ಶ್ರೀರಾಂಪುರ, ಬೋಗಾದಿ, ಚಾಮುಂಡಿಬೆಟ್ಟ, ಹಿನಕಲ್ ಗ್ರಾಪಂಗಳು ಶೀಘ್ರ ಪಾಲಿಕೆ ತೆಕ್ಕೆಗೆ
ಮೈಸೂರು

ಶ್ರೀರಾಂಪುರ, ಬೋಗಾದಿ, ಚಾಮುಂಡಿಬೆಟ್ಟ, ಹಿನಕಲ್ ಗ್ರಾಪಂಗಳು ಶೀಘ್ರ ಪಾಲಿಕೆ ತೆಕ್ಕೆಗೆ

November 8, 2020

ಮೈಸೂರು,ನ.7(ಪಿಎಂ)- ಮೈಸೂರು ನಗರಕ್ಕೆ ಹೊಂದಿ ಕೊಂಡಿರುವ ಶ್ರೀರಾಂಪುರ, ಬೋಗಾದಿ, ಚಾಮುಂಡಿಬೆಟ್ಟ ಹಾಗೂ ಹಿನಕಲ್ ಗ್ರಾಮ ಪಂಚಾಯಿತಿಗಳನ್ನು ಮೈಸೂರು ಮಹಾನಗರಪಾಲಿಕೆಗೆ ಸೇರ್ಪಡೆಗೊಳಿಸಲು ಹಾಗೂ ಕೂರ್ಗಳ್ಳಿ ಮತ್ತು ಕಡಕೊಳ ಗ್ರಾಮ ಪಂಚಾಯಿತಿಗಳನ್ನು ನಗರಸಭೆಗಳ ನ್ನಾಗಿ ಪರಿವರ್ತಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಸಮ್ಮತಿಸಿದ್ದು, ಶೀಘ್ರದಲ್ಲಿ ಸಚಿವ ಸಂಪುಟದಲ್ಲಿ ಇದಕ್ಕೆ ಹಸಿರು ನಿಶಾನೆ ದೊರೆಯುದೊಂದೇ ಬಾಕಿ.

ಬೆಂಗಳೂರಿನ ವಿಕಾಸಸೌಧದಲ್ಲಿ ಮೈಸೂರು ನಗರದ ಅಭಿ ವೃದ್ಧಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡು ಬಳಿಕ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಲಾಯಿತು.
ಈ ವೇಳೆ ಇದಕ್ಕೆ ಸಚಿವ ಸಂಪುಟದ ಅನುಮೋದನೆ ಕೊಡಿಸಿಕೊಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕ ರಿಸಿದ ಮುಖ್ಯಮಂತ್ರಿಗಳು ಇದಕ್ಕೆ ಸಮ್ಮತಿ ಸೂಚಿಸಿದರು. ಶ್ರೀರಾಂಪುರ, ಬೋಗಾದಿ, ಚಾಮುಂಡಿಬೆಟ್ಟ ಹಾಗೂ ಹಿನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳನ್ನು ಮೈಸೂರು ಮಹಾನಗರಪಾಲಿಕೆಗೆ ಸೇರ್ಪಡೆ ಗೊಳಿಸಲು ತೀರ್ಮಾನಿಸಲಾಗಿದೆ. ಅದೇ ರೀತಿ ಕೂರ್ಗಳ್ಳಿ ಮತ್ತು ಕಡಕೊಳ ಗ್ರಾಪಂ ಗಳನ್ನು ನಗರಸಭೆಗಳನ್ನಾಗಿ ಪರಿವರ್ತನೆಗೊಳಿಸಲು ಚಾಲನೆ ನೀಡಲಾಗಿದೆ.

ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್‍ಸೇಠ್, ಎಲ್. ನಾಗೇಂದ್ರ, ಹರ್ಷವರ್ಧನ್, ಮುಡಾ ಆಯುಕ್ತ ಅಧ್ಯಕ್ಷ ಹೆಚ್.ವಿ.ರಾಜೀವ್, ಆಯುಕ್ತ ನಟೇಶ್ ಸೇರಿದಂತೆ ಉನ್ನತ ಮಟ್ಟದ ಅಧಿ ಕಾರಿಗಳು ಹಾಜರಿದ್ದ ಸಭೆಯಲ್ಲಿ ಈ ನಿರ್ಣಯ ಕೈಗೊಂಡು ಮುಂದಿನ ಕ್ರಮಕ್ಕೆ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 2005ರ ನಂತರ ಮುಡಾ ಹಂಚಿಕೆ ಮಾಡಿರುವ ನಿವೇಶನಗಳಿಗೆ ಕ್ರಯಪತ್ರ ನೀಡು ವುದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ಇದೇ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಮುಖ್ಯಮಂತ್ರಿಗಳ ಭೇಟಿಗೂ ಮುನ್ನ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರನ್ನು ಭೇಟಿ ಮಾಡಿ, ಗ್ರಾಪಂಗಳನ್ನು ಮೈಸೂರು ನಗರಪಾಲಿಕೆ ವ್ಯಾಪ್ತಿಗೆ ಸೇರಿಸುವ ಸಂಬಂಧ ಚರ್ಚೆ ನಡೆಸಿದರು. ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, ಮೈಸೂರು ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಮುಡಾದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಕ್ಕೆ ಇರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದೆವು. ಈ ಹಿನ್ನೆಲೆಯಲ್ಲಿ ಈಗ ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಿ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಟ್ಟಿದ್ದಾರೆ. ಅಲ್ಲದೆ, ಉಭಯ ಸಚಿವರು ಸಹ ಮೈಸೂರು ನಗರದ ಸಮಗ್ರ ಅಭಿವೃದ್ಧಿ ಬದ್ಧರಾಗಿರುವುದಲ್ಲದೆ, ಶೀಘ್ರವಾಗಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ಕೊಡಿಸುವುದಾಗಿ ಭರವಸೆ ನೀಡಿರುವುದಕ್ಕೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಬಿಲ್ಡಿಂಗ್ ನವೀಕರಣ  ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ

ಮೈಸೂರು ನಗರದ ಅಭಿವೃದ್ಧಿ ಸಂಬಂಧ ಹಲವು ವಿಷಯಗಳು ಸಭೆಯಲ್ಲಿ ಚರ್ಚೆಯಾದವು. ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡವನ್ನು ಅಭಿವೃದ್ಧಿ ಮಾಡಬೇಕು. ಇದಕ್ಕಿರುವ ತೊಡಕು ನಿವಾರಣೆ ಮಾಡಬೇಕು. ಇವುಗಳ ಕಾಮಗಾರಿಗಳು ಶೀಘ್ರವಾಗಿ ಪ್ರಾರಂಭವಾಗಬೇಕು ಎಂದು ಸಚಿವರ ಗಮನಕ್ಕೆ ತಂದಾಗ, ಈ ಎರಡೂ ಕಟ್ಟಡಗಳ ನವೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತೆಗೆದುಕೊಂಡಿರುವ ಕ್ರಮ, ಮುಂದಿನ ಕಾಮಗಾರಿಗಳ ಯೋಜನೆ ಏನು ಮಾಡ ಬೇಕು ಎಂಬ ಬಗ್ಗೆ 15 ದಿನಗಳಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಬಸವರಾಜು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು.

Translate »