ನ.1ಕ್ಕೆ ಸಿಎನ್‍ಸಿ ದೆಹಲಿ ಚಲೋ
ಕೊಡಗು

ನ.1ಕ್ಕೆ ಸಿಎನ್‍ಸಿ ದೆಹಲಿ ಚಲೋ

July 23, 2018

ಮಡಿಕೇರಿ: ಕೊಡವ ಲ್ಯಾಂಡ್ ಬೇಡಿಕೆಯೊಂದಿಗೆ ವಿವಿಧ ಹಕ್ಕುಗಳ ಈಡೇರಿಕೆಗಾಗಿ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನ.1 ರಂದು 24ನೇ ವರ್ಷದ ‘ದೆಹಲಿ ಚಲೋ’ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಕಾಲ ದಲ್ಲಿ ಕೊಡವರನ್ನು ಹತ್ಯೆಗೈಯಲು ದೇವಟ್ ಪರಂಬ್ ನರ ಮೇಧದಲ್ಲಿ ನೇರಭಾಗಿಯಾದ ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯ ಮಿತ್ರ ಪಡೆಯ ಪಾಷವೀ ಕೃತ್ಯಕ್ಕಾಗಿ ಫ್ರೆಂಚ್ ಸರ್ಕಾರ ಕೊಡವರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಫ್ರೆಂಚ್ ರಾಯಭಾರ ಕಛೇರಿ ಎದುರು ನ.2 ರಂದು ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು. ಈ ಎರಡು ಪ್ರಮುಖ ವಿಚಾರಗಳ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಅವರಿಗೆ ಮನವಿಯನ್ನು ಸಲ್ಲಿಸಲಾಗಿದ್ದು, ಇದರೊಂದಿಗೆ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು ಸೇರಿದಂತೆ ಹಲ ಗಣ್ಯರಿಗೆ ಮನವಿಯನ್ನು ರವಾನಿಸಲಾಗಿದೆ ಎಂದು ನಾಚಪ್ಪ ಹೇಳಿದರು.

ಕೊಡಗನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸಿದ ದಿನ ನ.1 ನ್ನು ದುರಾಕ್ರಮಣದ ದಿನವನ್ನಾಗಿ ಜಂತರ್ ಮಂತರ್‍ನಲ್ಲಿ ಕೊಡವ-ಕೊಡವತಿಯರು ಧರಣಿ ನಡೆಸುವುದರೊಂದಿಗೆ ಕೊಡವ ಲ್ಯಾಂಡ್ ಹಕ್ಕೊತ್ತಾಯದ ಜಾರಿಗೆ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಆಗ್ರಹಿಸಲಾಗುವುದೆಂದು ತಿಳಿಸಿದರು. ನವೆಂಬರ್ 2 ರಂದು ಫ್ರೆಂಚ್ ರಾಯಭಾರಿ ಕಛೇರಿ ಮುಂಭಾಗ ಸತ್ಯಾಗ್ರಹ ನಡೆಸಿ, ಕೊಡವರಿಗಾದ ನೋವಿಗೆ ಕೊನೆಯ ಪಕ್ಷ ಪಶ್ಚಾತಾಪ ಪಟ್ಟು ನಮ್ಮ ಕ್ಷಮೆ ಕೇಳಬೇಕು ಎಂಬ ಕೋರಿಕೆಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಚಂಬಂಡ ಜನತ್, ಮಂದಪಂಡ ಮನೋಜ್, ಅರೆಯಡ ಗಿರೀಶ್ ಹಾಗೂ ಕಲಿಯಂಡ ಮೀನಾ ಕಾರ್ಯಪ್ಪ ಉಪಸ್ಥಿತರಿದ್ದರು.

Translate »