಮುಂಡೇಶ್ವರಿಯಲ್ಲಿ ಪಕ್ಷ ಕಟ್ಟಿದೆವು. 2004ರಲ್ಲಿ ಸ್ಫೂರ್ತಿ ಸಮಾವೇಶ ಮಾಡಿದ್ದೆ. ಸಿದ್ದ ರಾಮಯ್ಯ ಸೇರಿದಂತೆ ಎಲ್ಲಾ ಶಾಸಕರೂ ಪಕ್ಷದಿಂದ ಹೊರ ಹೋದರು. ನಾನೊಬ್ಬನೇ ಉಳಿದುಕೊಂಡೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲೆಂದು ಘೋಷಿಸಿದೆ. ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿ ವರ್ಷದ ಬಳಿಕ 7 ತಿಂಗಳು ನನ್ನನ್ನು ಮಂತ್ರಿ ಮಾಡಿದರು. ಯಡಿಯೂರಪ್ಪನವರಿಗೆ ಮುಖ್ಯ ಮಂತ್ರಿ ಸ್ಥಾನ ಬಿಟ್ಟುಕೊಡಲಿಲ್ಲ ಎಂದು ನಾನು ಜೆಡಿಎಸ್‍ನಿಂದ ಹೊರಬಂದು ಬಿಜೆಪಿ ಸೇರಿದೆ. ಹುಣಸೂರಿನಲ್ಲಿ ಸೋತಾಗ ಯಡಿಯೂರಪ್ಪನವರು ನನ್ನನ್ನು ಗೃಹ ಮಂಡಳಿಗೆ ಅಧ್ಯಕ್ಷನನ್ನಾಗಿ ಮಾಡಿದರು. ಬಿಜೆಪಿ ಒಡೆದ ಸಂದರ್ಭದಲ್ಲಿ ಮತ್ತೆ ನಾನು ಜೆಡಿಎಸ್ ಸೇರಿದೆ. `ಮರಳಿ ಮನೆಗೆ ಸಮಾವೇಶ’ ಮಾಡಿ ಗೆದ್ದೆವು. ನನಗಿಂತ 10 ವರ್ಷ ಚಿಕ್ಕವರಾದರೂ ಕುಮಾರಣ್ಣ ಎನ್ನುತ್ತಾ 2018ರಲ್ಲಿ ಅವರು ಮುಖ್ಯಮಂತ್ರಿಯಾಗಲೇಬೇಕೆಂದು ಜನರೆಲ್ಲಾ ಚಾಮುಂ ಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೆವು. ಕುಮಾರಪರ್ವ ಸಮಾವೇಶ ಮಾಡಿದೆ. ಆಗ ಸಿಎಂ ಸ್ಥಾನಕ್ಕೆ ಸರಿಸಮಾನವಾದ ಹುದ್ದೆ ನೀಡಿ, ಜಿ.ಟಿ.ದೇವೇಗೌಡರನ್ನು ಮೈಸೂರಿನ ಸಿಎಂ ಮಾಡ್ತೀನಿ ಎಂದಿದ್ದರು. ಕುಮಾರಸ್ವಾಮಿ ಸಿಎಂ ಆದರೂ ಜನರ ಮುಂದೆ ಹೇಳಿದ ಮಾತು ಮಾತಾಗಿಯೇ ಉಳಿಯಿತು ಎಂದು ಜಿಟಿಡಿ ಅನೇಕ ರಾಜಕೀಯ ಸಂಗತಿಗಳ ಬಿಚ್ಚಿಟ್ಟರು.

Translate »