ಇಂಡಿಯನ್ ಫಿಲಂ ಮೇಕರ್ಸ್‍ಗೆ ಚಾಲನೆ  
ಸಿನಿಮಾ

ಇಂಡಿಯನ್ ಫಿಲಂ ಮೇಕರ್ಸ್‍ಗೆ ಚಾಲನೆ  

August 7, 2020

ಕನ್ನಡ ಚಿತ್ರರಂಗ ಈಗ ಉದ್ಯಮವಾಗಿ ಬೆಳೆದುನಿಂತಿದೆ. ಫಿಲಂ ಚೇಂಬರ್, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರ ಸಂಘ ಸೇರಿದಂತೆ ಉದ್ಯಮಕ್ಕೆ ಸಂಬಂಧಪಟ್ಟ ಬಹುತೇಕ  ವಿಭಾಗಗಳಿಗೆ ಅದರದೇ ಆದ ಸಂಘ, ಸಂಸ್ಥೆಗಳಿವೆ. ಅವೆಲ್ಲ ಸದಸ್ಯರ ಕಷ್ಟ, ನಷ್ಟಗಳಿಗೆ ಸ್ಪಂದಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅದೇರೀತಿ ಚಿತ್ರರಂಗದ 27 ವಿಭಾಗಗಳನ್ನು ಗಮನದಲ್ಲಿಟ್ಟುಕೊಂಡು “ಇಂಡಿಯನ್ ಫಿಲಂ ಮೇಕರ್ಸ್  ಅಸೋಸಿಯೇಷನ್” ಎನ್ನುವ ಸಂಸ್ಥೆ ಆರಂಭವಾಗಿದೆ. ಇದು ಕರ್ನಾಟಕ ಮಾತ್ರವಲ್ಲದೆ ದೇಶದ ಬಹುತೇಕ ರಾಜ್ಯಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಇದರ ನೇತೃತ್ವವನ್ನು ನಿರ್ಮಾಪಕ ಪಿ.ಮೂರ್ತಿ ಅವರು ವಹಿಸಿಕೊಂಡಿದ್ದಾರೆ. ಅಲ್ಲದೆ ಹೆಚ್.ಆರ್.ದಿಲೀಪ್‍ಕುಮಾರ್ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಉದ್ಘಾಟನಾ ಪತ್ರಿಕಾಗೋಷ್ಟಿ  ಇತ್ತೀಚೆಗೆ ಎಸ್‍ಆರ್‍ವಿ ಥಿಯೇಟರಿನಲ್ಲಿ  ನಡೆಯಿತು.  ಈ ಮೂಲಕ ಕಳೆದ ನಾಲ್ಕೂವರೆ ತಿಂಗಳಿಂದ ನಿಂತುಹೋಗಿದ್ದ ಚಲನಚಿತ್ರ ಪತ್ರಿಕಾಗೋಷ್ಟಿಗಳಿಗೆ “ಐಎಫ್‍ಎಂಎ”ನಿಂದ ಮತ್ತೆ ಚಾಲನೆ ದೊರಕಿದಂತಾಯಿತು. ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ  ಐಎಫ್‍ಎಂಎ ಸಂಸ್ಥೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತೆರೆಯ ಮೇಲೆ ಹಿರಿಯರಾದ  ದೊಡ್ಡರಂಗೇಗೌಡ, ವಿ.ಮನೋಹರ್, ಸುನಿಲ್ ಪುರಾಣಿಕ್, ಬೆಂಗಳೂರು ನಾಗೇಶ್  ಅಲ್ಲದೆ  ನಟ ಪ್ರಥಮ್, ನಾಗೇಂದ್ರ ಪ್ರಸಾದ್, ನಾಗೇಂದ್ರ ಅರಸ್ ಹಾಗೂ ಇನ್ನು ಮುಂತಾದವರ ಶುಭ ಹಾರೈಕೆಯೊಂದಿಗೆ  ತೋರಿಸಲಾಯಿತು.

ಮೊದಲಿಗೆ ದಿಲೀಪ್‍ಕುಮಾರ್ ಮಾತನಾಡುತ್ತ ಚಿತ್ರರಂಗದ 27 ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರ ಹಿತವನ್ನು ಗಮನದಲ್ಲಿಟ್ಟುಕೊಂಡು ಇಂಡಿಯನ್ ಫಿಲಂ ಮೇಕರ್ಸ್  ಅಸೋಸಿಯೇಷನ್ ಸಂಸ್ಥೆ ಕೆಲಸ ಮಾಡುತ್ತದೆ. ಇಲ್ಲಿ ಸದಸ್ಯರಾಗಿ ಐಡಿ ಕಾರ್ಡ್ ಪಡೆದರೆ,  ಭಾರತದ ಯಾವುದೇ  ಚಿತ್ರರಂಗದಲ್ಲಿ ಆದರೂ ಕೆಲಸ ಮಾಡಬಹುದು. ಅಲ್ಲದೆ  60 ವರ್ಷ ಮೇಲ್ಪಟ್ಟ ಸದಸ್ಯರಿಗೆ ಪಿಂಚಣಿ ಯೋಜನೆ ಕೂಡ  ಇರುತ್ತದೆ. ನಮಗೆ ದೆಹಲಿ ಸರ್ಕಾರ, ಎಂಎಸ್‍ಎಂಇ ಅಲ್ಲದೆ ರಾಜ್ಯಸರ್ಕಾರ ಕೂಡ ಅನುಮತಿ ಪತ್ರ ನೀಡಿದೆ ಎಂದು ಎಲ್ಲಾ ದಾಖಲೆಗಳ ಪ್ರತಿಯನ್ನು ತೋರಿಸಿದರು. ಆನಂತರ ಸಂಘದ ಅಧ್ಯಕ್ಷ ಪಿ.ಮೂರ್ತಿ ಮಾತನಾಡುತ್ತ ಪ್ರತಿಯೊಬ್ಬರಿಗೂ ಸಿನಿಮಾರಂಗದಲ್ಲಿ ಸಾಧನೆ ಮಾಡಬೇಕೆಂಬ ಆಸೆಯಿರುತ್ತದೆ. ಅಂಥವರಿಗೆ ನಮ್ಮ ಸಂಸ್ಥೆ ದಾರಿ ಮಾಡಿಕೊಡುತ್ತದೆ. ಚಿತ್ರರಂಗದ ಯಾವುದೇ ವಿಭಾಗದಲ್ಲಿ  ಕೆಲಸ ಮಾಡುವವರಿಗೆ ಏನಾದರೂ ತೊಂದರೆ ಉಂಟಾದರೆ ಅಂಥವರ ಸಹಾಯಕ್ಕೆ ಇಂಡಿಯನ್ ಫಿಲಂ ಮೇಕರ್ಸ್  ಅಸೋಸಿಯೇಷನ್ ಮುಂದೆ ಬರುತ್ತದೆ. ನಾವು ಸದಸ್ಯರಿಗೆ ಬ್ಯಾಂಕ್‍ನಲ್ಲಿ ಉಚಿತವಾಗಿ ಕರೆಂಟ್ ಅಕೌಂಟ್ ಮಾಡಿಸಿಕೊಡುತ್ತೇವೆ ಎಂದು ಸದಸ್ಯರಿಗಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

 

 

 

Translate »