ತೋಪಿನಮಠದ ಶ್ರೀಗಳಿಗೆ ಸುತ್ತೂರು ಶ್ರೀ ಸಂತಾಪ
ಮೈಸೂರು

ತೋಪಿನಮಠದ ಶ್ರೀಗಳಿಗೆ ಸುತ್ತೂರು ಶ್ರೀ ಸಂತಾಪ

October 22, 2020

ಮೈಸೂರು, ಅ.21- ತಿ.ನರಸೀಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮುಡುಕು ತೊರೆಯ ಶ್ರೀ ತೋಪಿನ ಮಠದ ಮಹಾಲಿಂಗ ಶಿವಾಚಾರ್ಯ ಸ್ವಾಮಿಗಳ ನಿಧನಕ್ಕೆ ಸುತ್ತೂರು ಶ್ರೀಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

`ಶ್ರೀ ಮಹಾಲಿಂಗ ಶಿವಾಚಾರ್ಯ ಸ್ವಾಮಿಗಳು ಭಾನುವಾರ ಶಿವ ಸಾಯುಜ್ಯ ಹೊಂದಿದುದು ವಿಷಾದದ ಸಂಗತಿ. 98 ವಸಂತಗಳನ್ನು ಶಿವ ಕಾರುಣ್ಯದಲ್ಲಿಯೇ ಕಳೆದರು. 20ನೇ ವಯಸ್ಸಿನಲ್ಲಿಯೇ ಮಳ ವಳ್ಳಿ ತಾಲೂಕು ಹೊನ್ನಲಗೆರೆಯ ಚಂದೂಪುರದ ಮಠದ ಪಟ್ಟಾ ಧಿಕಾರ ಸ್ವೀಕರಿಸಿ, ಮಠದ ಧಾರ್ಮಿಕ ಕೈಂಕರ್ಯವನ್ನು ನಿಷ್ಠೆಯಿಂದ ನಡೆಸುತ್ತಾ ಬಂದರು. ನಂತರ ಮುಡುಕುತೊರೆ ತೋಪಿನ ಮಠಕ್ಕೆ ಮಠಾಧಿಪತಿಗಳಾದ ಬಳಿಕ ಜಾತ್ರೆಗೆ ವಿವಿಧೆಡೆಯಿಂದ ಬರುವ ಯಾತ್ರಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು.

ಸಮುದಾಯ ಭವನ ನಿರ್ಮಿಸಿ, ವಿವಾಹ ಮುಂತಾದ ಶುಭ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಟ್ಟಿದ್ದರು. ಸುತ್ತೂರು ಶ್ರೀಮಠದ ಹಿರಿಯ ಜಗದ್ಗುರು ಶ್ರೀ ರಾಜೇಂದ್ರ ಸ್ವಾಮಿಗಳ ಪ್ರೀತಿಗೆ ಪಾತ್ರರಾಗಿದ್ದರು. ಎರಡು ಮಠಗಳಿಗೆ ಉತ್ತರಾಧಿಕಾರಿಗಳನ್ನು ನೇಮಿಸಿ, ಶ್ರೀಮಠದ ಎಲ್ಲಾ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳÀು ನಿರಂತರವಾಗಿ ನಡೆದುಕೊಂಡು ಹೋಗುವಂತೆ ಮಾಡಿದ್ದಾರೆ. ಶ್ರೀಗಳ ಆತ್ಮಕ್ಕೆ ಶಾಂತಿ ಕೋರಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಕ್ತಾದಿಗಳಿಗೆ ಭಗವಂತ ಅನುಗ್ರಹಿಸಲಿ ಎಂದು ಕೇಳಿಕೊಳ್ಳುತ್ತೇನೆ’ ಎಂದು ಸುತ್ತೂರು ಶ್ರೀಗಳು ತಿಳಿಸಿದ್ದಾರೆ.

 

Translate »