ಮೈಸೂರಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ ಅನಾವರಣ
ಮೈಸೂರು

ಮೈಸೂರಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ ಅನಾವರಣ

November 22, 2021

ಮೈಸೂರು,ನ.21(ಜಿಎ)-ಮೈಸೂರಿನ ಬಸವನಗುಡಿ ಉದ್ಯಾನವನದಲ್ಲಿ 1.30 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿ ರುವ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ ಯನ್ನು ಭಾನುವಾರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅವರು ಅನಾವರಣಗೊಳಿಸಿದರು.

ನಂತರ ನಡೆದ ವೇದಿಕೆ ಸಮಾರಂಭದಲ್ಲಿ ಮಾತನಾಡಿದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಬಹಳ ದಿನಗಳಿಂದ ಈ ಸ್ಥಳದಲ್ಲಿ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿಯನ್ನು ನಿರ್ಮಿಸಬೇಕು ಎಂಬ ಆಶಯವಿತ್ತು. ಅದು ಇಂದು ನೆರವೇರಿದೆ. ಇದು ಉತ್ತಮವಾದ ವಿಚಾರವಾಗಿದೆ ಎಂದು ಹೇಳಿದರು.

ಮನುಷ್ಯನಿಗೆ ಶ್ವಾಸಕೋಶ ಎಷ್ಟು ಮುಖ್ಯವೋ ಉದ್ಯಾ ನವನಗಳು ಅಷ್ಟೇ ಮುಖ್ಯ. ಆದ್ದರಿಂದ ಪುತ್ಥಳಿಯನ್ನು ಉದ್ಯಾನವನದಲ್ಲಿ ನಿರ್ಮಿಸಲಾಗಿದೆ. ಬೆಳಗಿನ ಜಾವ ವ್ಯಾಯಾಮ ಮಾಡುವವರು ಮತ್ತು ವಾಯುವಿಹಾರಕ್ಕೆ ಬರುವವರಿಗೆ ಧನಾತ್ಮಕ ಆಲೋಚನೆಗಳನ್ನು ರೂಢಿಸಲಿ ಎಂಬ ಕಾರಣದಿಂದ ಇಲ್ಲಿ ಪುತ್ಥಳಿ ನಿರ್ಮಿಸಲಾಗಿದೆ. ಕೆಲವು ಬಾರಿ ತಂದೆ-ತಾಯಿ ಒಂದು ಕುಟುಂಬದಲ್ಲಿರುವ ಮಕ್ಕಳ ನಡುವೆ ತಾರತಮ್ಯ ಮಾಡಬಹುದು. ಆದರೆ ಜಗತ್ತಿನ ಯಾವುದೇ ಗುರುಗಳು ತಾರತಮ್ಯ ಮಾಡುವುದಿಲ್ಲ. ಅವರು ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ ಮತ್ತು ಕೈ ಹಿಡಿದು ನಡೆಸುತ್ತಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಲ್. ನಾಗೇಂದ್ರ, ಪಾಲಿಕೆ ಸದಸ್ಯ ಪೈಲ್ವಾನ್ ಶ್ರೀನಿವಾಸ್ ಅವರು ಮಾಡಿಸಿರುವ ಪುತ್ಥಳಿ ಅದ್ಭುತವಾಗಿ ಮೂಡಿ ಬಂದಿದ್ದು, ಅದರ ಸುತ್ತಲೂ ಈಗ ಗಾಜಿನ ಚೌಕದ ಮೂಲಕ ರಕ್ಷಣೆ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ನಾನು ಈ ಪುತ್ಥಳಿಗೆ ಸುತ್ತಲೂ ಕಂಬಗಳನ್ನು ಹಾಕಿಸಿ ಗೋಪುರವನ್ನು ನಿರ್ಮಾಣ ಮಾಡಿಸುತ್ತೇನೆ. ಅದಕ್ಕಾಗಿ ವಿಶೇಷ ಅನು ದಾನವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಆಯೋಜಕರಾದ ಪಾಲಿಕೆ ಸದಸ್ಯ ಪೈಲ್ವಾನ್ ಶ್ರೀನಿವಾಸ್ ಅವರನ್ನು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾ ನಂದನಾಥ ಸ್ವಾಮೀಜಿ ಸನ್ಮಾನಿಸಿ, ಅಭಿನಂದಿಸಿದರು. ಕಾರ್ಯ ಕ್ರಮದಲ್ಲಿ ಮೈಸೂರು ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ, ಮೇಯರ್ ಸುನಂದಾ ಪಾಲನೇತ್ರ, ಚಾಮುಂಡೇಶ್ಚರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ ಮಾಜಿ ಶಾಸಕ ವಾಸು ಮತ್ತು ನಾಗರಿಕರು ಭಾಗವಹಿಸಿದ್ದರು.

Translate »