ನಾಳೆ ದಡದಕಲ್ಲಹಳ್ಳಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ
ಮೈಸೂರು

ನಾಳೆ ದಡದಕಲ್ಲಹಳ್ಳಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

November 28, 2021

ಮೈಸೂರು, ನ.27- ಮೈಸೂರು ತಾಲೂಕು ಇಲವಾಲ ಹೋಬಳಿ ದಡದ ಕಲ್ಲಹಳ್ಳಿ ಗ್ರಾಮದಲ್ಲಿ ನ.29ರ ಸೋಮವಾರದಂದು ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 9 ಗಂಟೆಗೆ ದಡದಕಲ್ಲಹಳ್ಳಿ ಶ್ರೀ ವೆಂಕಟರಮಣಸ್ವಾಮಿ ವಿಭವ ಮೂರ್ತಿ ಸ್ವಾಮಿ ದೇವಸ್ಥಾನ ವಾರ್ಷಿಕೋತ್ಸವ ಹಾಗೂ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಶ್ರೀ ಯದುಗಿರಿ ಯತಿರಾಜ ಮಠದ ಪೀಠಾಧ್ಯಕ್ಷರಾದ ಶ್ರೀ ಯದುಗಿರಿ ಯತಿರಾಜ ಜೀಯರ್ ಮತ್ತು ಚಿಲಕವಾಡಿ ಮಠದ ಶ್ರೀ ಇಮ್ಮಡಿ ಗುರು ಲಿಂಗ ಸ್ವಾಮೀಜಿ ಅವರ ದಿವ್ಯಸಾನಿಧ್ಯದಲ್ಲಿ ನೆರವೇರಿಸಲಾಗುತ್ತಿದೆ. ಈ ಮಹಾನ್ ಉತ್ಸವದಲ್ಲಿ ಜನತೆ ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಗ್ರಾಮದ ಮುಖಂಡರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಶೇಷ ಬಸ್ ವ್ಯವಸ್ಥೆ: ಈ ಪೂಜಾ ಮಹೋತ್ಸವದ ಹಿನ್ನೆಲೆಯಲ್ಲಿ ಇಲವಾಲದಿಂದ ದಡದಕಲ್ಲಹಳ್ಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಅಂದು ಬೆಳಗ್ಗೆಯಿಂದ ಪ್ರತಿ ಗಂಟೆಗೊಂದರಂತೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ನ.28ರ ಭಾನುವಾರದಂದು ಮಧ್ಯಾಹ್ನ 12, ಮಧ್ಯಾಹ್ನ 2 ಹಾಗೂ ಸಂಜೆ 4, 6 ಗಂಟೆಗೆ ಇಲವಾಲದಿಂದ ಗುಂಗ್ರಾಲ್ ಛತ್ರ ಮಾರ್ಗ ದಡದಕಲ್ಲಹಳ್ಳಿಗೆ ಬಸ್ ಸಂಚರಿಸಲಿದೆ. ಅಲ್ಲದೆ, ನ.29ರ ಸೋಮವಾರ ಬೆಳಗ್ಗೆ 8.00ರಿಂದ ಸಂಜೆ 5 ಗಂಟೆವರೆಗೆ ಪ್ರತಿ ಗಂಟೆಗೆ ಒಂದರಂತೆ ಇಲವಾಲದಿಂದ ಗುಂಗ್ರಾಲ್‍ಛತ್ರ ಮಾರ್ಗ ದಡದಕಲ್ಲಹಳ್ಳಿ ಗ್ರಾಮಕ್ಕೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಪರಿಶೀಲನೆ: ಶನಿವಾರ ಮಧ್ಯಾಹ್ನ ಶಾಸಕ ಜಿ.ಟಿ.ದೇವೇಗೌಡ ದಡದಕಲ್ಲಹಳ್ಳಿ ಗ್ರಾಮದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು. ಪೂಜಾ ಕಾರ್ಯಕ್ಕೆ ಸ್ಥಾಪಿಸಲಾಗುತ್ತಿರುವ ವಿಶೇಷ ಬೃಹತ್ ವೇದಿಕೆಯನ್ನು ಪರಿ ಶೀಲಿಸಿದರು. ಅಲ್ಲದೆ, ಈ ಧಾರ್ಮಿಕ ಕಾರ್ಯದ ಸಿದ್ಧತೆಯಲ್ಲಿ ಯಾವುದೇ ಲೋಪ ವಾಗದಂತೆ ಎಚ್ಚರಿಕೆ ವಹಿಸುವಂತೆ ಜಿ.ಟಿ.ದೇವೇಗೌಡರು ಸೂಚಿಸಿದರು.

Translate »