ಹೊಸದಿಲ್ಲಿ, ಡಿ.17- ಕಾಂಗ್ರೆಸ್ ನಾಯಕತ್ವವನ್ನು ಪ್ರಶ್ನಿಸಿ ಪತ್ರ ಬರೆದಿದ್ದ 23 ಭಿನ್ನಮತೀಯ ನಾಯಕರು ಶನಿವಾರ ಸೋನಿಯಾ ಗಾಂಧಿಯವರನ್ನು ಭೇಟಿ ಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.
ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್‍ನಾಥ್ ಈ ಭೇಟಿ ಆಯೋಜಿಸಿದ್ದಾರೆ ಎನ್ನಲಾಗಿದೆ. ಸೋನಿಯಾ ಗಾಂಧಿ ಜೊತೆ ಅವರ ಪುತ್ರ ರಾಹುಲ್ ಗಾಂಧಿಯೂ ಸಭೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗಿದೆ. ಪಕ್ಷದ ಗಣನೀಯ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಹಾಗೂ ಸಕ್ರಿಯ ನಾಯಕತ್ವಕ್ಕೆ ಒತ್ತಾಯಿಸಿದ್ದ ಭಿನ್ನಮತೀಯರನ್ನು ಕಮಲ್‍ನಾಥ್ ಒಂದುಗೂಡಿಸಿದ್ದಾರೆ ಎಂದು ತಿಳಿದು ಬಂದಿದೆ. ಕಮಲ್‍ನಾಥ್ ಅವರೇ ಮುಂದೆ ನಿಂತು, ಪತ್ರ ಬರೆದಿದ್ದ ಭಿನ್ನಮತೀಯ ನಾಯಕರನ್ನು ಭೇಟಿಯಾಗುವಂತೆ ಗಾಂಧಿದ್ವಯರನ್ನು ಮನವೊಲಿಸಿದರು ಎಂದು ಮೂಲಗಳು ಹೇಳಿವೆ.
ಇತ್ತಿಚೆಗೆ ಬಿಹಾರ ವಿಧಾನಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಹೀನಾಯ ಪ್ರದರ್ಶನ ನೀಡಿದ್ದರಿಂದ ಮತ್ತೆ ಅಸಮಾಧಾನ ಭುಗಿಲ್ಲೆದ್ದಿತ್ತು. ಹಿರಿಯ ನಾಯಕ ಕಪಿಲ್ ಸಿಬಲ್ ಅವರಂತೂ ಆತ್ಮಾವಲೋಕನದ ಸಮಯ ಮುಗಿದಿದೆ ಎಂದು ಬಹಿರಂಗ ವಾಗಿ ಹೇಳಿದ್ದರು. ಪಿ ಚಿದಂಬರಂ ಅವರೂ `ಸಮಗ್ರ ವಿಮರ್ಶೆ’ ಅಗತ್ಯವಿದೆ ಎಂದು ಹೇಳಿದ್ದಲ್ಲದೆ, ಪಕ್ಷವನ್ನು ಮೂಲದಲ್ಲಿ ಬಲಪಡಿಸಬೇಕಾಗಿದೆ ಎಂದು ಹೇಳಿದ್ದರು. ಇದೇ ವೇಳೆ ಏಪ್ರಿಲ್‍ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದರ ಹಿನ್ನೆಲೆಯಲ್ಲಿ ಭಿನ್ನಮತೀಯ ನಾಯಕರ ಸಭೆ ಆಯೋಜನೆಯಾಗಿದೆ.
¸