ಮೈಸೂರಲ್ಲಿ ಮೇ 31ರಿಂದ ಜೂ.3ರವರೆಗೆ  ರಾಜ್ಯ ಮಟ್ಟದ ಸಬ್ ಜೂನಿಯರ್, ಜೂನಿಯರ್ ಅಕ್ವಾಟಿಕ್‍ಚಾಂಪಿಯನ್‍ಷಿಪ್ ಈಜು ಸ್ಪರ್ಧೆ
ಮೈಸೂರು

ಮೈಸೂರಲ್ಲಿ ಮೇ 31ರಿಂದ ಜೂ.3ರವರೆಗೆ  ರಾಜ್ಯ ಮಟ್ಟದ ಸಬ್ ಜೂನಿಯರ್, ಜೂನಿಯರ್ ಅಕ್ವಾಟಿಕ್‍ಚಾಂಪಿಯನ್‍ಷಿಪ್ ಈಜು ಸ್ಪರ್ಧೆ

May 26, 2018

ಮೈಸೂರು: ಮೈಸೂರು ಜಿಲ್ಲಾ ಈಜು ಸಂಸ್ಥೆಯು ಕರ್ನಾಟಕ ಈಜು ಸಂಸ್ಥೆಯ ಸಹಯೋಗದಲ್ಲಿ ಮೇ 31ರಿಂದ ಜೂ.3ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಈಜುಕೊಳದಲ್ಲಿ ರಾಜ್ಯ ಸಬ್ ಜೂನಿಯರ್ ಮತ್ತು ಜೂನಿಯರ್ ಅಕ್ವಾಟಿಕ್ ಚಾಂಪಿಯನ್ ಷಿಪ್-2018 ಆಯೋಜಿಸಿದೆ ಎಂದು ಮೈಸೂರು ಜಿಲ್ಲಾ ಈಜು ಸಂಸ್ಥೆಯ ಮುಖ್ಯಸ್ಥ ಎಂ.ಆರ್.ವಿಜಯರಾಘವನ್ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಂಪಿಯನ್ ಷಿಪ್‍ನಲ್ಲಿ ಈಜು ಸ್ಪರ್ಧೆಗಳು ಮತ್ತು ವಾಟರ್ ಪೋಲೋ ಪಂದ್ಯಗಳು ನಡೆಯಲಿವೆ. ಈ ಬೃಹತ್ ಈಜು ಸ್ಪರ್ಧೆಯಲ್ಲಿ ರಾಜ್ಯಾದ್ಯಂತದಿಂದ 500ಕ್ಕೂ ಹೆಚ್ಚು ಸ್ಪರ್ಧಿಗಳು ಮತ್ತು 75ಕ್ಕೂ ಹೆಚ್ಚು ತಾಂತ್ರಿಕ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಈ ಸ್ಪರ್ಧೆಯಲ್ಲಿ ಕರ್ನಾಟಕ ಈಜು ಸಂಸ್ಥೆಯು ಮುಂಬರುವ ಜೂ.24ರಿಂದ ಜೂ.29ರವರೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುವ ರಾಷ್ಟ್ರೀಯ ಸಬ್ ಜೂನಿಯರ್ ಮತ್ತು ಜೂನಿಯರ್ ಚಾಂಪಿಯನ್‍ಷಿಪ್‍ಗೆ ರಾಜ್ಯ ತಂಡವನ್ನು ಆಯ್ಕೆ ಮಾಡುತ್ತದೆ ಎಂದು ಹೇಳಿದರು.

ಸಂಸ್ಥೇಯು ಇದೇ ಕೊಳದಲ್ಲಿ 3ನೇ ಬಾರಿ ಇಂತಹ ಬೃಹತ್ ಈಜು ಸ್ಪರ್ಧೆಯನ್ನು ಆಯೋಜಿಸುತ್ತಿದೆ. 1962ರಲ್ಲಿ ಮೊದಲು, 1995ರಲ್ಲಿ 2ನೇ ಬಾರಿ ಅಲ್ಲದೆ ಎರಡು ಬಾರಿ ದಕ್ಷಿಣ ವಲಯ ಚಾಂಪಿಯನ್ ಷಿಪ್ ಸ್ಪರ್ಧೆಗಳನ್ನು 1996 ಹಾಗೂ 2004ರಲ್ಲಿ ಆಯೋಜಿಸಿತ್ತು ಎಂಬುದಕ್ಕೆ ಹೆಮ್ಮೆ ಎನಿಸುತ್ತದೆ ಎಂದರು. ಸ್ಪರ್ಧಿಗಳ ಸಂಖ್ಯೆ ಹೆಚ್ಚುತ್ತಿದ್ದು, ಸ್ಪರ್ಧಿಗಳಿಗೆ ಭಾಗವಹಿಸಲು ಮತ್ತು ಅಧಿಕಾರಿಗಳಿಗೆ ಸ್ಪಧೆಗಳನ್ನು ನಡೆಸಲು ಅನುಕೂಲವಾಗುವಂತೆ ಸೌಲಭ್ಯಗಳನ್ನು ವಿಸ್ತಾರವಾಗಿ ವ್ಯವಸ್ಥೆ ಮಾಡಿದ್ದೇವೆ. ಈ ಸ್ಪಧೆಯಲ್ಲಿ ನಿಖರ ಫಲಿತಾಂಶಗಳನ್ನು ಪಡೆಯಲು ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಬಳಸಲಾಗುವ ಎಲೆಕ್ಟ್ರಾನಿಕ್ ಟಚ್ ಪ್ಯಾಡ್‍ಗಳನ್ನು ಮತ್ತು ಇತರೆ ಉನ್ನತ ತಂತ್ರಜ್ಞಾನ ಸಾಧನಗಳನ್ನು ಬಳಸುತ್ತಿರುವುದಾಗಿ ತಿಳಿಸಿದರು.

200 ಮೀ.ವರೆಗಿನ ಸ್ಪರ್ಧೆಗಳನ್ನು ಹೀಟ್ಸ್ ಮತ್ತು ಫೈನಲ್ ಆಧಾರದ ಮೇಲೆ ನಡೆಸಲಾಗುತ್ತದೆ. 200 ಮೀ. ಮೇಲ್ಪಟ್ಟ ಸ್ಪರ್ಧೆಗಳನ್ನು ಸಮಯ ಪರೀಕ್ಷೆಯ ಆಧಾರದಲ್ಲಿ ನಡೆಸಲಾಗುತ್ತದೆ. ಸಂಜೆ 5 ಗಂಟೆಗೆ ಅಂತಿಮ ಸ್ಪರ್ಧೆಗಳನ್ನು ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.

ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರಮುಖ ಈಜು ಸ್ಪರ್ಧಿಗಳು: ಜೂನಿಯರ್ ಬಾಲಕರಲ್ಲಿ ಪ್ರಮುಖ ರಾಷ್ಟ್ರೀಯ, ಅಂತಾರಾಷ್ಟ್ರೀಯ ಈಜು ಸ್ಪರ್ಧಿಗಳಾದ ಶ್ರೀಹರಿ ನಟರಾಜ್, ವೈಭವ ಆರ್ ಶೇಟ್, ತನಿಜ್ ಇಇ ಮ್ಯಾಥ್ಯೂ, ಪ್ರಸಿದ್ಧ್ ಕೃಷ್ಣ. ಜೂನಿಯರ್ ಬಾಲಕಿಯರಲ್ಲಿ ಖುಷಿ ದಿನೇಶ್, ಮಯೂರಿ ಲಿಂಗರಾಜ್, ಸುವನ ಸಿ ಭಾಸ್ಕರ್, ಬಿ.ಜಿ.ಮಧುರಾ, ಸಬ್ ಜೂನಿಯರ್ ಬಾಲಕರಲ್ಲಿ ಎಂ.ಧ್ಯಾನ್, ಅಕ್ಷಯ್ ಆರ್ ಶೇಟ್, ಸ್ಮರಣ್ ಓಲೇಟಿ, ರೇಣುಕಾಚಾರ್ಯ ಜಹೊಡಿಮನಿ, ಸಬ್ ಜೂನಿಯರ್ ಬಾಲಕಿಯರಲ್ಲಿ ನೀನಾ ವೆಂಕಟೇಶ್, ಸಮರ ಚಾಕೋ, ಎ.ಜಡಿಡಾ, ರಿಧಿಮಾ ಕುಮಾರ್ ಪ್ರಮುಖರಾಗಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಈಜು ಸಂಸ್ಥೆಯ ಅಧ್ಯಕ್ಷ ಡಾ.ಸಿ.ಕೃಷ್ಣ, ಗೌರವ ಕಾರ್ಯದರ್ಶಿ ಎಂ.ಪಿ.ನಾಭಿರಾಜ್ ಇನ್ನಿತರರು ಉಪಸ್ಥಿತರಿದ್ದರು.

Translate »