ಮೈಸೂರು: ಕಾವೇರಿ ನದಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ಕಲ್ಪಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ(ಸಿಎನ್‍ಸಿ), ತಲಕಾವೇರಿಯಿಂದ ಪೂಂಪ್‍ಹಾರ್‍ವರೆಗೆ ವಾಹನ ಜಾಥಾದೊಂದಿಗೆ ‘ಚಾರಿತ್ರಿಕ ಕಾವೇರಿ ಯಾತ್ರೆ’ ಆರಂಭಿಸಿದೆ.
ಜೀವನದಿ ಕಾವೇರಿಯ ಉಗಮ ಸ್ಥಾನವಾದ ಕೊಡಗಿನ ತಲಕಾವೇರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ನಿನ್ನೆ(ಮೇ 24) ಆರಂಭಗೊಂಡಿರುವ ಯಾತ್ರೆ ಇಂದು ಮೈಸೂರಿಗೆ ತಲುಪಿದ್ದು, ಇಲ್ಲಿನ ಪತ್ರಕರ್ತರ ಭವನದಲ್ಲಿ ಸಿಎನ್‍ಸಿ ಸಂಘಟನೆಯ ಸಂಚಾಲಕ ಎನ್.ಯು.ನಾಚಪ್ಪ ಅವರು ಸುದ್ದಿಗೋಷ್ಟಿ ನಡೆಸಿ, ಯಾತ್ರೆಯ ಮಾರ್ಗ ಹಾಗೂ ಉದ್ದೇಶವನ್ನು ವಿವರಿಸಿದರು.
ಭರತ ವರ್ಷದ ವೇದ ಕಾಲದ ಸಪ್ತ ಪವಿತ್ರ ನದಿಗಳಲ್ಲಿ ಕೊಡಗಿನ ಕಾವೇರಿ ನದಿಯೂ ಒಂದಾಗಿದೆ. ಆದರೆ ಲೂಟಿಕೋರರ ಮಾಫಿಯಾದಿಂದಾಗಿ ಕಾವೇರಿ ಆಪತ್ತಿನಲ್ಲಿ ಸಿಲುಕಿದೆ. ಸಪ್ತ ನದಿಗಳಲ್ಲಿ ಒಂದಾದ ಸರಸ್ವತಿಯಂತೆ ಕಾವೇರಿಯೂ ಅದೃಶ್ಯವಾಗುವ ದುಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಕಾವೇರಿ ಉಳಿವಿಗಾಗಿ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ಕಲ್ಪಿಸಲೇಬೇಕಿದೆ. ಈ ಸಂಬಂಧ 2017ರ ಮಾರ್ಚ್‍ನಲ್ಲಿಯೇ ವಿಶ್ವಸಂಸ್ಥೆ, ಅಂತರಾಷ್ಟ್ರೀಯ ನದಿ ನೀರು ಹಂಚಿಕೆ ನ್ಯಾಯಮಂಡಳಿ, ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಗೃಹ ಹಾಗೂ ಜಲಸಂಪನ್ಮೂಲ ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ಇದೀಗ ಕಾವೇರಿ ನದಿ ಪಾತ್ರದ ಜನರಿಗೆ ಇದರ ಮಹತ್ವದ ಬಗ್ಗೆ ಅರಿವು ಮೂಡಿಸುವುದರೊಂದಿಗೆ ನಮ್ಮ ಒತ್ತಾಯ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಮೇ 24ರಿಂದ 30ರವರೆಗೆ ಚಾರಿತ್ರಿಕ ಕಾವೇರಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ತಲಕಾವೇರಿ ಸನ್ನಿದಿಯಲ್ಲಿ ಅಗಸ್ತ್ಯ ಗುರುಗಳು ಹಾಗೂ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ನಿನ್ನೆ ಯಾತ್ರೆ ಆರಂಭಿಸಿ, ಮಡಿಕೇರಿ, ಮೂರ್ನಾಡು, ಗೋಣ ಕೊಪ್ಪ, ಸಿದ್ದಾಪುರ, ಕುಶಾಲನಗರ, ಪಿರಿಯಾಪಟ್ಟಣ, ಹುಣಸೂರು ಮಾರ್ಗವಾಗಿ ಮೈಸೂರಿಗೆ ತಲುಪಿದ್ದೇವೆ. ನಾಳೆ(ಮೇ 26)ಯಿಂದ ಯಾತ್ರೆ ಮುಂದುವರಿಸಿ, ಹೊಗೇನಕಲ್ ಮೂಲಕ ತಮಿಳುನಾಡು ಪ್ರವೇಶಿಸಿ, ಕಾವೇರಿ ನದಿ ಹಾಗೂ ಬಂಗಾಳಕೊಲ್ಲಿ ಸರೋವರ ಸಂಗಮ ಸ್ಥಳವಾದ ಪೂಂಪ್‍ಹಾರ್‍ನಲ್ಲಿ ಪೂಜೆ ಸಲ್ಲಿಸಿ, ಸಮಾವೇಶ ನಡೆಸುವುದರೊಂದಿಗೆ ಯಾತ್ರೆಯನ್ನು ಸಮಾರೋಪಗೊಳಿಸಲಾಗುವುದು. ಮಾರ್ಗಮಧ್ಯೆ ತಂಜಾವೂರ್ ಬೃಹದೇಶ್ವರಿ, ತಿರುವಯ್ಯಾರ್, ಕುಂಭಕೋಣಂನ ಆದಿಕುಂಭೇಶ್ವರ, ಮೈಲಾರದುರೈನ ಕಾವೇರಿ ಸನ್ನಿದಿ ಸೇರಿದಂತೆ ಕಾವೇರಿ ನದಿಪಾತ್ರದಲ್ಲಿರುವ ಧೈವ ಸನ್ನಿದಿಗಳಲ್ಲಿ ಪೂಜೆ ಸಲ್ಲಿಸಲಾಗುವುದು ಎಂದು ನಾಚಪ್ಪ ವಿವರಿಸಿದರು.
ಎಲ್ಲಾ ನಾಗರಿಕತೆಗಳು ಹಾಗೂ ಸಂಸ್ಕøತಿಗೂ ನದಿಗಳೇ ಮೂಲ. ಹಾಗೆಯೇ ಕೊಡವ ಬುಟ್ಟಕಟ್ಟಿಗೆ ಕಾವೇರಿಯೇ ಜೀವನದಿ. ಅನೇಕ ದಾರ್ಶನಿಕರು, ಸಂತಶ್ರೇಷ್ಠರು, ಧರ್ಮ ಸುಧಾರಕರು, ಕ್ರಾಂತಿ ಪುರುಷರು ಕಾವೇರಿ ನದಿ ದಂಡೆಯಲ್ಲಿ ಸಾಗಿ, ವಿಶ್ವಕ್ಕೇ ಶ್ರೇಷ್ಟ ಸಂದೇಶ ಸಾರಿದ್ದಾರೆ. ದುರಂತ ಹತ್ಯಾಕಾಂಡಕ್ಕೂ ಕಾವೇರಿ ಸಾಕ್ಷಿಯಾಗಿದೆ. ಯಾವುದನ್ನೂ ಕೊಡವರು ಮರೆಯುವುದಿಲ್ಲ. ಮಹಾಕಾವ್ಯವಾದ ಕಾವೇರಿಯನ್ನು ಸಂರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಇದಕ್ಕೆ ಕಾವೇರಿ ನದಿ ಫಲಾನುಭವಿಗಳೂ ಸಕ್ರಿಯವಾಗಿ ಸಹಕಾರ ನೀಡಬೇಕು. ತಲಕಾವೇರಿಯಿಂದ ಪೂಂಪ್‍ಹಾರ್‍ನವರೆಗೂ ಎಲ್ಲಾ ಋತುಗಳಲ್ಲೂ ಕಾವೇರಿ ಮೈದುಂಬಿ ಹರಿದು ಜೀವಮಾತೆಯಾಗಿ ಉಳಿಯಬೇಕೆಂಬುದಷ್ಟೇ ನಮ್ಮ ಹೋರಾಟದ ಗುರಿಯಾಗಿದೆ.
-ನಾಚಪ್ಪ
ನ್ಯೂಜಿಲ್ಯಾಂಡ್‍ನ ಮಹೋರಿ ಬುಡಕಟ್ಟು ಜನರು ತಮ್ಮ ಪೂರ್ವಜಳು ಎಂದು ನಂಬಿರುವ `ವಂಗಾನುಹಿ’ ಜೀವನದಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ಕಲ್ಪಿಸಬೇಕೆಂದು 140 ವರ್ಷಗಳಿಂದ ಹೋರಾಟ ನಡೆಸಿದ್ದರು. ಕಳೆದ ವರ್ಷವಷ್ಟೇ ಸುದೀರ್ಘ ಹೋರಾಟಕ್ಕೆ ಜಯ ಸಿಕ್ಕಿರುವುದು ಸ್ಮರಣ ೀಯ ಸಂಗತಿ. ಇನ್ನು ಭಾರತದಲ್ಲಿರುವ ಸಪ್ತ ನದಿಗಳಲ್ಲಿ ಗಂಗಾ ಹಾಗೂ ಯಮುನಾ ನದಿಗಳಿಗೆ ಉತ್ತರಖಂಡ್ ಸರ್ಕಾರ ಹಾಗೂ ನರ್ಮದಾ ನದಿಗೆ ಮಧ್ಯಪ್ರದೇಶ ಸರ್ಕಾರ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ಕಲ್ಪಿಸಿದೆ. ಹಾಗಾಗಿ ಕಾವೇರಿ ನದಿಗೂ ಈ ಸ್ಥಾನಮಾನ ಕಲ್ಪಿತವಾಗಬೇಕೆಂದು ಸಿಎನ್‍ಸಿ ಸಂಘಟನೆ ವರ್ಷದಿಂದಲೂ ಸತತ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ ಅವರು, ಕಾವೇರಿ ನದಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ಸಿಕ್ಕರೆ, ಜೀವಂತ ವ್ಯಕ್ತಿಗೆ ಸಿಗುವ ಎಲ್ಲಾ ಹಕ್ಕು ಮತ್ತು ಕರ್ತವ್ಯಗಳು ಲಭಿಸುತ್ತವೆ. ನಂತರದಲ್ಲಿ ಮನುಷ್ಯರಂತೆ ಆಸ್ತಿಯ ಒಡೆತನವನ್ನೂ ಹೊಂದುವುದರ ಜೊತೆಗೆ ಕಾನೂನು ಸಮರವನ್ನೂ ನಡೆಸಬಹುದು. ಇದರೊಂದಿಗೆ ಕಾವೇರಿಯನ್ನು ಸಂರಕ್ಷಿಸಿಕೊಳ್ಳಬಹುದು ಎಂದು ವಿಶ್ಲೇಷಿಸಿದರು.
ಪುಲ್ಲೇರ ಸ್ವಾತಿ ಕಾಳಪ್ಪ, ರೇಖಾ ನಾಚಪ್ಪ, ಸ್ವಾತಿ ಕಿರಣ್ ಅಪ್ಪನೆರೆವಂಡ, ಬೋಡಿರಾ ಶಾಂತಿ ಸೋಮಯ್ಯ, ಮುತ್ತಮ್ಮ ಕಲಿಯಂಡ, ಪದ್ಮಿನಿ ಚೇಂದ್ರಿಮಾಡ ಸೇರಿದಂತೆ ಸಂಘಟನೆಯ ಅನೇಕ ಸದಸ್ಯರು ಸುದ್ದಿಗೋಷ್ಟಿಯಲ್ಲಿದ್ದರು.
ಕೊಡಗಿನ ಕಾವೇರಿ ನದಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ಕಲ್ಪಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ತಲಕಾವೇರಿಯಿಂದ ಪೂಂಪ್‍ಹಾರ್‍ವರೆಗೆ ಹಮ್ಮಿಕೊಂಡಿರುವ `ಚಾರಿತ್ರಿಕ ಕಾವೇರಿ ಯಾತ್ರೆ’ ಶುಕ್ರವಾರ ಮೈಸೂರು ತಲುಪಿತು.