ಬಿರುಗಾಳಿ ಮಳೆಗೆ ನೆಲಕಚ್ಚಿದ ಚಪ್ಪರದಡಿ ಪಡುವಲಕಾಯಿ
ಮೈಸೂರು

ಬಿರುಗಾಳಿ ಮಳೆಗೆ ನೆಲಕಚ್ಚಿದ ಚಪ್ಪರದಡಿ ಪಡುವಲಕಾಯಿ

May 28, 2020

ಮೈಸೂರು,ಮೇ 27(ವೈಡಿಎಸ್)- 30 ಗುಂಟೆಯಲ್ಲಿ ಪಡುವಲಕಾಯಿ ಬೆಳೆ ಮಾಡಿದ ದಿನದಿಂದ ಹಗಲು-ರಾತ್ರಿ ಎನ್ನದೇ ಕೆಲಸ ಮಾಡಿದೆವು. ಉತ್ತಮ ಫಸಲೂ ಬಂದಿತ್ತು. ಆದರೆ, 5 ದಿನಗಳ ಹಿಂದೆ ಬೀಸಿದ ಬಿರುಗಾಳಿ ಯಿಂದ ಪಡುವಲಕಾಯಿ ಬಳ್ಳಿಗೆ ಹಾಕಿದ್ದ ಚಪ್ಪರ ಪೂರ್ಣ ನೆಲಕಚ್ಚಿದ್ದು, ಕಾಯಿಗಳು ಕೊಳೆಯುತ್ತಿವೆ. ಮತ್ತೆ ಚಪ್ಪರ ನಿರ್ಮಿಸಬೇಕಾದರೆ ಹಣಬೇಕು. ಇದ್ದ ಅಲ್ಪ-ಸ್ವಲ್ಪ ಹಣ ವನ್ನು ಬೆಳೆಗೆ ಖರ್ಚು ಮಾಡಿದ್ದೇವೆ. ಮತ್ತೆ ಹಣ ಹೊಂದಿಸುವುದು ಹೇಗೆಂಬ ಚಿಂತೆ ಕಾಡುತ್ತಿದೆ…

ಇದು ಮೆಲ್ಲಹಳ್ಳಿ ರೈತ ಮಹದೇವು ಅವರ ಕೊರಗು.ಚಪ್ಪರವನ್ನು ಮತ್ತೆ ನಿರ್ಮಿಸಬೇಕೆಂದರೆ ಮರದ ಕಂಬ, ತಂತಿ, ದಾರಕ್ಕೆ 20 ಸಾವಿರ ರೂ.ಗಳಾದರೂ ಬೇಕು. ಇದ್ದ ಹಣವನ್ನೆಲ್ಲಾ ಬೆಳೆಗೆ ಖರ್ಚು ಮಾಡಿದ್ದೇನೆ. ಈಗೇನು ಮಾಡುವುದು ಎಂದು ಅಳಲು ತೋಡಿಕೊಂಡರು.

ನಾನು 15 ವರ್ಷದಿಂದ ಬೇಸಾಯ ಮಾಡುತ್ತಿದ್ದು, ಟೊಮೆಟೊ, ಬೆಂಡೆ, ಸಾಂಬಾರ್ ಸೌತೆ, ಪಡುವಲ ಕಾಯಿ, ಸೋರೆಕಾಯಿ ಮತ್ತಿತರೆ ತರಕಾರಿಗಳನ್ನು ಬೆಳೆ ಯುತ್ತಿದ್ದೇನೆ. ಈ ಬಾರಿ 30 ಗುಂಟೆಯಲ್ಲಿ 50 ಸಾವಿರ ರೂ. ಖರ್ಚು ಮಾಡಿ ಪಡುವಲಕಾಯಿ ಬೆಳೆದಿದ್ದೆ. 1 ಟನ್ ಕೊಯ್ದು ಎಪಿಎಂಸಿಗೆ ತೆಗೆದುಕೊಂಡು ಹೋದರೆ ಕೆಜಿ 5 ರೂ.ನಂತೆ ಮಾರಾಟವಾಯಿತು. ಹಣ 2 ದಿನ ದಲ್ಲಿ ನೀಡುವುದಾಗಿ ಹೇಳಿದರು. ಅವರು ಆ ಕಾಯಿ ಗಳನ್ನು ವಾಹನದಲ್ಲಿ ಕೇರಳ ಮತ್ತು ತಮಿಳುನಾಡಿಗೆ ಸಾಗಿಸಿದ್ದರು. ಅಲ್ಲಿಗೆ ಹೋಗುವಷ್ಟರಲ್ಲಿ ಕಾಯಿಗಳೆಲ್ಲ ಕೊಳೆ ತಿದ್ದು, ವಾಪಸ್ ಮೈಸೂರು ಎಪಿಎಂಸಿಗೇ ಕಳುಹಿಸಿ ದರು. 2 ದಿನ ಬಿಟ್ಟು ಹಣ ಕೇಳಲು ಹೋದಾಗ, ಪಡುವಲ ಕಾಯಿ ಪೂರ್ಣ ಕೊಳೆತು ವಾಪಸ್ ಬಂದಿದೆ ಎಂದು 700 ರೂ. ನೀಡಿದರು. ಬಾಡಿಗೆ ಹಣವೂ ಸಿಗಲಿಲ್ಲ ಎಂದು `ಮೈಸೂರು ಮಿತ್ರ’ನ ಬಳಿ ಅಳಲು ತೋಡಿಕೊಂಡರು.

15 ಗುಂಟೆಯಲ್ಲಿ ಸಾಂಬಾರ್ ಸೌತೆ ಹಾಕಿದ್ದೆ. ಆದರೆ, ಕೆಜಿ 2 ರೂ.ಗೆ ಕೇಳಿದರು. ಮಾರುಕಟ್ಟೆಗೆ ಕೊಂಡೊ ಯ್ದರೆ ವಾಹನದ ಬಾಡಿಗೆ ಹಣವೂ ಸಿಗುವುದಿಲ್ಲ ಎಂದು ಹೊಲದಲ್ಲೇ ಉಳುಮೆ ಮಾಡಿಸಿದೆ ಎಂದರು.

ಈಗ 20 ಗುಂಟೆಯಲ್ಲಿ 20 ಸಾವಿರ ರೂ. ಖರ್ಚು ಮಾಡಿ ಸೋರೆಕಾಯಿ ಬೆಳೆದಿದ್ದು, ಚೆನ್ನಾಗಿದೆ. ಆದರೆ, ಕೆಜಿಗೆ 3 ರೂ. ಇದ್ದು, ಈ ದರದಲ್ಲಿ ಮಾರಾಟವಾದರೆ ಖರ್ಚು ಮಾಡಿದ ಹಣವೂ ಸಿಗುವುದಿಲ್ಲ. ಈ ಹಿಂದೆ ಒಂದು ಬೆಳೆಯಲ್ಲಿ ನಷ್ಟವಾದರೆ ಮತ್ತೊಂದು ಬೆಳೆಯಲ್ಲಿ ಆದಾಯ ವಾಗುತ್ತಿತ್ತು. ಆದರೆ, ಈ ಬಾರಿ ಯಾವ ಬೆಳೆಯಲ್ಲೂ ಖರ್ಚು ಮಾಡಿದ ಹಣವೂ ಸಿಗುತ್ತಿಲ್ಲ. ಉತ್ತಮ ಬೆಲೆ ಸಿಗದಿದ್ದರೆ ಬೆಳೆಗಳನ್ನು ಏಕೆ ಬೆಳೆಯಬೇಕು ಅನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

Translate »