ವಿದ್ಯುತ್ ದರ ಪರಿಷ್ಕರಣೆ ಪ್ರಸ್ತಾಪಕ್ಕೆ ಗ್ರಾಹಕರ ತೀವ್ರ ವಿರೋಧ
ಮೈಸೂರು

ವಿದ್ಯುತ್ ದರ ಪರಿಷ್ಕರಣೆ ಪ್ರಸ್ತಾಪಕ್ಕೆ ಗ್ರಾಹಕರ ತೀವ್ರ ವಿರೋಧ

February 16, 2023

ಮೈಸೂರು, ಫೆ. 15(ಆರ್‍ಕೆ)- 2023-24ನೇ ಸಾಲಿನಲ್ಲಿ ವಿದ್ಯುತ್ ದರ ಪರಿಷ್ಕರಿ ಸಬೇಕೆಂಬ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯ ಮಿತದ ಪ್ರಸ್ತಾವನೆಗೆ ಗ್ರಾಹಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬೀದಿದೀಪ, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಿಂದ ಬರಬೇಕಾಗಿರುವ ನೂರಾರು ಕೋಟಿ ರೂ.ಗಳ ವಿದ್ಯುತ್ ಬಿಲ್ ವಸೂಲಿ ಮಾಡಿ, ವಿದ್ಯುತ್ ಸೋರಿಕೆ ತಡೆಗಟ್ಟುವ ಮೂಲಕ ವಿದ್ಯುತ್ ವಿತರಣಾ ನಷ್ಟವನ್ನು ಭರಿಸಿಕೊಳ್ಳಬೇಕೇ ಹೊರತು, ಆದಾಯ ಕೊರತೆ ಸರಿದೂಗಿಸಲು ವಿದ್ಯುತ್ ದರ ಏರಿಸಿ ಗ್ರಾಹಕರ ಮೇಲೆ ಬರೆ ಎಳೆಯು ವುದು ಸರಿಯಲ್ಲ ಎಂಬ ಒಕ್ಕೊರಲ ಅಭಿಪ್ರಾಯ ಕೇಳಿಬಂದಿತು.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ. ರವಿಕುಮಾರ್, ಸದಸ್ಯರಾದ ಹೆಚ್.ಎಂ. ಮಂಜುನಾಥ್ ಹಾಗೂ ಎಂಡಿ ರವಿ ಅವರು ಇಂದು ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ವಿದ್ಯುತ್ ದರ ಪರಿಷ್ಕರಣೆ ಸಂಬಂಧ ವಿಚಾರಣೆ ನಡೆಸಿದಾಗ ಗ್ರಾಹಕ ರಿಂದ ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಆರ್ಥಿಕ ವರ್ಷ 2023-24ನೇ ಸಾಲಿನ ಸೆಸ್ಕಾಂ ಒಟ್ಟು 1049.74 ಕೋಟಿ ರೂ.ಗಳ ಕಂದಾಯ ಭರಿಸಲು ಎಲ್ಲಾ ಜಕಾತಿಗಳನ್ನೊಳ ಗೊಂಡಂತೆ ಸರಾಸರಿ ಪ್ರತಿ ಯೂನಿಟ್‍ಗೆ 1.46 ರೂ. ವಿದ್ಯುತ್ ದರ ಹೆಚ್ಚಿಸಲು ಕರ್ನಾ ಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು 2022ರ ನ.29 ರಂದು ಪ್ರಸ್ತಾಪ ಸಲ್ಲಿಸಿತ್ತು. ಇಂದು ನಡೆದ ವಿಚಾರಣೆ ವೇಳೆ ಸೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ಸಹ ಈ ಸಂಬಂಧ ಆಯೋಗದ ಅಧ್ಯಕ್ಷರು, ಸದಸ್ಯರಿಗೆ ಪ್ರಸ್ತಾವನೆ ಸಲ್ಲಿಸಿದರು.

ಕೊರೊನಾ ಸಂದರ್ಭ 2 ವರ್ಷಗಳ ಕಾಲ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಿರುವುದರಿಂದ ಹಾಗೂ ಅಗತ್ಯ ಮೂಲ ಸೌಲಭ್ಯ ಅಭಿವೃದ್ಧಿಗೆ ಹೆಚ್ಚು ಹಣ ತೊಡಗಿಸಿರುವುದರಿಂದಾಗಿ ಉಂಟಾಗಿ ರುವ ಆದಾಯ ಕೊರತೆ ಸರಿದೂಗಿಸಲು ಪ್ರತಿ ಯೂನಿಟ್‍ಗೆ 1.46 ರೂ. ವಿದ್ಯುತ್ ದರ ಹೆಚ್ಚಿಸಲು ಅನುಮತಿ ನೀಡುವಂತೆ ಮನವಿ ಮಾಡಿದರು.

2023-24ನೇ ಸಾಲಿನಲ್ಲಿ 8,245.68 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿ ಮಾಡಿದಲ್ಲಿ, 7,167.89 ದಶಲಕ್ಷ ಯೂನಿಟ್ ಮಾರಾಟವಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ವಿದ್ಯುತ್ ಖರೀದಿಗೆ 4,603.2 ಕೋಟಿ ರೂ. ಸವಕಳಿ 431.85 ಕೋಟಿ ರೂ., ಆರ್ಥಿಕ ವೆಚ್ಚಗಳಿಗೆ 505.14 ಕೋಟಿ ರೂ. ಸೇರಿದಂತೆ 6,522.48 ಕೋಟಿ ರೂ. ಖರ್ಚಾಗುತ್ತದೆ. ವಿದ್ಯುತ್ ಪೂರೈಕೆಯಿಂದ 5,572.74 ಕೋಟಿ ರೂ. ಆದಾಯ ಬರುತ್ತದೆ. ಇದರಿಂದ ಉಂಟಾ ಗುವ ಕೊರತೆ ನೀಗಿಸಲು ವಿದ್ಯುತ್ ದರ ಹೆಚ್ಚಿಸುವುದು ಅನಿವಾರ್ಯ ಎಂದು ಜಯವಿಭವಸ್ವಾಮಿ ವಾದ ಮಂಡಿಸಿದರು.

ಸರ್ಕಾರಿ ಯೋಜನೆಗಳನ್ನು ಕೊರೊನಾ ಸಂದರ್ಭದಲ್ಲೂ ಮುಂದುವರಿಸಿ, ಗ್ರಾಹಕರಿಗೆ ವಿದ್ಯುತ್ ಪೂರೈಸಿದ್ದೆವು. ಕೈಗಾ ರಿಕೆಗಳು ಬಂದ್ ಆಗಿದ್ದರಿಂದ ಬೇಡಿಕೆಯೂ ಇರಲಿಲ್ಲ. ವಿದ್ಯುತ್ ಮಾರಾಟವೂ ಆಗ ಲಿಲ್ಲವಾದ್ದರಿಂದ ನಮಗೆ ನಷ್ಟವಾಯಿತು. ಪರಿವರ್ತಕಗಳ ನಿರ್ವಹಣೆ, ಹೆಚ್‍ಡಿ ವೈರಿಂಗ್, ಗ್ರೌಂಡಿಂಗ್, ಫ್ಯೂಸ್, ಮಿಂಚು ನಿರೋಧಕ ಮುಂತಾದ ಬಾಬತ್ತುಗಳಿಗೆ ನಿಗಮವು ಹಣ ವ್ಯಯಿಸಿದೆ ಎಂಬುದನ್ನೂ ಅವರು ಆಯೋಗದ ಗಮನಕ್ಕೆ ತಂದರು.
ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮೈಸೂರು ಸಣ್ಣ ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ಬೀದಿದೀಪಗಳು, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಿಂದ ಬರಬೇಕಾದ ಬಾಕಿ ವಿದ್ಯುತ್ ಶುಲ್ಕ ವಸೂಲಿ ಮಾಡಿ, ವಿದ್ಯುತ್ ಸೋರಿಕೆ ಮತ್ತು ಕಳ್ಳತನ ತಡೆದಲ್ಲಿ ನಷ್ಟವಾಗುವುದಿಲ್ಲ ಎಂದರು.
ಈಗಾಗಲೇ ಕೊರೊನಾದಿಂದಾಗಿ ತೀವ್ರ ನಷ್ಟ ಅನುಭವಿಸಿ, ಈಗ ಚೇತರಿಸಿ ಕೊಳ್ಳುತ್ತಿರುವ ಸಣ್ಣ ಕೈಗಾರಿಕೋದ್ಯಮಿ ಗಳು, ಮತ್ತೆ ಈಗ ವಿದ್ಯುತ್ ದರ ಹೆಚ್ಚಿಸಿ ದಲ್ಲಿ ಗಾಯದ ಮೇಲೆ ಬರೆ ಎಳೆದಂತಾ ಗುತ್ತದೆ. ಆದ್ದರಿಂದ ವಿದ್ಯುತ್ ದರ ಹಾಗೂ ಠೇವಣಿ ಹಣ ಹೆಚ್ಚಿಸಬೇಕೆಂಬ ಸೆಸ್ಕಾಂ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರ ಸ್ಕರಿಸಬೇಕೆಂದು ಅವರು ಒತ್ತಾಯಿಸಿದರು.

ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಕೆ.ಬಿ. ಲಿಂಗ ರಾಜು, ಉಪಾಧ್ಯಕ್ಷ ಕೆ.ಆರ್. ರವೀಂದ್ರ ಪ್ರಭು ಸಹ, ವಿದ್ಯುತ್ ದರ ಹೆಚ್ಚಿಸಿದಲ್ಲಿ ಸಾವಿ ರಾರು ಮೈಕ್ರೋ ಕಾಟೇಜ್ ಇಂಡಸ್ಟ್ರಿಗಳು ಕಾರ್ಯಸ್ಥಗಿತಗೊಳ್ಳುತ್ತವೆ ಎಂದರು. ಅದೇ ರೀತಿ ವೆಂಕಟಾಚಲಂ, ಲಕ್ಷ್ಮೀಕಾಂತ, ಎಂ.ಎನ್. ಚಂದ್ರಶೇಖರ್, ಹೆಚ್.ಡಿ. ನವೀನ್ ರಾಜ್ ಅರಸ್, ಅಶ್ವತ್ಥನಾರಾಯಣ ಸೇರಿ ದಂತೆ 15ಕ್ಕೂ ಹೆಚ್ಚು ಮಂದಿ ವಿಚಾರಣೆ ವೇಳೆ ಆಯೋಗದ ಮುಂದೆ ಹಾಜರಾಗಿ ಯಾವುದೇ ಕಾರಣಕ್ಕೂ ವಿದ್ಯುತ್ ದರ ಪರಿಷ್ಕರಿಸಲು ಅನುಮತಿ ನೀಡಬಾರದೆಂದು ಒತ್ತಾಯಿಸಿದರು. ಚೆಸ್ಕಾಂ ನಿರ್ದೇಶಕ (ತಾಂತ್ರಿಕ) ಸಿ.ಉಮೇಶ್, ಮುಖ್ಯ ಹಣ ಕಾಸು ಅಧಿಕಾರಿ ಶೇಖ್ ಮಹಮದ್, ಮುಖ್ಯ ಪ್ರಧಾನ ವ್ಯವಸ್ಥಾಪಕ ಕೆ.ವಿ.ಶ್ರೀಧರ್, ಪ್ರಧಾನ ವ್ಯವಸ್ಥಾಪಕ ಸ್ವರೂಪ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Translate »