ಆಟೋಗೆ ಕೇರಳ ಸಾರಿಗೆ ಬಸ್ ಡಿಕ್ಕಿ
ಮೈಸೂರು

ಆಟೋಗೆ ಕೇರಳ ಸಾರಿಗೆ ಬಸ್ ಡಿಕ್ಕಿ

October 25, 2018

ಮೈಸೂರು: ಆಟೋಗೆ ಕೇರಳ ಸಾರಿಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಆಟೊ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೆಚ್.ಡಿ.ಕೋಟೆ ಸಮೀಪ ಮಾದಾಪುರ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ. ಹೆಚ್.ಡಿ.ಕೋಟೆ ತಾಲೂಕು ಅಂಕನಾಥಪುರ ಗ್ರಾಮದ ನಿವಾಸಿ ಶಿವನಾಗ(45) ಸಾವನ್ನಪ್ಪಿದವರು. ತಾಲೂಕಿನ ಗಿರಿಜನ ಹಾಡಿಯ ದಾಸ ಮತ್ತು ತಿಮ್ಮ ಎಂಬುವರಿಗೆ ತೀವ್ರ ಗಾಯ ಗಳಾಗಿದ್ದು, ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ದಾಸ ಎಂಬುವರಿಗೆ ಸ್ವಯಂ ಉದ್ಯೋಗ ಯೋಜನೆಯಲ್ಲಿ ಸರ್ಕಾರ ನೀಡಿದ್ದ ಆರ್ಥಿಕ ಸಹಾಯ ಧನದಲ್ಲಿ ಖರೀದಿಸಿದ್ದ ಹೊಸ ಆಟೋವನ್ನು ಮೈಸೂರಿನಿಂದ ತೆಗೆದುಕೊಂಡು ಹೋಗುತ್ತಿದ್ದಾಗ ಹೆಚ್.ಡಿ.ಕೋಟೆ ಕಡೆಯಿಂದ ಬರುತ್ತಿದ್ದ ಕೇರಳ ಸಾರಿಗೆ ಸಂಸ್ಥೆ ಬಸ್ಸು ಜಯಪುರ ಮತ್ತು ಹೆಚ್.ಡಿ.ಕೋಟೆ ನಡುವೆ ಮಾದಾಪುರ ಬಳಿ ಇಂದು ಮಧ್ಯಾಹ್ನ 12.30 ಗಂಟೆ ವೇಳೆ ಡಿಕ್ಕಿ ಹೊಡೆಯಿತು. ಬಸ್ಸು ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಚಾಲನೆ ಮಾಡುತ್ತಿದ್ದ ಶಿವನಾಗ ಸ್ಥಳದಲ್ಲೇ ಸಾವನ್ನಪ್ಪಿದರು. ಮೃತದೇಹ ಆಟೋದಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ದಾಸ ಮತ್ತು ತಿಮ್ಮ ಎಂಬುವರಿಗೆ ಗಾಯಗಳಾಗಿದ್ದು, ಸಾರ್ವಜನಿಕರು ಅವರನ್ನು ಬೇರೆ ವಾಹನದಲ್ಲಿ ಮೈಸೂರಿಗೆ ಕರೆತಂದು ಆಸ್ಪತ್ರೆಗೆ ದಾಖಲು ಮಾಡಿದರು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಸರ್ಕಲ್ ಇನ್‍ಸ್ಪೆಕ್ಟರ್ ಕರೀಂ ರಾವತರ್ ಹಾಗೂ ಜಯಪುರ ಠಾಣೆ ಪೊಲೀಸರು ಮಹಜರು ನಡೆಸಿ ಆಟೋದಲ್ಲಿ ಸಿಲುಕಿದ್ದ ಶಿವನಾಗನ ಮೃತದೇಹವನ್ನು ಹೊರ ತೆಗೆದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸಾಗಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಜಯಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Translate »