ಬೇಲೂರು: ಇಲ್ಲಿನ ದೇವಾಂಗ ಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಬನದ ಹುಣ್ಣಿಮೆ ಧಾರ್ಮಿಕ ಕಾರ್ಯ ಕ್ರಮ ವಿಜೃಂಭಣೆಯಿಂದ ಜರುಗಿತು.
ಮುಂಜಾನೆ ದೇವರಿಗೆ ಪಂಚಾಮೃತಾ ಭಿಷೇಕ, ಅರಿಶಿನ, ಪುಷ್ಪ ಮತ್ತು ವಿಳ್ಯೆದೆಲೆಯ ಅಲಂಕಾರ ಮಾಡಲಾಗಿತ್ತು. ರಾತ್ರಿ 8 ಗಂಟೆಗೆ ನೂರಾರು ಭಕ್ತರ ಸಮ್ಮುಖದಲ್ಲಿ ದೇವಿಗೆ ಮಹಾ ಮಂಗ ಳಾರತಿ ನೆರವೇರಿತು. ಭಕ್ತರಿಗೆ ದಾಸೋ ಹದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ದೇಗುಲದಲ್ಲಿ ಪ್ರಥಮ ಬಾರಿಗೆ ಆಚರಿಸಲಾಗುತ್ತಿರುವ ಬನದ ಹುಣ್ಣಿಮೆ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದ ದೇಗುಲದ ಅರ್ಚಕ ವೇ.ಬ್ರ. ಶ್ರೀ ಮೋಹನಭಟ್, ಬನಶಂಕರಿ ದೇವಿ ಅವತಾರ ತಾಳಿದ ದಿನದ ಅಂಗವಾಗಿ ಈ ಬನದ ಹುಣ್ಣಿಮೆ ಆಚರಿಸಲಾಗುತ್ತಿದೆ. ಇದನ್ನು ವಿಜೃಂಭಣೆಯಿಂದ ಬಾದಾಮಿ ಯಲ್ಲಿ ಮೊದಲಿಗೆ ಆಚರಣೆಗೆ ತರಲಾಯಿತು.
ಬನಶಂಕರಿ ದೇವಿ ಅಮ್ಮನವರು ಜನ್ಮತಾಳಿದ್ದರ ಬಗ್ಗೆ ನಿಖರ ದಾಖಲೆ ಇಲ್ಲದಿದ್ದರೂ, ಆಕೆ ಮಾನವರನ್ನು ಉದ್ಧರಿಸಲು ಬಾದಾಮಿಯಲ್ಲಿ ನೆಲೆಸಿದ್ದು ದುಷ್ಟ ಸಂಹಾರ ಮಾಡಿದ್ದರು.
ಆಕೆ ದುಷ್ಟ ಸಂಹಾರ ಮಾಡಿದ ದಿನವನ್ನು ಜಯಂತಿ ಅಥವಾ ಬನದ ಹುಣ್ಣಿಮೆ ಹೆಸರಿನಲ್ಲಿ ನಾವು ಆಚರಣೆ ಮಾಡುತ್ತಿದ್ದೇವೆ ಎಂದು ಮಾಹಿತಿ ಒದಗಿಸಿದರು. ದೇವಾಂಗ ಸಂಘದ ಅಧ್ಯಕ್ಷ ರಂಗನಾಥ್, ಉಪಾಧ್ಯಕ್ಷ ಮೋಹನಕುಮಾರ್, ಧನುರ್ಮಾಸ ಪೂಜಾ ಸಮಿತಿ ಛೇರ್ಮನ್ ಎಂ.ಬಿ. ಲೋಕೇಶ್ ಇತರರು ಇದ್ದರು.