ಭಾರತೀನಗರದಲ್ಲಿ ಭಾರತ್ ಬಂದ್‍ಗೆ ಬೆಂಬಲ
ಮಂಡ್ಯ

ಭಾರತೀನಗರದಲ್ಲಿ ಭಾರತ್ ಬಂದ್‍ಗೆ ಬೆಂಬಲ

September 28, 2021

ಭಾರತೀನಗರ, ಸೆ.27(ಅ.ಸತೀಶ್)- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ್ ಬಂದ್‍ಗೆ ಭಾರತೀನಗರದಲ್ಲಿ ವರ್ತಕರು ಅಂಗಡಿಗಳನ್ನು ಮುಚ್ಚುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಬೆಳಗ್ಗೆಯಿಂದಲೇ ಕೃಷಿಕೂಲಿಕಾರರ ಸಂಘ, ರೈತಸಂಘ ಹಾಗೂ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಪಟ್ಟಣದಲ್ಲಿ ಜಮಾಯಿಸಿ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿರುವ ಅಂಗಡಿ ಗಳನ್ನು ಬಂದ್ ಮಾಡಿಸಿದರು.

ಸರ್ಕಾರಿ ಕಚೇರಿ, ಬ್ಯಾಂಕ್‍ಗಳು, ಮೆಡಿಕಲ್ ಸ್ಟೋರ್, ಪೆಟ್ರೋಲ್ ಬಂಕ್ ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಗಳನ್ನು ಮುಚ್ಚಲಾಗಿತ್ತು.
ಭಾರತೀನಗರದ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಇದಕ್ಕೂ ಮೊದಲು ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಯನ್ನು ಕೂಡಲೇ ಕಡಿತಗೊಳಿಸಬೇಕು. ರೈತ ವಿರೋಧಿ ನೀತಿಯನ್ನು ಕೇಂದ್ರ ಸರ್ಕಾರ ಕೂಡಲೇ ಹಿಂಪಡೆಯ ಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಜಂಟಿ ಕಾರ್ಯ ದರ್ಶಿ ಕೆ.ಹನುಮೇಗೌಡ, ಮಂಚೇಗೌಡ, ಸಿದ್ದರಾಜು, ಪ್ರೇಮ, ಅನಿತಾ, ಬಿದರಹಳ್ಳಿ ಶೋಭಾ, ರೈತಸಂಘದ ಮುಖಂಡರಾದ ಮಹೇಂದ್ರ, ಪುಟ್ಟಸ್ವಾಮಿ, ದಲಿತ ಮುಖಂಡ ರಾದ ಕರಡಕೆರೆ ಯೋಗೇಶ್, ಅಣ್ಣೂರು ಸಿದ್ದರಾಜು ಸೇರಿದಂತೆ ಇತರರಿದ್ದರು.

Translate »