ಅರಸೀಕೆರೆ ಅಮರಗಿರಿ ಮಾಲೇಕಲ್ ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ರಥೋತ್ಸವ
ಹಾಸನ

ಅರಸೀಕೆರೆ ಅಮರಗಿರಿ ಮಾಲೇಕಲ್ ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ರಥೋತ್ಸವ

July 25, 2018

ಅರಸೀಕೆರೆ: ತಾಲೂಕಿನ ಅಮರಗಿರಿ ಮಾಲೇಕಲ್ ತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ಮಹಾರಥೋತ್ಸವವು ಭಕ್ತಸಾಗರದ ನಡುವೆ ಇಂದು ವಿಜೃಂಭಣೆಯಿಂದ ಜರುಗಿತು.

ರಥೋತ್ಸವದ ಅಂಗವಾಗಿ ಮುಂಜಾನೆ ಯಿಂದಲೇ ದೇಗುಲದಲ್ಲಿ ಶ್ರೀ ಲಕ್ಷ್ಮೀವೆಂಕಟ ರಮಣಸ್ವಾಮಿ ಮೂಲ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಜರುಗಿತು. ನಂತರ ದೇಗುಲ ಆವರಣದಲ್ಲಿ ಅಲಂಕೃತ ಗೊಂಡಿದ್ದ ರಥದಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿ ಮೂಲಕ ತಂದು ಪ್ರತಿಷ್ಠಾಪಿಸ ಲಾಯಿತು. ಪೂಜೆ ಸಲ್ಲಿಸುವ ಮೂಲಕ ಶಾಸಕ ಕೆ.ಎಂ.ಶಿವಲಿಂಗೇಗೌಡ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಅದ್ಭುತ ಕ್ಷಣಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ತಂಡೋಪ ತಂಡವಾಗಿ ಆಗಮಿಸಿದ್ದ ಸಾವಿರಾರು ಸಂಖ್ಯೆ ಭಕ್ತಾದಿಗಳು ಸಾಕ್ಷಿಯಾದರು. ಹರಿನಾಮಸ್ಮರಣೆ ಮಾಡುತ್ತಾ ಭಕ್ತರು ರಥ ಎಳೆದರು.

ರಥ ಸಾಗುವ ವೇಳೆ ಹರಕೆ ಹೊತ್ತವರು ತೇರಿಗೆ ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು. ರಥ ಬೀದಿಯಲ್ಲಿ ಸಾಗಿದ ತೇರು ಯಶಸ್ವಿಯಾಗಿ ಸ್ವಸ್ಥಾನ ತಲುಪಿತು. ಅರ್ಚಕರಾದ ರಾಮ ಪ್ರಸಾದ್, ವರದರಾಜು ಮತ್ತು ನರಸಿಂಹ ಮೂರ್ತಿ ಧಾರ್ಮಿಕ ಕೈಂಕರ್ಯ ನೆರವೇರಿಸಿದರು.

ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಬೆಳಗ್ಗಿನಿಂದಲೇ ಪರಸ್ಥಳಗಳಿಂದ ಬಸ್ ಹಾಗೂ ರೈಲುಗಳಲ್ಲಿ ಆಗಮಿಸಿದ ಭಕ್ತರು ಶ್ರೀ ಕ್ಷೇತ್ರದಲ್ಲಿ ಗೋವಿಂದಾ, ಗೋವಿಂದಾ ಎಂದು ನಾಮ ಜಪ ಮಾಡುವ ಮೂಲಕ ಬೆಟ್ಟ ಏರಿ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ತಾಲೂಕಿನ ಸಾರಿಗೆ ವಿಭಾಗೀಯ ಸಂಸ್ಥೆ ಈ ಬಾರಿ ಅತ್ಯಧಿಕ ಬಸ್‍ಗಳ ವ್ಯವಸ್ಥೆ ಕಲ್ಪಿಸಿತ್ತು. ಇದರಿಂದಾಗಿ ಈ ಬಾರಿ ಖಾಸಗಿ ವಾಹನಗಳ ಸಂಚಾರ ವಿರಳವಾಗಿತ್ತು. ಸ್ಕೌಟ್ಸ್ ಮತ್ತು ಗೈಡ್ಸ್‍ನ 80 ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಬೆಟ್ಟದವರೆಗೂ ನಿಂತು ಕರ್ತವ್ಯ ನಿರ್ವಹಿಸಿದರು. ವಿವಿಧ ಸಂಘ-ಸಮಾಜ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ತಾಲೂಕು ವಿಶ್ವ ಹಿಂದು ಪರಿಷತ್ ಮತ್ತು ಭಜರಂಗ ದ¼ ಬೆಟ್ಟದ ತಪ್ಪಲಿನಲ್ಲಿ ಭಕ್ತಾದಿಗಳಿಗೆ ಕುಡಿಯುವ ನೀರು ವಿತರಿಸಿದರು. ದೇವಾಲಯದ ಪ್ರಾಕಾರದೊಳಗೆ ಮಳೆ, ಬಿಸಿಲಿಗೆ ಪರದಾಡದೆ ಭಕ್ತರು ಸರತಿ ಸಾಲಿನಲ್ಲಿ ಸಾಗಲು ಉತ್ತಮ ವ್ಯವಸ್ಥೆ ಕಲ್ಪಿಸಿದ್ದು ಈ ಬಾರಿ ವಿಶೇಷ. ದೇಗುಲ ಸಮಿತಿಯ ಈ ವ್ಯವಸ್ಥೆಗೆ ಭಕ್ತವೃಂದದಿಂದ ಮೆಚ್ಚುಗೆ ವ್ಯಕ್ತವಾಯಿತು.

ಅಗ್ನಶಾಮಕ, ಗೃಹ ರಕ್ಷಕ ದಳ, ಆರೋಗ್ಯ ಇಲಾಖೆ, ಮುಜರಾಯಿ ಇಲಾಖಾಧಿ ಕಾರಿಗಳು ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ವಿಶೇಷ ಕಾಳಜಿ ವಹಿಸಿದ್ದರು.

ತಹಶೀಲ್ದಾರ್ ಎನ್.ವಿ.ನಟೇಶ್, ಉಪ ತಹಶೀಲ್ದಾರ್ ಫಾಲಾಕ್ಷಯ್ಯ, ಉತ್ಸವ ಸಮಿತಿ ಅಧ್ಯಕ್ಷ ಅರುಣ್‍ಕುಮಾರ್, ಟಿ.ಆರ್.ನಾಗರಾಜ್, ರಂಗರಾಜ್, ಪರಮ ಶಿವಯ್ಯ, ನಗರಸಭಾಧ್ಯಕ್ಷ ಸಮೀವುಲ್ಲಾ, ಉಪಾಧ್ಯಕ್ಷ ಪಾರ್ಥಸಾರಥಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ, ತಾಲೂಕು ಘಟಕದ ಅಧ್ಯಕ್ಷ ಹೇಮಂತ್ ಕುಮಾರ್, ನಗರಾಧ್ಯಕ್ಷ ಕಿರಣ್‍ಕುಮಾರ್ ಪಾಲ್ಗೊಂಡಿದ್ದರು. ರಥೋತ್ಸವ ನಂತರವೂ ಸಂಜೆವರೆಗೆ ಶ್ರೀ ಕ್ಷೇತ್ರಕ್ಕೆ ಹೊರ ಊರುಗಳಿಂದ ಭಕ್ತರು ನಿರಂತರ ಆಗಮಿಸಿ ದೇವರ ದರ್ಶನ ಪಡೆದರು.

Translate »