ಚೆನ್ನೈ: ಗಾಯಕ ಎಸ್.ಪಿ. ಬಾಲ ಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿರವಾಗಿದ್ದು, ಅವರು ಪ್ರಜ್ಞಾಸ್ಥಿತಿಗೆ ಮರಳಿದ್ದಾರೆ’ ಎಂದು ಚೆನ್ನೈನ ಎಂಜಿಎಂ ಹೆಲ್ತ್ ಕೇರ್ ತಿಳಿಸಿದೆ. ಎಸ್‍ಪಿಬಿ ಅವರ ಆರೋಗ್ಯದ ಚೇತರಿಕೆಗೆ ಪ್ರಾರ್ಥಿಸುತ್ತಿದ್ದ ಲಕ್ಷಾಂತರ ಅಭಿಮಾನಿ ಗಳಿಗೆ ಇದು ಖುಷಿ ತಂದಿದೆ.
‘ಕೋವಿಡ್-19 ಸೋಂಕಿಗೆ ತುತ್ತಾಗಿ ರುವುದರಿಂದ ಅವರ ಶ್ವಾಸಕೋಶಕ್ಕೆ ಹಾನಿಯಾಗಿದೆ. ಆದರೆ, ಉಳಿದ ಅಂಗಾಂಗಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅವರ ಪುತ್ರ ಎಸ್.ಪಿ. ಚರಣ್ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಅವರೊಟ್ಟಿಗೆ ಮಾತನಾಡಲು ಎಸ್‍ಪಿಬಿ ಕೈಸನ್ನೆಗಳ ಮೂಲಕ ಪ್ರಯತ್ನಿಸಿದರು. ಆದರೆ, ಅವರಿಗೆ ಮಾತನಾಡಲು ಸಾಧ್ಯ ವಾಗುತ್ತಿಲ್ಲ. ಪ್ರಜ್ಞಾಸ್ಥಿತಿಯಲ್ಲಿದ್ದು ಎಚ್ಚರ ವಾಗಿಯೇ ಇದ್ದಾರೆ’ ಎಂದು ಎಂಜಿಎಂ ಹೆಲ್ತ್ ಕೇರ್‍ನ ನಿರ್ದೇಶಕ ಡಾ.ಪ್ರಶಾಂತ್ ರಾಜಗೋಪಾಲನ್ ತಿಳಿಸಿದ್ದಾರೆ.
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಹೆಚ್ಚುವರಿ ಆಕ್ಸಿಜನ್ ಪೂರೈಸಲು ಇಸಿಎಂಒ ಸಾಧನ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.