ಮೈಸೂರಲ್ಲಿ ನವೆಂಬರ್ 11ರಂದು ಕೆಯುಡಬ್ಲ್ಯುಜೆ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಸಂಬಂಧ ಚರ್ಚೆ
ಮೈಸೂರು

ಮೈಸೂರಲ್ಲಿ ನವೆಂಬರ್ 11ರಂದು ಕೆಯುಡಬ್ಲ್ಯುಜೆ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಸಂಬಂಧ ಚರ್ಚೆ

October 25, 2018

ಮೈಸೂರು:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಮೊದಲ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಮೈಸೂರಿನಲ್ಲಿ ನಡೆಸುವ ಸಂಬಂಧ ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ನ.11ರಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ನಡೆಸುವ ಕುರಿತು ಚರ್ಚಿಸಲಾಯಿತು. ರಾಜ್ಯ ಕಾರ್ಯಕಾರಿ ಸಮಿತಿ ಸಭೆಗೆ ರಾಜ್ಯದ ಎಲ್ಲಾ ಜಿಲ್ಲೆಗಳ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು, ಆಯಾ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳನ್ನು ಕಡ್ಡಾಯವಾಗಿ ಆಹ್ವಾನಿ ಸುವುದು, ಸಭೆಗೆ ಆಗಮಿಸುವವರಿಗೆ ವಾಸ್ತವ್ಯ ವ್ಯವಸ್ಥೆ ಇನ್ನಿತರ ಕುರಿತು ರೂಪು ರೇಷೆ ಸಿದ್ದಪಡಿಸಲಾಯಿತು ಎಂದು ರಾಜ್ಯ ಸಮಿತಿ ಸದಸ್ಯ ಎಂ.ಆರ್.ಸತ್ಯನಾರಾಯಣ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಾನಂದ ತಗಡೂರು, ಮೈಸೂರು ಜಿಲ್ಲಾ ಸಂಘ ನೀಡಿದ ಮೌಲ್ಯಯುತ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಿ, ಎಲ್ಲರ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಸಭೆಯ ಅಜೆಂಡಾ ಸಿದ್ಧಪಡಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನಗರ ಉಪಾಧ್ಯಕ್ಷ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Translate »