ವೇತನ ಹೆಚ್ಚಳಕ್ಕೆ ಆಗ್ರಹಿಸಿ ಇಂದಿನಿಂದ ಕೆಆರ್, ಚೆಲುವಾಂಬ ಆಸ್ಪತ್ರೆ ಸ್ಟಾಫ್  ನರ್ಸ್‍ಗಳಿಂದ ಕಪ್ಪು ಪಟ್ಟಿ ಧರಿಸಿ, ಕರ್ತವ್ಯ ನಿರ್ವಹಣೆ
ಮೈಸೂರು

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಇಂದಿನಿಂದ ಕೆಆರ್, ಚೆಲುವಾಂಬ ಆಸ್ಪತ್ರೆ ಸ್ಟಾಫ್  ನರ್ಸ್‍ಗಳಿಂದ ಕಪ್ಪು ಪಟ್ಟಿ ಧರಿಸಿ, ಕರ್ತವ್ಯ ನಿರ್ವಹಣೆ

July 8, 2020

ಮೈಸೂರು, ಜು.7(ಆರ್‍ಕೆ)-ವೇತನ ಹೆಚ್ಚಳ, ಸೇವಾ ಭದ್ರತೆ ಹಾಗೂ ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಮೈಸೂರಿನ ಕೆ.ಆರ್. ಮತ್ತು ಚೆಲುವಾಂಬ ಆಸ್ಪತ್ರೆಗಳ ಗುತ್ತಿಗೆ ಸ್ಟಾಫ್ ನರ್ಸ್‍ಗಳು ನಾಳೆ (ಜು.8)ಯಿಂದ ಜುಲೈ 10ರವರೆಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲು ನಿರ್ಧರಿಸಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮೂಲಕ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಸ್ಟಾಫ್ ನರ್ಸ್‍ಗಳನ್ನು ಕೆ.ಆರ್. ಮತ್ತು ಚೆಲುವಾಂಬ ಆಸ್ಪತ್ರೆಗಳಿಗೆ ನಿಯೋಜಿಸಿದ್ದು, ಮಾಸಿಕ 10,000 ರೂ. ವೇತನ ನೀಡಲಾಗುತ್ತಿದೆ. ಸುಮಾರು 8ರಿಂದ 10 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ತಮಗೆ ವೇತನ ಹೆಚ್ಚಿಸಿಲ್ಲ, ಕ್ವಾರ್ಟರ್ಸ್ ಹಾಗೂ ಇನ್ನಿತರ ಸೌಲಭ್ಯ ಒದಗಿಸಿಲ್ಲ. ಅಲ್ಲದೇ, ಕೋವಿಡ್ ಸೋಂಕಿತರ ವಾರ್ಡ್‍ಗಳಿಗೆ ನಮ್ಮನ್ನು ನಿಯೋಜನೆ ಮಾಡಿದ್ದು, ಸುರಕ್ಷತೆ ಭರವಸೆ ನೀಡಿಲ್ಲ ಎಂದು ಸ್ಟಾಫ್ ನರ್ಸ್‍ಗಳು ಆರೋಪಿಸಿದ್ದಾರೆ.

ವೇತನ ಹೆಚ್ಚಳದ ಬಗ್ಗೆ ಮನವಿ ಮಾಡಿದ ನಮಗೆ ಜುಲೈ 10ರವರೆಗೆ ಅವಕಾಶ ನೀಡಿ ಎಂದು ವೈದ್ಯಕೀಯ ಅಧೀಕ್ಷಕರು ತಿಳಿಸಿರುವುದರಿಂದ ಬುಧವಾರದಿಂದ ತೋಳಿಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತೇವೆ. ಜುಲೈ 10ರಂದು ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ನಾವು ಸಾಮೂಹಿಕ ರಾಜೀನಾಮೆ ಸಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಕೆ.ಆರ್.ಆಸ್ಪತ್ರೆ ಸ್ಟಾಫ್ ನರ್ಸ್‍ಗಳು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಗುತ್ತಿಗೆ ಆಧಾರದ ಸ್ಟಾಫ್ ನರ್ಸ್‍ಗಳಿಗೆ 25ರಿಂದ 30 ಸಾವಿರ ರೂ. ವೇತನ ನೀಡಲಾಗುತ್ತಿದೆ. ಮೂರ್ನಾಲ್ಕು ವರ್ಷ ಕೆಲಸ ಮಾಡಿದವರ ಸೇವೆಯನ್ನು ಖಾಯಂಗೊಳಿಸಲಾಗುತ್ತಿದೆ ಎಂದ ಅವರು, 8ರಿಂದ 10 ವರ್ಷಗಳಿಂದ ಕೆಲಸ ಮಾಡುತ್ತಿರುವ ನಮಗೆ ಸಂಬಳವನ್ನೂ ಹೆಚ್ಚಿಸಿಲ್ಲ. ಬೇರೆ ಊರುಗಳಿಂದ ಬರುವ ನಮಗೆ ಸಾರಿಗೆ ವೆಚ್ಚವೇ ಜಾಸ್ತಿಯಾಗುವುದರಿಂದ ಜೀವನ ದುಸ್ತರವಾಗಿದೆ ಎಂದು ಸ್ಟಾಫ್ ನರ್ಸ್‍ಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

Translate »