ವಿಧಾನಸೌಧಕ್ಕೆ ಬಾರದೆ ರೆಸಾರ್ಟ್‍ನಲ್ಲಿ ಕುಳಿತು ಕೋವಿಡ್ ಲೆಕ್ಕ ಕೇಳಿದರೆ ಹೇಗೆ
ಮೈಸೂರು

ವಿಧಾನಸೌಧಕ್ಕೆ ಬಾರದೆ ರೆಸಾರ್ಟ್‍ನಲ್ಲಿ ಕುಳಿತು ಕೋವಿಡ್ ಲೆಕ್ಕ ಕೇಳಿದರೆ ಹೇಗೆ

July 12, 2020

ಮೈಸೂರು, ಜು. 11(ಆರ್‍ಕೆ)- ಮುಖ್ಯಮಂತ್ರಿ ಗಳೇ ಕರೆದರೂ ವಿಧಾನಸೌಧಕ್ಕೆ ಬಾರದೆ ರೆಸಾರ್ಟ್‍ನಲ್ಲಿ ಕುಳಿತು ಕೋವಿಡ್-19 ನಿರ್ವಹಣೆ ಲೆಕ್ಕ ಕೇಳಿದರೆ ಹೇಗೆ ಕೊಡಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.

ಮಂಡಕಳ್ಳಿ ಬಳಿಯ ಕೋವಿಡ್ ಕೇರ್ ಸೆಂಟರ್ ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ನಾಲ್ಕೈದು ತಿಂಗಳಿನಿಂದ ಕೊರೊನಾ ಸೋಂಕು ತಡೆಗೆ ಸರ್ಕಾರ ಖರ್ಚು ಮಾಡಿರುವುದೇ 550 ಕೋಟಿ ರೂ. ಆದರೆ 2,500 ಕೋಟಿ ರೂ. ಅವ್ಯವಹಾರವಾಗಿದೆ ಎಂಬ ಸಿದ್ದರಾಮಯ್ಯ ಅವರ ಆರೋಪ ಬಾಲಿಶವಾದುದು ಎಂದರು. ಆರಂಭದಲ್ಲಿ ಮಾಸ್ಕ್ ಮತ್ತು ಇತರ ಸಲಕರಣೆಗಳ ಬೆಲೆ ಜಾಸ್ತಿ ಇತ್ತು. ಈಗ ಸ್ಪರ್ಧಾತ್ಮಕ ದರದಲ್ಲಿ ಸಿಗುತ್ತಿವೆ. ಕೋವಿಡ್ ನಂತಹ ಕಷ್ಟ ಸಂದರ್ಭದಲ್ಲೂ ದುಡ್ಡು ಹೊಡೆಯುವವರನ್ನು ಮನುಷ್ಯತ್ವ ಇರುವ ವರೆನ್ನಲು ಸಾಧ್ಯವಿಲ್ಲ ಎಂದ ಸಚಿವರು, ಭಾರೀ ಭ್ರಷ್ಟಾಚಾರವಾಗಿದೆ ಎಂದು ಆರೋಪ ಮಾಡುತ್ತಿರುವ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದು, ವಿಧಾನಸೌಧದಲ್ಲಿ ಲೆಕ್ಕಪತ್ರ ಪರಿಶೀಲಿಸಬಹುದು. ಮುಖ್ಯಮಂತ್ರಿಗಳೇ ಕರೆದರೂ, ಬಾರದೇ ರೆಸಾರ್ಟ್‍ನಲ್ಲಿ ಕುಳಿತು ಹೇಳಿಕೆ ನೀಡಿದರೆ ಹೇಗೆ? ಎಂದು ಪ್ರಶ್ನಿಸಿದರು.

ಮೈಸೂರಲ್ಲಿ ಕೊರೊನಾ ಕಂಟ್ರೋಲ್ ತಪ್ಪಿಲ್ಲ. ಪಾಸಿಟಿವ್ ಬಂದ ಪ್ರಮಾಣದಲ್ಲೇ ನೆಗೆಟಿವ್ ಫಲಿತಾಂಶವೂ ಬರುತ್ತಿವೆ. ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುತ್ತಿದೆ. ಕೊರೊನಾ ನಿರ್ವಹಣೆಯಲ್ಲಿ ಕೆಲಸ ನಿರ್ವಹಿಸುವ ವಾರಿಯರ್ಸ್‍ಗೆ ಸೋಂಕು ತಗುಲಿದರೆ ಅವರ ಚಿಕಿತ್ಸೆಗಾಗಿಯೇ ಪ್ರತ್ಯೇಕವಾಗಿ ವಿಕ್ರಂ ಆಸ್ಪತ್ರೆಯನ್ನು ಸಜ್ಜುಗೊಳಿಸಲಾಗಿದೆ. ಕೋವಿಡ್ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಅಗತ್ಯವಿರುವ ‘ಡಿ’ ಗ್ರೂಪ್ ನೌಕರರಿಗೆ ಹೆಚ್ಚುವರಿ ಪ್ರೋತ್ಸಾಹ ಧನ ನೀಡುವ ಬಗ್ಗೆ ಮುಖ್ಯಮಂತ್ರಿ ಗಳೊಂದಿಗೆ ಮಾತನಾಡಿದ್ದೇನೆ ಎಂದು ಸೋಮಶೇಖರ್ ನುಡಿದರು.

 

 

Translate »