`ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ’
ಹಾಸನ

`ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ’

July 25, 2018

ಬೇಲೂರು: ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ’ ನಾನ್ನುಡಿ ಯಂತೆ ತಾಲೂಕಿನ ಸಮೀಪ 2 ಜಲಾಶಯಗಳಿದ್ದರೂ ಮಲೆನಾಡು ಭಾಗವಾದ ಅರೇಹಳ್ಳಿ, ಬಿಕ್ಕೋಡು ಹೋಬಳಿಯ ಹತ್ತಾರು ಗ್ರಾಮಗಳಿಗೆ ನೀರು ಪೊರೈಕೆಗೆ ಶಾಶ್ವತ ಯೋಜನೆ ರೂಪಿಸುವಲ್ಲಿ ಜನಪ್ರತಿನಿಧಿ ಗಳು, ಅಧಿಕಾರಿಗಳು ವಿಫಲರಾಗಿದ್ದಾರೆ.

ಬಿಕ್ಕೋಡು ಸಮೀಪವೇ ಇರುವ ವಾಟೆಹೊಳೆ ಅಣೆಕಟ್ಟೆಯನ್ನು 1986ರಲ್ಲಿ ಡಿ.ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಿರ್ಮಿಸಲಾಗಿತ್ತು. 32 ವರ್ಷಗಳನ್ನು ಕಂಡಿರುವ ಅಣೆಕಟ್ಟೆಯು ಈವರೆಗೆ 9 ಬಾರಿ ಭರ್ತಿಯಾಗಿದ್ದು, 32 ಕಿ.ಮೀ ಉದ್ದದ ಬಲದಂಡ ನಾಲೆ, 10 ಕಿ.ಮೀ. ಉದ್ದದ ಎಡದಂಡೆ ನಾಲೆ ಹೊಂದಿದೆ. ಒಮ್ಮೆ ಜಲಾಶಯ ಭರ್ತಿ ಯಾದರೆ ತಾಲೂಕಿನ 500 ಎಕರೆ ಭೂಮಿ ನೀರಾವರಿಗೆ ಸಹಾಯಕವಾಗಲಿದೆ. ಅಲ್ಲದೆ ಉಳಿದ ಹೆಚ್ಚುವರಿ ನೀರು ಆಲೂರು ತಾಲೂಕಿಗೆ ಹರಿಯಲಿದೆ.

ರಾಜ್ಯದಲ್ಲಿ ಮುಂಗಾರಿನಿಂದ ಎಲ್ಲಾ ಜಲಾಶಯಗಳೂ ತುಂಬಿ ಹರಿಯುತ್ತಿದ್ದರೂ ತಾಲೂಕು ಬಳಿಯ ಪ್ರಮುಖ ಜಲಮೂಲ ಗಳಾದ ಯಗಚಿ, ವಾಟೆಹೊಳೆ ಜಲಾಶಯ ವರುಣನ ಮುನಿಸಿನಿಂದ ತುಂಬಿಲ್ಲ. ಅಲ್ಪಸ್ವಲ್ಪ ನೀರನ್ನು ಇಟ್ಟುಕೊಂಡಿರುವ ಈ ವಾಟೆಹೊಳೆ ಜಲಾಶಯ ಸಮೀಪದ ಹತ್ತಾರು ಗ್ರಾಮಗಳಿಗೆ ನೀರು ಸರಬರಾಜು ಮಾಡವ ಸಾಮಥ್ರ್ಯ ಹೊಂದಿದೆ. ಆದರೂ ಈವರೆಗೆ ಜನತೆಗೆ ನೀರು ಪೂರೈಸಲು ಸೂಕ್ತ ಯೋಜನೆ ರೂಪಿಸಿಲ್ಲ.

ಮಲೆನಾಡ ಭಾಗದ ಅನೇಕ ಗ್ರಾಮ ಗಳಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಜೀವಂತವಾಗಿದೆ. ನೀರಿಗೆ ತೀವ್ರ ತೊಂದರೆ ಅನುಭವಿಸುತ್ತಿರುವ ಅರೇಹಳ್ಳಿ, ಬಿಕ್ಕೋಡು ಪಟ್ಟಣ ಸೇರಿದಂತೆ ಈ ಎರಡೂ ಹೋಬಳಿಯ ಸುತ್ತಲಿನ ಮದಘಟ್ಟ, ತಾರೆ ಮರ, ಮತ್ತಾವರ, ಮಾಳೆಗೆರೆ, ಚಂದನಹಳ್ಳಿ, ಎಡೆಹಳ್ಳಿ, ರಾಜನಹಳ್ಳಿ, ನಿಡುಮನಹಳ್ಳಿ, ಹುಸ್ಕೂರು, ಹೊನ್ನೇಮನೆ, ಕಡೆಗರ್ಜೆ, ಲಿಂಗಾಪುರ, ಅನಘಟ್ಟ, ಲಕ್ಕುಂದ, ಅಂಕಿ ಹಳ್ಳಿ, ದರ್ಬಾರ್ ಪೇಟೆಯಂತಹ ಗ್ರಾಮ ಗಳು ಹನಿ ನೀರಿಗೂ ಪರಿತಪಿಸುವಂತಾಗಿದೆ.

ಈ ಗ್ರಾಮಗಳ ಜನರಿಗೆ ಕುಡಿಯುವ ನೀರಿಗೆ ಈ ಅಣೆಕಟ್ಟೆಯಿಂದ ನೀರನ್ನು ಪಡೆಯಬಹುದಾಗಿದ್ದರೂ ಈವರೆಗೆ ಯಾವ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತ ಯೋಜನೆ ಕಲ್ಪಿಸ ದಿರುವುದು ಶೋಚನೀಯ. ರಾಜ್ಯದಲ್ಲಿ ಬಿಜೆಪಿ ಆಡಳಿತದ ಸಮಯದಲ್ಲಿ ಅರೇ ಹಳ್ಳಿ ಜಿಪಂ ಸದಸ್ಯರಾಗಿದ್ದ ಅಮಿತ್ ಶೆಟ್ಟಿ ಅವರು ವಾಟೆಹೊಳೆ ಅಣೆಕಟ್ಟೆಯಿಂದ ಅರೇಹಳ್ಳಿ, ಬಿಕ್ಕೋಡು ಹೋಬಳಿಯ ಗ್ರಾಮಗಳಿಗೆ ನೀರು ಹರಿಸುವ ಯೋಜನೆ ಬಗ್ಗೆ ಚಿಂತಿಸಿದ್ದರೂ ಅದು ಈವರೆಗೆ ಯೋಜನೆಗೆ ಚಾಲನೆ ದೊರೆತಿಲ್ಲ. ಈ ಯೋಜನೆ ಬಿಜೆಪಿ ಆಡಳಿತ ಹೋದ ಹಿಂದೆಯೇ ಕಣ್ಮರೆಯಾಗಿದೆ. ನಂತರ ಬಂದ ಇತರೆ ಪಕ್ಷದ ಮುಖಂಡರು ನಿರ್ಲಕ್ಷಿಸಿದರು ಹಾಲಿ ಶಾಸಕ ಕೆ.ಎಸ್. ಲಿಂಗೇಶ್ ಈಗಲಾದರೂ ನೆನೆಗುದಿಗೆ ಬಿದ್ದಿರುವ ಈ ಯೋಜನೆ ಜಾರಿಗೊಳಿಸುವ ಆಶಾ ಭಾವನೆ ತಾಲೂಕಿನ ಜನತೆಯಲ್ಲಿದೆ.

Translate »