ರಾಜ್ಯ 14 ದಿನ ಬಂದ್
News

ರಾಜ್ಯ 14 ದಿನ ಬಂದ್

April 28, 2021

ಬೆಂಗಳೂರು, ಏ. 27(ಕೆಎಂಶಿ)- ಕೋವಿಡ್ ಸೋಂಕು ನಿಯಂತ್ರಿಸಲು ಜಾರಿಗೆ ತಂದಿರುವ ಕೊರೊನಾ ಕಫ್ರ್ಯೂ ಸಂದರ್ಭ ದಲ್ಲಿ ಅನಗತ್ಯವಾಗಿ ಬೀದಿಗಿಳಿದರೆ, ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

ಸೋಂಕು ನಿವಾರಣೆಗಾಗಿ ಇಂದು ರಾತ್ರಿಯಿಂದಲೇ 14 ದಿನಗಳ ಕಾಲ ಕೊರೊನಾ ಕಫ್ರ್ಯೂ ಜಾರಿಯಲ್ಲಿದ್ದು, ಅಗತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳುವವರು ಮಾತ್ರ ಮನೆಯಿಂದ ಹೊರಗೆ ಬರಬೇಕು. ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿದರೆ, ಅಂತಹವರಿಗೆ ಪೊಲೀಸರು ರುಚಿ ತೋರಿಸಲಿದ್ದಾರೆ.

ಹಾಲು, ಹಣ್ಣು, ತರಕಾರಿ, ಆಹಾರ ಪದಾರ್ಥ ಸೇರಿದಂತೆ ಅವಶ್ಯಕ ಸಾಮಗ್ರಿ ಖರೀದಿಸಲು ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ಅವಕಾಶ ಕಲ್ಪಿಸಿದೆ. ತದನಂತರ ಆರೋಗ್ಯ ಸೇವೆ ಸೇರಿದಂತೆ ಅತ್ಯವಶ್ಯಕ ಸೇವೆಗಳಿಗೆ ಮಾತ್ರ ಪೂರ್ಣ ಅವಕಾಶವಿದೆ.

ಕೊರೊನಾ ಕಫ್ರ್ಯೂ ಸಂದರ್ಭದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಮತ್ತು ಖಾಸಗಿ ವಾಹನಗಳು ರಸ್ತೆಗಿಳಿ ಯುವುದಿಲ್ಲ. ಸರ್ಕಾರಿ ಕಚೇರಿ, ಆರೋಗ್ಯ ಸೇವೆ ಕೈಗಾರಿಕಾ ಉದ್ಯಮಗಳಿಗೆ ತೆರಳುವವರು ತಮ್ಮ ಗುರುತಿನ ಚೀಟಿ ಇಟ್ಟು ಕೊಂಡು ತಮ್ಮ ಸೇವೆಗೆ ತೆರಳಬೇಕು. ಇಲ್ಲದಿದ್ದರೆ, ದಂಡ ತೆರಬೇಕಾಗುತ್ತದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಮುಂದಿನ ಮೇ 12 ರವರೆಗೂ ಇಂತಹ ಕಠಿಣ ನಿರ್ಧಾರ ಕೈಗೊಂಡಿದೆ. ಇದರ ಉಸ್ತುವಾರಿ ಹೊಣೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಹಿಸಲಾಗಿದೆ. ಅಲ್ಲದೆ, ಜಿಲ್ಲಾಧಿ ಕಾರಿಗಳು, ತಾಲೂಕು ತಹಶೀಲ್ದಾರ್ ಅಧಿಕಾರಿಗಳು ಕೊರೊನಾ ಕಫ್ರ್ಯೂವನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಹೊಣೆಗಾರಿಕೆ ವಹಿಸಲಾಗಿದೆ. ಸರ್ಕಾರ ಕೊರೊನಾ ಕಫ್ರ್ಯೂ ಪ್ರಕಟಿಸುತ್ತಿದ್ದಂತೆ ರಾಜಧಾನಿಯಿಂದ ಲಕ್ಷಾಂತರ ಮಂದಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಇದು ರಾಜಧಾನಿಗೆ ಸೀಮಿತವಲ್ಲದೆ, ಉಳಿದ ಪ್ರಮುಖ ನಗರಗಳಲ್ಲೂ ಇದೇ ಪರಿಸ್ಥಿತಿ ಬಂದಿದೆ. ನಗರದಿಂದ ಊರುಗಳಿಗೆ ತೆರಳಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಂದು ದಿನದ ವಿನಾಯಿತಿ ನೀಡಿದ್ದಲ್ಲದೆ, ಹೆಚ್ಚುವರಿ ಬಸ್ ಸೇವೆ ಒದಗಿಸಿತ್ತು. ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವ ರಾಜ್ ಬೊಮ್ಮಾಯಿ ರಾತ್ರಿಯಿಂದ ಆರಂಭವಾಗಲಿರುವ 14 ದಿನಗಳ ಕೊರೊನಾ ಕಫ್ರ್ಯೂ ಸಂದರ್ಭ ದಲ್ಲಿ ಜನ ತಮ್ಮಷ್ಟಕ್ಕೆ ತಾವೇ ಸ್ವಯಂ ನಿಯಂತ್ರಣ ಮಾಡಿ ಕೊಂಡರೆ ಕೊರೊನಾ ಎದುರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಜನರ ಸಂಪೂರ್ಣ ಸಹಕಾರ ಕೋರಿದ್ದಾರೆ. ಸರ್ಕಾರ ಕೈಗೊಂಡಿ ರುವ ಈ ಬಿಗಿ ಕ್ರಮಗಳನ್ನು ಯಶಸ್ವಿಗೊಳಿಸಬೇಕಾದ ಜವಾ ಬ್ದಾರಿ ರಾಜ್ಯದ ಜನರ ಮೇಲಿದೆ ಎಂದರು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊರೊನಾ ನಿಯಂತ್ರಿ ಸಲು ಬಿಗಿ ಕ್ರಮ ಕೈಗೊಳ್ಳುವ ನಿರ್ಧಾರ ಜಾರಿಗೊಳಿಸ ಲಾಗಿದೆ. ಈ ಬಿಗಿ ಕ್ರಮಕ್ಕೆ ಜನ ಸ್ವಯಂ ಪ್ರೇರಣೆಯಿಂದ ಸ್ಪಂದಿಸಬೇಕಾದ ಅವಶ್ಯಕತೆಯಿದೆ. ಸ್ವಯಂ ನಿಯಂತ್ರಣ ದಲ್ಲಿಯೇ ಕೊರೊನಾ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು. ಈ 14ದಿನಗಳ ಕಾಲ ಪ್ರತಿ ಯೊಬ್ಬರು ಜಾಗೃತರಾಗಿರಬೇಕು. ನಮ್ಮ ಆರೋಗ್ಯದ ಜೊತೆ ಇತರರ ಆರೋಗ್ಯವೂ ಮುಖ್ಯ ಎಂಬುದನ್ನು ಮನಗಾಣಬೇಕು. ಸರ್ಕಾರ ಹೇರಿರುವ ನಿರ್ಬಂಧಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು ಬಹಳ ಅವಶ್ಯವಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಫ್ರ್ಯೂ ಯಶಸ್ವಿಗೊಳಿಸಬೇಕಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಮಹಾರಾಷ್ಟ್ರ ಸರ್ಕಾರ ಬಿಗಿ ಕ್ರಮ ಕೈಗೊಂಡಿದೆ. ಹೀಗಾಗಿ ಆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ನಮ್ಮ ಮುಖ್ಯಮಂತ್ರಿಗಳು ಬಿಗಿ ಕ್ರಮದ ತೀರ್ಮಾನ ಮಾಡಿದ್ದಾರೆ. ಸರ್ಕಾರದ ನಿಯಮಗಳನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯ. ಕಫ್ರ್ಯೂ ಸಂದರ್ಭದಲ್ಲಿ ವಿನಾಕಾರಣ ಹೊರಗೆ ಓಡಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಉದ್ದೇಶಪೂರ್ವಕವಾಗಿ ಕೊರೊನಾ ಕಫ್ರ್ಯೂ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.

Translate »