ರಾಜ್ಯದ ಸಂಸದರ ಹರಾಜು ಅಣಕು: ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ
ಮೈಸೂರು

ರಾಜ್ಯದ ಸಂಸದರ ಹರಾಜು ಅಣಕು: ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ

December 22, 2021

ಮೈಸೂರು,ಡಿ.21(ಪಿಎಂ)-ರಾಜ್ಯದಲ್ಲಿ ಮರಾಠಿ ಪುಂಡರ ದೌರ್ಜನ್ಯ ಅತಿಯಾಗಿದ್ದರೂ ಬಾಯೇ ತೆಗೆಯದೇ ರಾಜ್ಯದ ಸಂಸದರು ಮೌನಕ್ಕೆ ಶರಣಾಗಿ ದ್ದಾರೆಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ರಾಜ್ಯದ ಸಂಸದರನ್ನು ಹರಾಜು ಹಾಕುವಂತೆ ಅಣಕು ಪ್ರದರ್ಶನ ಮಾಡುವ ಮೂಲಕ ವಿನೂತನ ರೀತಿ ಪ್ರತಿಭಟನೆ ನಡೆಸಿದರು.

ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಮಂಗಳವಾರ ಸಂಸದರ ಭಾವಚಿತ್ರಗಳನ್ನು ಪ್ರದರ್ಶಿಸಿ, ಅವುಗಳ ಹರಾಜು ಕೂಗಿದರು. ಸಂಸದರ ಭಾವಚಿತ್ರ ಗಳನ್ನು ಒಂದು ರೂಪಾಯಿಗೆ ಹರಾಜು ಕೂಗುವ ಮೂಲಕ ಅವರನ್ನೇ ಹರಾಜು ಹಾಕುವಂತೆ ಅಣಕಿಸಿದರು.
ಪ್ರತಿಯೊಬ್ಬ ಸಂಸದರ ಹೆಸರನ್ನು ಕೂಗಿದಾಗಲೂ ನೆರೆದಿದ್ದ ಸಾರ್ವಜನಿಕರು ಮೌನ ವಹಿಸಿದ್ದರು. ಸುಮಲತಾ ಅಂಬರೀಷ್ ಅವರ ಸರತಿ ಬಂದಾಗ ಕಾಲೇಜು ವಿದ್ಯಾರ್ಥಿಯೊಬ್ಬ 1 ರೂ. ನೀಡಿ ಅವರ ಭಾವಚಿತ್ರ ಪಡೆದುಕೊಂಡರು. ರಾಜ್ಯಸಭಾ ಸದಸ್ಯರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಹೊರತುಪಡಿಸಿ, ಉಳಿದ ರಾಜ್ಯದ ಸಂಸದರ ಹೆಸರನ್ನು ಹೇಳಿ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿ, ಹರಾಜು ಕೂಗಿ ಅಣುಕ ಮಾಡಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ರಾಜ್ಯದಲ್ಲಿ ಎಂಇಎಸ್ ಸಂಘ ಟನೆ ದೌರ್ಜನ್ಯದ ವಿರುದ್ಧ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದಿಂದ ಯಾವುದೇ ಪ್ರಯೋಜನವಿಲ್ಲ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಂಇಎಸ್ ನಿಷೇಧಕ್ಕೆ ಇಂದು ಸಂಜೆಯೊಳಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಇಲ್ಲವಾದರೆ ನಾಳೆ (ಡಿ.22) ಬೆಳಗ್ಗೆ ಬೆಂಗಳೂರಿನ ವುಡ್‍ಲ್ಯಾಂಡ್ಸ್ ಹೋಟೆಲ್‍ನಲ್ಲಿ ಕನ್ನಡಪರ ಸಂಘಟನೆಗಳ ಸಭೆ ಕರೆದಿದ್ದು, ಈ ಸಭೆಯಲ್ಲಿ ಉಗ್ರ ಹೋರಾಟ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳ ಬೇಕಾಗುತ್ತದೆ. ರಾಜ್ಯ ಸರ್ಕಾರದ ವಿಸರ್ಜನೆಗೂ ಒತ್ತಾಯ ಮಾಡಬೇಕಾಗುತ್ತದೆ. ಉದ್ಧವ್ ಠಾಕ್ರೆ ಸರ್ಕಾರ ವಜಾಕ್ಕೂ ರಾಷ್ಟ್ರಪತಿಗಳನ್ನು ಒತ್ತಾಯಿಸಿ ಕರ್ನಾಟಕ ಬಂದ್‍ಗೂ ಕರೆ ಕೊಡುವ ತೀರ್ಮಾನ ಮಾಡಬೇಕಾ ಗುತ್ತದೆ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿಗಳೇ ಯಾರ್ಯಾರೂ ನಿಮ್ಮನ್ನು ಅಧಿಕಾರದಿಂದ ಇಳಿಸಬೇಕೆಂದು ಓಡಾಡುತ್ತಿದ್ದು, ನಾವು ಆ ಲಿಸ್ಟ್‍ನಲ್ಲಿ ಇಲ್ಲ. ನೀವು ಎಂಇಎಸ್ ಸಂಘಟನೆ ನಿಷೇಧ ಮಾಡಲೇಬೇಕು. ಮರಾಠಿ ಪುಂಡರಿಂದ ರಾಜ್ಯದಲ್ಲಿ ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿದ್ದರೂ ಸಂಸದರು ಮೌನಕ್ಕೆ ಶರಣಾಗಿದ್ದಾರೆ. ಇಂತಹವರಿಗೆ ನಾವು ಏಕೆ ಗೌರವ ಕೊಡಬೇಕು. ಆದ್ದರಿಂದ ಇವರನ್ನು ಹರಾಜು ಮಾಡುತ್ತಿದೇವೆ ಎಂದು ತಿಳಿಸಿದರು. ಈ ಹರಾಜಿನಲ್ಲಿ ಮಾಜಿ ಹೆಚ್.ಡಿ.ದೇವೇಗೌಡರು (ರಾಜ್ಯ ಸಭಾ ಸದಸ್ಯರು) ಇಲ್ಲ. ಮಾಜಿ ಪ್ರಧಾನಿ ಆದ ಕಾರಣ ಅವರಿಗೆ ಗೌರವ ಕೊಟ್ಟಿದ್ದೇವೆ. ಜೊತೆಗೆ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಉತ್ತಮವಾಗಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಈ ಇಬ್ಬರನ್ನು ಬಿಟ್ಟು ಉಳಿದವರನ್ನು ಹರಾಜು ಹಾಕುತ್ತಿದ್ದೇವೆ ಎಂದು ತಿಳಿಸಿದರು. ಕನ್ನಡಪರ ಹೋರಾಟಗಾರರಾದ ತಾಯೂರು ವಿಠ್ಠಲಮೂರ್ತಿ, ಬಿ.ಎಂ.ಶಿವಶಂಕರ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »