ಮೈಸೂರು: ಪ್ರಸಕ್ತ ಶೈಕ್ಷಣ ಕ ಸಾಲಿನಿಂದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡುವಂತೆ ಆಗ್ರಹಿಸಿ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಎಐಡಿಎಸ್‍ಒ ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಬಜೆಟ್‍ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡುವುದಾಗಿ ಘೋಷಣೆ ಮಾಡಿದ್ದರು. ಈ ಶೈಕ್ಷಣ ಕ ಸಾಲಿನ ತರಗತಿಗಳು ಆರಂಭವಾಗಿವೆ. ಆದರೆ ಇಂದಿಗೂ ಉಚಿತ ಬಸ್‍ಪಾಸ್ ನೀಡುವುದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ವಿದ್ಯಾರ್ಥಿಗಳು ಪ್ರತಿದಿನ ಹಣ ನೀಡಿ ತರಗತಿಗೆ ಬರಲು ಸಾಧ್ಯವಾಗದೆ ತೊಂದರೆಗೀಡಾಗಿದ್ದಾರೆ. ದೂರ ದೂರ ಗ್ರಾಮ ಹಾಗೂ ಪಟ್ಟಣಗಳಿಂದ ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿಗಳು, ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರ ಘೋಷಣೆ ಮಾಡಿದ್ದ ಉಚಿತ ಬಸ್‍ಪಾಸ್ ಸೌಲಭ್ಯ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಉಚಿತ ಬಸ್‍ಪಾಸ್‍ನ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರದ ಗಮನಕ್ಕೆ ತಂದು ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡುವುದಾಗಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದರು. ಆದರೆ ಇದೀಗ ಸಾರಿಗೆ ಇಲಾಖೆಯ ಅಧಿಕಾರಿಗಳು ಉಚಿತ ಬಸ್‍ಪಾಸ್ ನೀಡುವುದಕ್ಕೆ ನಿರಾಕರಿಸಿ, ಶುಲ್ಕ ಪಾವತಿಸಿ ಬಸ್‍ಪಾಸ್ ಪಡೆಯುವಂತೆ ಹೇಳುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಒಮ್ಮೆ ಶುಲ್ಕ ಪಾವತಿಸಿ ಪಾಸ್ ಪಡೆಯುವುದಕ್ಕೆ ಸಾಧ್ಯವಾಗದೆ ಪರದಾಡುವಂತಾಗಿದೆ. ಅಲ್ಲದೆ ಸರ್ಕಾರ ಉಚಿತ ಬಸ್ ಪಾಸ್ ನೀಡುವುದಕ್ಕೆ ಆದೇಶ ಹೊರಡಿಸಬಹುದೆಂದು ಕಾದು ಕುಳಿತಿದ್ದಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‍ಓ ಕಾರ್ಯದರ್ಶಿ ಚಂದ್ರಕಲಾ, ಎಐಡಿವೈಓ ಕಾರ್ಯದರ್ಶಿ ಟಿ.ಆರ್.ಸುನೀಲ್, ಎಐಎಂಎಸ್‍ಎಸ್ ಉಪಾಧ್ಯಕ್ಷೆ ಜಿ.ಎಸ್.ಸೀಮಾ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.