ಉಚಿತ ಬಸ್‍ಪಾಸ್‍ಗಾಗಿ ಪ್ರತಿಭಟನೆ
ಹಾಸನ

ಉಚಿತ ಬಸ್‍ಪಾಸ್‍ಗಾಗಿ ಪ್ರತಿಭಟನೆ

July 25, 2018

ಹಾಸನ: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಮಾವಣೆಗೊಂಡು ಘೋಷಣೆ ಕೂಗಿದರು. ಸಮ್ಮಿಶ್ರ ಸರ್ಕಾರದ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ವಿಧಾನ ಸಭಾ ಚುನಾವಣೆ ವೇಳೆಯಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ವಿತರಣೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ನಾಲ್ಕು ತಿಂಗಳು ಕಳೆದ ನಂತರ ರೈತರ ಪೂರ್ಣ ಸಾಲಮನ್ನಾ ಮಾಡದೇ ಸಲ್ಪ ಮಾತ್ರ ಸಾಲ ಮನ್ನಾ ಮಾಡಿದರು. ಅಲ್ಲದೆ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ವಿತರಣೆಗೆ ಕ್ರಮ ಕೈಗೊಳ್ಳದೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಉಚಿತ ಬಸ್‍ಪಾಸ್ ದೊರೆಯುವುದೆಂಬ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಉಚಿತವಾಗಿ ಬಸ್ ಪಾಸ್ ವಿತರಣೆಯ ಬಗ್ಗೆ ನಾನೇನು ಭರವಸೆ ಹೇಳಿಕೆ ನೀಡಿಲ್ಲ ಎಂಬ ಹೇಳಿಕೆಯಿಂದ ವಿದ್ಯಾರ್ಥಿಗಳ ಆಸೆಗೆ ತಣ್ಣೀರು ಎರಚಿದಂತಾಗಿದೆ. ಇದರಿಂದ ಶಾಲಾ-ಕಾಲೇಜುಗಳ ದುಬಾರಿ ಶುಲ್ಕ ಪಾವತಿಸುವುದರೊಂದಿಗೆ ಬಸ್‍ಪಾಸ್‍ನ ಶುಲ್ಕವೂ ಹೊರೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸ್‍ಪಾಸ್‍ಗಾಗಿ ಎಸ್‍ಸಿಎಸ್‍ಟಿ ವಿದ್ಯಾರ್ಥಿಗಳಿಗೆ 1,200 ರೂ.ಗಳಂತೆ ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 1,500 ರೂ.ಗಳಂತೆ ಶುಲ್ಕ ನಿಗದಿ ಮಾಡಲಾಗಿದೆ. ಶಿಕ್ಷಣ ಪಡೆಯುವ ಎಲ್ಲಾ ವಿದ್ಯಾರ್ಥಿಗಳೂ ಶ್ರೀಮಂತರಲ್ಲ ಹಾಗೂ ರಾಜ್ಯದಲ್ಲಿ ಬಹಳಷ್ಟು ವಿದ್ಯಾರ್ಥಿಗಳೂ ಕಡು ಬಡವರಾಗಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಬಸ್ ಪಾಸನ್ನು ಉಚಿತವಾಗಿ ನೀಡಬೇಕು ಆಗ್ರಹಿಸಿದರೆ ಬೇಡಿಕೆ ಈಡೇರಿಸುವಂತೆ ಸಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ಜಿಲ್ಲಾಧ್ಯಕ್ಷ ಪ್ರವೀಣ್‍ಗೌಡ, ಜಿಲ್ಲಾ ಯುವ ಘಟಕ ಅಧ್ಯಕ್ಷ ವಿಶ್ವಾಸ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರಸನ್ನ ಇದ್ದರು.

Translate »