ಸಾಮಾಜಿಕ ಪರಿವರ್ತನೆಗೆ ನಿವೃತ್ತರ ಸೇವೆ ಅಗತ್ಯ
ಹಾಸನ

ಸಾಮಾಜಿಕ ಪರಿವರ್ತನೆಗೆ ನಿವೃತ್ತರ ಸೇವೆ ಅಗತ್ಯ

May 4, 2019

ಬೇಲೂರು: ಸಮಾಜದಲ್ಲಿ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಹಾಗೂ ಸಾಮಾಜಿಕ ಪರಿವರ್ತನೆಗೆ ನಿವೃತ್ತರ ಸೇವೆ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಉದಯರವಿ ಹೇಳಿದರು.

ಪಟ್ಟಣದ ನಿವೃತ್ತ ಭವನದಲ್ಲಿ ಕಸಾಪ ಮಾಜಿ ಅಧ್ಯಕ್ಷ ಉದಯರವಿ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದ ಹಿನೆÀ್ನಲೆಯಲ್ಲಿ ತಾಲೂಕು ನಿವೃತ್ತನೌಕರರ ಸಂಘದಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹಿರಿಯ ನೌಕರರು ನಿವೃತ್ತಿಗೊಂಡ ನಂತರದಲ್ಲಿ ಅವರನ್ನು ನಿರ್ಲಕ್ಷ್ಯಿಸಬಾರದು. ಅದರ ಬದಲು ಅವರ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಮುಂದಾಗಬೇಕು. ಹಳೆಯ ತಲೆಮಾರು ಹೊಸ ಚಿಗುರಿನೊಂದಿಗೆ ಬೆರೆತು ಮಾದರಿ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.

ಕಿರಿಯ ನೌಕರರು ತಮ್ಮ ಕರ್ತವ್ಯ ನಿರ್ವಹಿಸುವಾಗ ಹಿರಿಯ ನೌಕರರ ಅನುಭವದ ಜೊತೆಗೆ ಅವರು ನಿರ್ವಹಿಸಿರುವ ಸೇವೆಗಳನ್ನು ಪರಾಮರ್ಶೆ ಮಾಡಿಕೊಳ್ಳಬೇಕು. ನಿವೃತ್ತಿ ನೌಕರರನ್ನು ಗೌರವಿಸುವ ವಾತಾವರಣ ನಿರ್ಮಾಣವಾಗಬೇಕು. ನಿವೃತ್ತಿಯ ನಂತರ ಆರೋಗ್ಯದಲ್ಲಿ ಏರುಪೇರು, ಸಂಸಾರದ ಜಂಜಾಟ ಹಾಗೂ ಇನ್ನಿತರ ಸಮಸ್ಯೆಗಳು ಬರುವುದು ಸಹಜವಾಗಿದೆ. ಏನೇ ಕಷ್ಟ ಬಂದರೂ ಅದನ್ನು ಮೆಟ್ಟಿ ನಿಲ್ಲುವ ಧೈರ್ಯ ವನ್ನು ಬೆಳಸಿಕೊಳ್ಳಬೇಕು. ನಮ್ಮ ಕೈಕಾಲು ಗಟ್ಟಿಯಾಗಿರುವಾಗಲೇ ಆರೋಗ್ಯವಿಮೆ, ಜೀವವಿಮೆಯನ್ನು ಮಾಡಿಸಿಟ್ಟುಕೊಂಡರೆ ನಿವೃತ್ತಿಯ ಸಮಯದಲ್ಲಿ ಅನುಕೂಲ ವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿದ್ದೇಗೌಡ, ಗೌರವಾಧ್ಯಕ್ಷ ಬೇಲೂರು ಕೃಷ್ಣಮೂರ್ತಿ, ಮಾಜಿ ಅಧ್ಯಕ್ಷ ರಾಮಸ್ವಾಮಿ, ಅರಸೀಕೆರೆ ಕಸಾಪ ಅಧ್ಯಕ್ಷ ಶಿವಮೂರ್ತಿ, ಸದಸ್ಯರಾದ ಪುಟ್ಟೆಗೌಡ, ಪುಟ್ಟಸ್ವಾಮಿಗೌಡ, ಸೌಭಾಗ್ಯ ಅಂಥೋಣಿ, ನಾಗಮ್ಮ, ನಾಗರಾಜು ಇತರರು ಇದ್ದರು.

Translate »