ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವರಣದಲ್ಲಿ ವಿಧಿ ವಿಜ್ಞಾನ ವಸ್ತು ಪ್ರದರ್ಶನ ಆರಂಭ
ಮೈಸೂರು

ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವರಣದಲ್ಲಿ ವಿಧಿ ವಿಜ್ಞಾನ ವಸ್ತು ಪ್ರದರ್ಶನ ಆರಂಭ

December 20, 2018

ಮೈಸೂರು: ಅಪರಾಧಗಳು ಮತ್ತು ತನಿಖೆಗೆ ಸಹಕಾರಿ ಯಾಗುವ 3 ದಿನಗಳ ವಿಧಿ ವಿಜ್ಞಾನ ವಸ್ತು ಪ್ರದರ್ಶನ ಮೈಸೂರಿನ ಎಂಜಿ ರಸ್ತೆಯಲ್ಲಿರುವ ಜೆಎಸ್‍ಎಸ್ ಆಸ್ಪತ್ರೆ ಆವರಣದಲ್ಲಿ ಇಂದಿನಿಂದ ಆರಂಭವಾಗಿದೆ.ಜೆಎಸ್‍ಎಸ್ ವೈದ್ಯಕೀಯ ಮಹಾ ವಿದ್ಯಾಲಯದ ವಿಧಿ ವಿಜ್ಞಾನ ಮತ್ತು ಮೆಡಿ ಸಿನ್ ವಿಭಾಗದ ವತಿಯಿಂದ ಏರ್ಪಡಿಸಿ ರುವ ವಸ್ತು ಪ್ರದರ್ಶನವನ್ನು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಟೇಪು ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ತೆರೆದಿರುವ ವಸ್ತು ಪ್ರದರ್ಶನಕ್ಕೆ ಉಚಿತ ಪ್ರವೇಶವಿದೆ. ಜೆಎಸ್‍ಎಸ್ ವೈದ್ಯಕೀಯ ಮಹಾವಿದ್ಯಾಲಯದಿಂದ ವಸ್ತು ಪ್ರದರ್ಶನ ದಲ್ಲಿ ವಿಷ ಮಾಹಿತಿ ಕೇಂದ್ರ(Poison Information Centre) ಸ್ಥಾಪಿಸಿದ್ದು, ಹಾವು ಕಚ್ಚಿದಲ್ಲಿ ಮಾಡಬೇಕಾದ ಪ್ರಥಮ ಚಿಕಿತ್ಸೆ, ಸೇವಿಸಿದ ವಿಷ, ಕೀಟನಾಶಕಗಳ ಸುರಕ್ಷಿತ ಬಳಕೆ, ಹಿರಿಯರಲ್ಲಿ ವಿಷ ಸೇವನೆ ಬಗ್ಗೆ ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮ ಹಾಗೂ ಮಾಡಬೇಕಾದ ಪ್ರಥಮ ಚಿಕಿತ್ಸೆ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅಗತ್ಯ ಮಾಹಿತಿ ಇರುವ ಮುದ್ರಿಕೆ ಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ.

ವಿಷ ಮಾಹಿತಿ ಕೇಂದ್ರವು ಸೋಮವಾರ ದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಹಾಗೂ ಶನಿವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ತೆರೆದಿರುತ್ತದೆ. ಉಚಿತ ದೂರವಾಣಿ ಸಂಖ್ಯೆ 1800-425-0207ಗೆ ಕರೆ ಮಾಡಿ ಅಥವಾ ವೆಬ್‍ಸೈಟ್ www.pic jsscpm.jss uni.edu.in ಅಥವಾ ಇ-ಮೇಲ್ pic.jsscp@jssuni. edu.in ಅನ್ನು ಸಂಪರ್ಕಿಸಬಹುದೆಂದು ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಲಾಗುತ್ತಿದೆ.

ಸುರಕ್ಷಿತ ಔಷಧ: ಜೆಎಸ್‍ಎಸ್ ಮೆಡಿ ಕಲ್ ಕಾಲೇಜಿನಿಂದ ರೋಗ ಗುಣ ಪಡಿಸು ವುದು, ರೋಗ ಲಕ್ಷಣಗಳನ್ನು ತಡೆಗಟ್ಟು ವುದು, ಔಷಧಿ, ಮಾತ್ರೆ, ಸಿರಪ್, ಮುಲಾಮು ಮತ್ತು ಇಂಜಕ್ಷನ್‍ಗಳನ್ನು ಸರಿಯಾದ ರೀತಿ ಯಲ್ಲಿ ಬಳಸುವ ಬಗ್ಗೆ ಕ್ಲಿನಿಕಲ್ ಫಾರ್ಮಸಿ ವಿಭಾಗದಿಂದ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ.

ಅಪರಾಧ ಮತ್ತು ತನಿಖೆ: ಸಮಾಜದಲ್ಲಿ ನಡೆಯುವ ವಿವಿಧ ಬಗೆಯ ಅಪರಾಧ ಕೃತ್ಯಗಳು ಹಾಗೂ ತನಿಖಾ ಕ್ರಮ, ಬಳಸುವ ಉಪಕರಣಗಳ ಬಗ್ಗೆ ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಫೊರೆನ್ಸಿಕ್ ವಿಭಾಗ ದಿಂದ ಕ್ರೈಂ ಸೀನ್ ನಡೆದ ಸ್ಥಳಕ್ಕೆ ಪೊಲೀ ಸರು ತೆರಳುವ ಮುನ್ನ ಯಾರೂ ಹೋಗ ಬಾರದು, ಫುಟ್‍ಪ್ರಿಂಟ್ಸ್, ಬೆರಳಚ್ಚು ಪಡೆದು ತನಿಖೆ ನಡೆಸುವ ಬಗ್ಗೆ ವಸ್ತು ಪ್ರದರ್ಶನ ದಲ್ಲಿ ಮಾಹಿತಿ ನೀಡಲಾಗಿದೆ.

ಕೊಲೆಯಾದ, ಅಪಘಾತಕ್ಕೀಡಾದ, ನೀರಿಗೆ ಬಿದ್ದ, ಬೆಂಕಿಗಾಹುತಿ, ನೇಣಿಗೆ ಶರಣಾಗಿ ಸಾವನ್ನಪ್ಪಿದಾಗ ಮೃತ ದೇಹದಲ್ಲಾಗುವ ಬದ ಲಾವಣೆ ಮೆಡಿಕೋ-ಲೀಗಲ್ ಅಟೋಪ್ಸಿ, ಮೆಕ್ಯಾನಿಕಲ್ ಇಂಜುರೀಸ್, ವಿಷಯ ಸಂಬಂಧವೂ ಮಳಿಗೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ನೀಡಲಾಗುತ್ತಿದೆ.

ವಾಯ್ಸ್ ರೆಕಾರ್ಡ್: ಅಪರಾಧ ಕೃತ್ಯ ಗಳಲ್ಲಿ ಮಾತನಾಡಿದ ಮಾತುಗಳ ವಾಯ್ಸ್ ರೆಕಾರ್ಡ್ ಅನ್ನು ಪರಿಶೀಲಿಸಿ ವ್ಯಕ್ತಿಯ ವಾಯ್ಸ್ ಅನ್ನು ಪತ್ತೆ ಮಾಡುವ ಕ್ರಮ, ಬಳಸುವ ಉಪಕರಣಗಳ ಬಗ್ಗೆ ಜೆಎಸ್‍ಎಸ್ ಸ್ಪೀಚ್ ಅಂಡ್ ಹಿಯರಿಂಗ್ ವಿಭಾಗದ ವಿದ್ಯಾರ್ಥಿ ಗಳು ಹಾಗೂ ಸಿಬ್ಬಂದಿ ವಿವರಿಸುತ್ತಿದ್ದಾರೆ.

ಸಂಚಾರ ಪೊಲೀಸ್: ಸುರಕ್ಷಾ ಸಂಚಾರಕ್ಕೆ ಬಳಸುತ್ತಿರುವ ಡಿವೈಸ್ ಬ್ಲಾಕ್‍ಬೆರಿ, ಹ್ಯಾಂಡ್ ಹೆಲ್ಡ್ ಡಿವೈಸ್, ಆಲ್ಕೋಮೀಟರ್, ಶೋಲ್ಡರ್ ಲೈಟ್, ಬಾಡಿವೋರ್ನಡ್ ಕ್ಯಾಮೆರಾ, ರಿಫ್ಲೆ ಕ್ಟಿಂಗ್ ಜಾಕೆಟ್, ವಾಹನಗಳ ವ್ಹೀಲ್ ಲಾಕರ್, ಹೆದ್ದಾರಿ ಪೆಟ್ರೋಲಿಂಗ್ ವಾಹನಗಳ ಸಲಕರಣೆ ಗಳ ಬಗ್ಗೆ ವಿವಿ ಪುರಂ ಸಂಚಾರ ಠಾಣೆ ಪೊಲೀ ಸರು ಪ್ರದರ್ಶನದಲ್ಲಿ ಮಾಹಿತಿ ನೀಡಲಾಗುತ್ತಿದೆ.

ಆಯುಧಗಳ ಪ್ರದರ್ಶನ: ಕೆಪಿಎ ಪೊಲೀ ಸರು ಇಲಾಖೆಯಲ್ಲಿ ಬಳಸುವ 5.56 ಎಂ ಎಂ ಇನ್ಸಾಸ್, 0.303 ರೈಫಲ್, 7.62 ಎಂ ಎಂ(ಎಕೆ-47), 9 ಎಂಎಂ ಕಾರ್ಬಿನ್, ರಿವಾಲ್ಟರ್, ಪಿಸ್ತೂಲ್ ಸೇರಿದಂತೆ ಇತರ ವೆಪನ್‍ಗಳು ಹಾಗೂ ಗುಂಡುಗಳನ್ನೂ ಸಹ ಇಲ್ಲಿ ಪ್ರದರ್ಶನಕ್ಕಿರಿಸಲಾಗಿದೆ.

ಆಹಾರ ಕಲಬೆರಕೆ: ಯುವರಾಜ ಕಾಲೇ ಜಿನ ಫುಡ್ ಸೈನ್ಸಸ್ ಅಂಡ್ ನ್ಯೂಟ್ರಿಷಿ ಯನ್ ವಿಭಾಗದ ಮುಖ್ಯಸ್ಥ ಡಾ.ಶೇಖರ್ ನಾಯಕ್ ಅವರ ನೇತೃತ್ವದಲ್ಲಿ ಆಹಾರ ಕಲ ಬೆರಕೆ ಮಾಡಿರುವುದನ್ನು ಪತ್ತೆ ಮಾಡುವ ಬಗ್ಗೆ ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗದವರು ಸ್ಥಳದಲ್ಲೇ ಪ್ರಾತ್ಯಕ್ಷಿಕೆ ಮಾಡಿ ಜನರಿಗೆ ತಿಳುವಳಿಕೆ ಮೂಡಿಸುತ್ತಿದ್ದಾರೆ.

ಬುಸುಗುಟ್ಟಿದ ಹಾವುಗಳು: ವಿಧಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಉರಗ ತಜ್ಞ ಸ್ಕೇಕ್ ಶ್ಯಾಂ ಅವರು ವಿವಿಧ ಜಾತಿಯ ಹಾವುಗಳ ಗುಣ ಲಕ್ಷಣ, ಜೀವನ ಕ್ರಮ, ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಟಿವಿ ಪರದೆ ಮೂಲಕ ವಿದ್ಯಾರ್ಥಿಗಳು, ಸಾರ್ವ ಜನಿಕರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

ವಿಧಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸುಳವಾಡಿ ಮಾರಮ್ಮನ ಪ್ರಸಾದಕ್ಕೆ ವಿಷ ಬೆರೆಸಿದ ಪ್ರಕರಣ ಪ್ರತಿಧ್ವನಿ

ಮೈಸೂರು: ಕೊಳ್ಳೇಗಾಲದ ಸುಳವಾಡಿ ಕಿಚ್‍ಗುತ್ ಮಾರಮ್ಮನ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಬೆರೆಸಿ 15 ಮಂದಿ ಬಲಿ ಪಡೆದ ಪ್ರಕರಣ ಇದೀಗ ರಾಜ್ಯವಷ್ಟೇ ಅಲ್ಲ, ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದೆ.

ಪ್ರಕರಣ ಸಂಬಂಧ ಆರೋಪಿಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಷಪ್ರಾಶನ ಘಟನೆಯು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದಂತೆಯೇ ಪೊಲೀಸರು ವಿಷಾಹಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾರಂಭಿಸಿದ್ದಾರೆ. ಮೈಸೂರಿನ ಎಂ.ಜಿ ರಸ್ತೆಯಲ್ಲಿರುವ ಜೆಎಸ್‍ಎಸ್ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿರುವ 3 ದಿನಗಳ ವಿಧಿವಿಜ್ಞಾನ ವಸ್ತು ಪ್ರದರ್ಶನ (Forensic Fair)ದಲ್ಲೂ ಸುಳವಾಡಿ ಮಾರಮ್ಮನ ದೇವಸ್ಥಾನ ದಲ್ಲಿ ನಡೆದ ಪ್ರಸಾದಕ್ಕೆ ವಿಷ ಪ್ರಾಶನ ಮಾಡಿದ ಘಟನೆಯನ್ನು ಕೆಪಿಎ ಪೊಲೀಸರು ಪ್ರಾತ್ಯಕ್ಷತೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ವಸ್ತು ಪ್ರದರ್ಶನದ 12 ಮಳಿಗೆಗಳ ಪೈಕಿ ಒಂದರಲ್ಲಿ ದೇವಸ್ಥಾನದ ಪ್ರತಿರೂಪ ರಚನೆ, ಅಲ್ಲಿ ಪೂಜಾ `ಸಾಮಗ್ರಿಗಳನ್ನಿಟ್ಟು, ಅದರೆದುರೇ ವಿಷ ಮಿಶ್ರಿತ ಪ್ರಸಾದ ತಿಂದು ಸಾವನ್ನಪ್ಪಿರುವವರ ಬಿಂಬಿಸುವ ಪಿಓಪಿ ಪ್ರತಿಕೃತಿಗಳನ್ನು ತಯಾ ರಿಸಿದ್ದು, ನೋಡುಗರ ಮನ ಕರಗುವಂತೆ ಮಾಡಿದೆ. ಪ್ರಸಾದ ತಯಾರಿಕೆ, ತರಕಾರಿಗಳು ಚೆಲ್ಲಾಪಿಲ್ಲಿಯಾಗಿರುವುದು, ಪಕ್ಕದಲ್ಲೇ ವಿಷದ ಬಾಟಲಿ ಇರುವ ಈ ಚಿತ್ರಣ ನೋಡುತ್ತಿದ್ದಂತೆಯೇ ವಿದ್ಯಾರ್ಥಿ ಗಳು ಹಾಗೂ ಸಾರ್ವಜನಿಕರಲ್ಲಿ ಸುಳವಾಡಿ ವಿಷ ಪ್ರಾಶನ ದುರಂತ ಕಣ್ಮುಂದೆ ಬರುತ್ತಿದೆ. ಅಪರಾಧ ಪ್ರಕರಣ ಮತ್ತು ತನಿಖಾ ಕ್ರಮವನ್ನು ಪ್ರತಿಬಿಂಬಿಸುವ ಈ ವಿಧಿವಿಜ್ಞಾನ ವಸ್ತು ಪ್ರದರ್ಶನ ದಲ್ಲಿ ಸುಳವಾಡಿ ಘಟನೆಯನ್ನು ನೆನಪಿಸುವ `ಈ ಮಳಿಗೆ ಅತ್ಯಾ ಕರ್ಷಣೆ ಕೇಂದ್ರವಾಗಿದ್ದು, ವಸ್ತು ಪ್ರದರ್ಶನ ಉದ್ಘಾಟಿಸಿದ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸಹ ಈ ಮಳಿಗೆಯ ಚಿತ್ರಣ ಕಂಡು ಕ್ಷಣ ಕಾಲ ಮೌನಕ್ಕೆ ಶರಣಾದರು.

ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದವರು ಮೊದಲು ಸುಳ ವಾಡಿ ಕಿಚ್‍ಗುತ್ ಮಾರಮ್ಮನ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಬೆರೆಸಿದ ಘಟನೆಯನ್ನು ಕಣ್ಣಿಗೆ ಕಟ್ಟಿಕೊಡುವ ಈ ಮಳಿಗೆ ಪ್ರವೇಶಿಸಿದವರು ಅರೆ ಕ್ಷಣ ನಿಂತು ಮೌನಕ್ಕೆ ಶರಣಾಗುತ್ತಿದ್ದಾರೆ.ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ) ಡಿವೈ ಎಸ್ಪಿಗಳಾದ ಜೈಮಾರುತಿ, ಪ್ರಭಾಕರರಾವ್ ಸಿಂಧೆ, ಎಂ.ಟಿ.ಕುಮಾರ್ ಹಾಗೂ ಸಿಬ್ಬಂದಿ ಮಳಿಗೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸುಳವಾಡಿ ಘಟನೆ ಬಗ್ಗೆ ವಿವರಣೆ ನೀಡಿ, ವಿಷ ಪ್ರಾಶನ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

Translate »