ಮೈಸೂರಿನಿಂದ ತಿರುಪತಿಗೆ ಮತ್ತೊಂದು ಎಕ್ಸ್‍ಪ್ರೆಸ್ ರೈಲು
ಮೈಸೂರು

ಮೈಸೂರಿನಿಂದ ತಿರುಪತಿಗೆ ಮತ್ತೊಂದು ಎಕ್ಸ್‍ಪ್ರೆಸ್ ರೈಲು

May 26, 2018

ಮೈಸೂರು: ಮೈಸೂರಿನಿಂದ ತೆರಳುವ ತಿರುಪತಿ ಯಾತ್ರಾರ್ಥಿಗಳಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ.

ಮೈಸೂರು-ತಿರುಪತಿ ನಡುವೆ ವಾರಕ್ಕೊಮ್ಮೆ ಸಂಚರಿಸುವ ಹೊಸ ಎಕ್ಸ್‍ಪ್ರೆಸ್ ರೈಲು ತಿರುಪತಿಗೆ ಕೇವಲ 10 ಕಿ.ಮೀ. ದೂರದಲ್ಲಿರುವ ರೇಣ ಗುಂಟ ನಿಲ್ದಾಣ ಮತ್ತು ಮೈಸೂರು ನಡುವೆ ಸಂಚರಿಸಲಿದೆ. ಈ ರೈಲು (ರೈಲು ಸಂಖ್ಯೆ: 11065) ಸಂಚಾರ ಜೂ.1ರಂದು ಮೈಸೂರಿನಿಂದ ರೇಣ ಗುಂಟಕ್ಕೆ ಹಾಗೂ (ರೈಲು ಸಂಖ್ಯೆ: 11066) ಜೂ.2ರಂದು ರೇಣ ಗುಂಟದಿಂದ ಮೈಸೂರು ಕಡೆಗೆ ಸಂಚರಿಸುವುದರೊಂದಿಗೆ ಪ್ರಾರಂಭವಾಗಲಿದೆ.

ಪ್ರತಿ ಶುಕ್ರವಾರ ರಾತ್ರಿ 10.55ಕ್ಕೆ ಮೈಸೂರಿನಿಂದ ಹೊರಡುವ ರೈಲು, ಶನಿವಾರ ಬೆಳಿಗ್ಗೆ 8.25ಕ್ಕೆ ರೇಣ ಗುಂಟ ತಲುಪಲಿದೆ. ಶನಿವಾರ ಸಂಜೆ 5.50ಕ್ಕೆ ರೇಣ ಗುಂಟದಿಂದ ಹೊರಡುವ ರೈಲು ಭಾನುವಾರ ಮುಂಜಾನೆ 3.15ಕ್ಕೆ ಮೈಸೂರು ತಲುಪಲಿದೆ.

ಪ್ರತಿದಿನ ತಿರುಪತಿ ಎಕ್ಸ್‍ಪ್ರೆಸ್ ರೈಲು ಜೊತೆಗೆ ವಾರಕ್ಕೊಮ್ಮೆ ಈ ಹೆಚ್ಚುವರಿ ರೈಲನ್ನು ರೈಲ್ವೆ ಇಲಾಖೆ ಮೈಸೂರಿಗೆ ನೀಡಿದೆ. ಹೆಚ್ಚುತ್ತಿರುವ ತಿರುಪತಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ.

Translate »