ಉಚಿತ ಬಸ್ ಪಾಸ್‍ಗಾಗಿ ಜೂ.19ರಂದು ರಾಜ್ಯಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ಉಚಿತ ಬಸ್ ಪಾಸ್‍ಗಾಗಿ ಜೂ.19ರಂದು ರಾಜ್ಯಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ

June 15, 2018

ಮೈಸೂರು: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಶೀಘ್ರ ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ಜೂ.19ರಂದು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸುತ್ತಿದ್ದು, ಅಂದು ರಾಜ್ಯ, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಐಡಿಎಸ್‍ಓ ಜಿಲ್ಲಾಧ್ಯಕ್ಷ ಬಸವರಾಜು ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಡಿಎಸ್‍ಓ, ಎಐಡಿವೈಓ ಹಾಗೂ ಎಐಎಂಎಸ್‍ಎಸ್ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಗಳು ತಮ್ಮ ಆಕ್ರೋಶ ವ್ಯಕ್ತಪಡಿಸಲಿದ್ದಾರೆ. ಈಗಾಗಲೇ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು, ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಉಚಿತ ಬಸ್‍ಪಾಸ್ ದೊರೆಯುವ ನಿರೀಕ್ಷೆಯಲ್ಲಿ ದ್ದಾರೆ. ಈಗಿನ ಮೈತ್ರಿ ಸರ್ಕಾರದ ಭಾಗವಾದ ಕಾಂಗ್ರೆಸ್ ಪಕ್ಷವು ಈ ಹಿಂದಿನ ತನ್ನ ಆಡಳಿತಾವಧಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉಚಿತ ಬಸ್‍ಪಾಸ್ ನೀಡುವುದನ್ನು ಬಜೆಟ್‍ನಲ್ಲಿ ಘೋಷಣೆ ಮಾಡಿ 836.98 ಕೋಟಿ ರೂ. ಅನುದಾನ ನಿಗದಿ ಸಹ ಮಾಡಲಾಗಿತ್ತು. ಆದರೆ ಇದೀಗ ಹೆಚ್ಚುವರಿ ಹಣದ ನೆಪವೊಡ್ಡಿ ಈಗಿನ ಮೈತ್ರ ಸರ್ಕಾರ ಉಚಿತ ಬಸ್‍ಪಾಸ್ ಜಾರಿಗೆ ಮೀನಾಮೇಷ ಎಣ ಸುತ್ತಿದೆ ಎಂದು ಆರೋಪಿಸಿದರು.

ಬಜೆಟ್‍ನಲ್ಲಿ ನಿಗದಿಯಾಗಿರುವ ಅನುದಾನ ಮಾತ್ರವಲ್ಲದೆ, ಹೆಚ್ಚುವರಿ 629.32 ಕೋಟಿ ರೂ. ಬಿಡುಗಡೆ ಮಾಡಲು ಸಾರಿಗೆ ಇಲಾಖೆ ಸರ್ಕಾರದ ಮುಂದೆ ಪ್ರಸ್ತಾಪವಿಟ್ಟಿದೆ. ನಿಜವಾಗಿಲೂ ಅಷ್ಟು ಪ್ರಮಾಣದ ಅಗತ್ಯವಿದೆಯೇ ಎಂಬುದು ಪ್ರಶ್ನಾರ್ಹವಾಗಿದೆ. ಉಚಿತ ಬಸ್‍ಪಾಸ್ ನೀಡುವುದರಿಂದ ಸಾರಿಗೆ ಇಲಾಖೆಗೆ ನಷ್ಟವಾಗುತ್ತದೆ ಎಂಬುದು ವಾಸ್ತಾವಂಶವಲ್ಲ ಎಂದು ಪ್ರತಿಪಾದಿಸಿದರು. ಎಐಡಿಎಸ್‍ಓ ಕಾರ್ಯದರ್ಶಿ ಚಂದ್ರಕಲಾ, ಎಐಡಿವೈಓ ಜಂಟಿ ಕಾರ್ಯದರ್ಶಿ ಎಸ್.ಸುಮ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »