ಅರಸೀಕೆರೆಯಲ್ಲಿಯೂ ಅವಾಂತರ ಸೃಷ್ಟಿಸಿರುವ ಮಳೆರಾಯ!
ಹಾಸನ

ಅರಸೀಕೆರೆಯಲ್ಲಿಯೂ ಅವಾಂತರ ಸೃಷ್ಟಿಸಿರುವ ಮಳೆರಾಯ!

May 26, 2019

ಅರಸೀಕೆರೆ: ತಾಲೂಕಿನ ವಿವಿಧೆಡೆ ಶುಕ್ರವಾರ ಆಲಿಕಲ್ಲು ಸಹಿತ ಬಿದ್ದ ಮಳೆ, ಗಾಳಿಗೆ ಮರಗಳು ಧರೆಗೆ ಉರುಳಿದರೆ ಕಟ್ಟಡಗಳ ಛಾವಣಿಗಳು ಗಾಳಿಗೆ ಹಾರಿ ಹೋದ ಘಟನೆ ನಡೆದಿದೆ.

ತೀವ್ರ ಬರಗಾಲದಿಂದ ತತ್ತರಿಸುತ್ತಿರುವ ಅರಸೀಕೆರೆ ತಾಲೂಕಿಗೆ ಕಳದೆರಡು ದಿನಗಳಿಂದ ಸಂಜೆ ಸಮಯದಲ್ಲಿ ಸುರಿಯುತ್ತಿರುವ ಗುಡುಗು ಸಿಡಿಲುಗಳ ಆಲಿಕಲ್ಲುಗಳ ಸಹಿತ ಮಳೆ ತಂಪನ್ನೆರೆಯುತ್ತಿದ್ದರೆ ಮತ್ತೊಂದೆಡೆ ಇದೇ ಮಳೆಯು ವಿದ್ಯುತ್ ಕಂಬ ಹಾಗೂ ಮರಗಳನ್ನು ಧರೆಗುರುಳಿಸಿದೆ. ನಗರದ ವಾಚನಾಲಯ ರಸ್ತೆ, ಸಾಯಿನಾಥ ರಸ್ತೆ, ಗರುಡನಗಿರಿ, ಚೌಡೇಶ್ವರಿ ನಗರ, ಮಲ್ಲೇಶ್ವರನಗರ, ಶಿವಾಲಯ ಬಡಾವಣೆ, ಶ್ರೀನಿವಾಸ ನಗರ, ಹಾಸನ ರಸ್ತೆ ಬಲ ಮತ್ತು ಎಡಭಾಗ ಪ್ರದೇಶಗಳು, ಹುಳಿಯಾರು ರಸ್ತೆ ಸೇರಿದಂತೆ ತಾಲೂಕಿನ ಬೊಮ್ಮೇನಹಳ್ಳಿ ಮತ್ತು ಅಗ್ಗುಂದ ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಿಣ ಪ್ರದೇಶಗಳಲ್ಲಿ ತೀವ್ರ ಮಳೆಯ ಕಾರಣ ತೋಟಗಳಲ್ಲಿರುವ ಮನೆಗಳು, ಪಂಪ್‍ಸೆಟ್ ಮನೆಗಳ ಛಾವಣಿಗಳು ಹಾರಿಹೋಗಿವೆ.

ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ವಿದ್ಯುತ್ ಸರಬರಾಜು ಸ್ಥಗಿತಗೊಂಡ ಹಲವು ಬಡಾವಣೆಗಳಲ್ಲಿ ರಾತ್ರಿಯಿಡೀ ವಿದ್ಯುತ್ ಇಲ್ಲದೇ ಸಾರ್ವಜನಿಕರು ಪರಿತಪಿಸುವಂತಾಯಿತು. ಕೆಲವೆಡೆ ಚರಂಡಿ ಯಲ್ಲಿ ಹೂಳು ತುಂಬಿದರಿಂದ ಕಲುಷಿತ ನೀರೆಲ್ಲ ರಸ್ತೆಗಳಲ್ಲೇ ಹರಿಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ತಹಸೀಲ್ದಾರ್ ಸಂತೋಷ್ ಕುಮಾರ್, ನಗರಸಭೆ ಆಯುಕ್ತ ಛಲಪತಿ, ಚೆಸ್ಕಾಂ ಸಹಾಯಕ ಅಭಿಯಂತರ ಮನೋಹರ್, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ್ ನಾಯಕ್, ರಾಜಸ್ವ ಮಂಜುನಾಥ್, ಅಗ್ನಿಶಾಮಕ ಠಾಣೆ ಅಧಿಕಾರಿಗಳು ನಗರದ ವಿವಿಧೆಡೆ ಹಾನಿ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿ ತುರ್ತು ಕಾರ್ಯಾಚರಣೆ ನಡೆಸಿದರು.

ಅರಸೀಕೆರೆ ನಗರದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಮರಗಿಡಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿ ದರೆ ಅಥವಾ ಕಟ್ಟಡಗಳ ಛಾವಣಿ ಹಾರಿಹೋಗಿ ಅಪಾಯ ಸಂಭ ವಿಸಿದರೆ ಕೂಡಲೇ ಮೊ. 9964153338 ಸಂಪರ್ಕಿಸಿ ಮಾಹಿತಿ ನೀಡಿದಲ್ಲಿ ಸ್ಥಳಕ್ಕೆ ಆಗಮಿಸಿ ಕ್ರಮ ತೆಗೆದುಕೊಳ್ಳಲಾಗುವುದು. – ಛಲಪತಿ, ಪೌರಾಯುಕ್ತರು, ನಗರಸಭೆ, ಅರಸೀಕೆರೆ

Translate »