`ಸಿಡಿಮದ್ದು’ ಬಳಸಿ ಮೀನುಗಾರಿಕೆ
ಮೈಸೂರು

`ಸಿಡಿಮದ್ದು’ ಬಳಸಿ ಮೀನುಗಾರಿಕೆ

January 1, 2019

ಮೈಸೂರು: ಕಡಿಮೆ ಅವಧಿಯಲ್ಲಿ ಹೆಚ್ಚು ಸಂಪಾದನೆ ಮಾಡುವ ದುರಾಸೆಯಿಂದಾಗಿ ಕೆಲವು ಮೀನುಗಾರರು ವಾಮಮಾರ್ಗದಲ್ಲಿ ಮೀನುಗಾರಿಕೆಗೆ ಮುಂದಾಗಿದ್ದು, ಕಾವೇರಿ ನದಿಯಲ್ಲಿ ಸಿಡಿಮದ್ದು ಬಳಸಿ ಮೀನು ಹಿಡಿಯುತ್ತಿದ್ದಾರೆ. ಈ ಅಪಾಯಕಾರಿ ವಿಧಾನದಿಂದಾಗಿ ಕೆಲವರು ಕೈ ಕಳೆದು ಕೊಂಡು ಪರಿತಪಿಸುತ್ತಿದ್ದಾರೆ.

ಕಾವೇರಿ ನದಿಯಲ್ಲಿ ಮೀನುಗಾರಿಕೆಗೆ ಅವಕಾಶ ನೀಡಿದ್ದು, ಆದರೆ ಕೆಲವು ಮೀನುಗಾರರು ಕಡಿಮೆ ಶ್ರಮ ಹಾಕಿ ಹೆಚ್ಚು ಸಂಪಾದಿಸಲು ವಿನಾಶಕ ಮಾರ್ಗ ಅನುಸರಿಸುವ ಮೂಲಕ ತಮ್ಮನ್ನೂ ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. ನದಿಯಲ್ಲಿ ಮೀನುಗಳೊಂದಿಗೆ ನೀರುನಾಯಿ ಸೇರಿದಂತೆ ಇನ್ನಿತರ ಜಲ ಚರಗಳಿಗೆ ಸಂಚಕಾರ ತಂದಿಡುತ್ತಿದ್ದಾರೆ. ಪರಿಸರ ಸೂಕ್ಷ್ಮವಲಯ ಹಾಗೂ ಸಂರಕ್ಷಿತ ಪ್ರದೇಶದಲ್ಲೂ `ಸಿಡಿಮದ್ದು’ (ಡೈನಾಮೈಟ್) ಸಿಡಿಸಿ ಮೀನುಗಾರಿಕೆ ಮಾಡುತ್ತಿರುವುದು ಅಪಾಯದ ಸಂಕೇತವಾಗಿದೆ.

ಎಲ್ಲೆಲ್ಲಿ: ನಾಡಿನ ಜೀವನದಿ ಕಾವೇರಿ ಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ಆಸುಪಾಸಿನ ಸಂಗಮ, ಕರಿಘಟ್ಟ, ಗೋಸಾಯಿಘಾಟ್, ಮಹದೇವಪುರ, ಸಾಗರಕಟ್ಟೆ, ಬೆಳಗೊಳ, ಕೆ.ಆರ್.ನಗರ, ಚುಂಚನಕಟ್ಟೆ, ತಲಕಾಡು, ತಿ.ನರಸೀ ಪುರ, ಬನ್ನೂರು, ಕೊಳ್ಳೇಗಾಲ ಸೇರಿದಂತೆ ಕೆಲವು ಆಯ್ದ ಸ್ಥಳಗಳಲ್ಲಿ ಕೆಲವು ಮೀನುಗಾರರು ಅಪಾಯಕಾರಿ ವಿಧಾನದ ಮೂಲಕ ಮೀನು ಹಿಡಿಯುವ ದುಸ್ಸಾಹಸ ಮಾಡುತ್ತಿದ್ದಾರೆ. ಸಿಡಿಮದ್ದು ಸಿಡಿತದಿಂದ ಪರಿಸರಕ್ಕೆ ಹಾನಿ, ಪ್ರಾಣಕ್ಕೆ ಸಂಚಕಾರ ತಂದೊಡ್ಡಬಹುದು ಎಂದು ತಿಳಿದಿದ್ದರೂ ಮೀನುಗಾರರು ಮಾತ್ರ ಸಿಡಿಮದ್ದು ಸಿಡಿಸಿ ಮೀನುಗಳ ಮಾರಣ ಹೋಮ ನಡೆಸುತ್ತಿದ್ದಾರೆ.

ಭಯಾನಕ ಸಿಡಿಮದ್ದು: ಕಲ್ಲು ಗಣಿಗಾರಿಕೆಗೆ ಬಳಸುವ ಸಿಡಿಮದ್ದಿನಂತೆ ಕಡಿಮೆ ಸಾಮಥ್ರ್ಯದ ಡೈನಾಮೈಟ್ ಸಿಡಿಸಿ ಮೀನುಗಳನ್ನು ಸಾಯಿಸಲಾಗುತ್ತಿದೆ. ಮುಷ್ಟಿ ಗಾತ್ರದ ಸಿಡಿಮದ್ದನ್ನು ಬಟ್ಟೆಯಲ್ಲಿ ಸುತ್ತಿ, ಅದಕ್ಕೆ ನಾಲ್ಕು ಇಂಚು ಉದ್ದದ ಬತ್ತಿ ಇರುತ್ತದೆ. ಈ ಸಿಡಿಮದ್ದನ್ನು ಮೀನು ಗಾರರ ಭಾಷೆಯಲ್ಲಿ ಜಲಬಾಂಬ್, ಡೈನಾ ಮೆಟ್, ಕೇಪು, ಸಿಡಿಮದ್ದು, ತೋಟ, ಏಟು ಹಾಗೂ ಇನ್ನಿತರ ಹೆಸರಿನಿಂದ ಕರೆಯಲಾಗುತ್ತದೆ.
ಕೆಲವರಿಗಷ್ಟೇ ಇದರ ಪರಿಚಯವಿದ್ದು, ಗೌಪ್ಯವಾಗಿ ಬಳಸಿ ಮೀನು ಗಳನ್ನು ಹಿಡಿಯುತ್ತಿದ್ದಾರೆ. ಸಾಮಾನ್ಯವಾಗಿ ಬೆಳಿಗ್ಗೆ 10ರಿಂದ 11 ಹಾಗೂ ಮಧ್ಯಾಹ್ನ 12 ರಿಂದ 1ಗಂಟೆಯೊಳಗೆ ಸಿಡಿಮದ್ದು ಸಿಡಿಸುವ ಪ್ರಕ್ರಿಯೆ ನಡೆಯುತ್ತದೆ ಎಂದು ಪರಿಸರ ಪ್ರೇಮಿಗಳು ತಿಳಿಸಿದ್ದಾರೆ.

ಮೀನುಗಾರಿಕೆ ವಿಧಾನ: ನದಿಗೆ ತೆಪ್ಪದಲ್ಲಿ ಇಳಿಯುವ ಮೀನುಗಾರರು, ಮೀನುಗಳು ಹೆಚ್ಚಾಗಿರುವ ಸ್ಥಳವನ್ನು ಗುರುತಿಸಿ ಸಿಡಿಮದ್ದಿಗೆ ಅಳವಡಿಸಿದ ಬತ್ತಿಗೆ ಬೆಂಕಿ ಹಚ್ಚಿ ನದಿಗೆ ಎಸೆಯುತ್ತಾರೆ. ಅದು ಸಿಡಿ ಯುತ್ತಿದ್ದಂತೆಯೇ ನೀರು ರಭಸವಾಗಿ ಮೀನುಗಳಿಗೆ ಅಪ್ಪಳಿಸುತ್ತದೆ. ಇದರಿಂದ ಆಘಾತಕ್ಕೊಳಗಾಗುವ ಮೀನುಗಳು ಸಾವನ್ನಪ್ಪುತ್ತವೆ. ದೇಹದ ಮೇಲೆ ಗಾಯ ವಾಗದಿದ್ದರೂ, ರಕ್ತ ಕಾರಿಕೊಂಡಂತೆ ಮೀನು ಗಳು ಸತ್ತು ತೇಲುತ್ತವೆ. ನಂತರ ಬಲೆ ಬಳಸಿ ಸತ್ತ ಮೀನುಗಳನ್ನು ಸಂಗ್ರಹಿಸು ತ್ತಾರೆ. ಕೆಲವೇ ನಿಮಿಷದಲ್ಲಿ ಮೀನುಗಳ ಸಂಗ್ರಹಿಸುವುದರಿಂದ ಅಧಿಕ ಲಾಭವಿದೆ.

ಕೈ ಕಳೆದುಕೊಂಡವರು: ಸಿಡಿಮದ್ದು ಬಳಸಿ ಮೀನು ಹಿಡಿಯಲು ಹೋಗಿದ್ದ ಹತ್ತಾರು ಮೀನುಗಾರರು ಕೈ ಕಳೆದು ಕೊಂಡಿದ್ದಾರೆ. ಸಿಡಿಮದ್ದಿನ ಬತ್ತಿಗೆ ಬೆಂಕಿ ಹಚ್ಚಿ ನದಿಗೆ ಎಸೆಯುವ ಮುನ್ನವೇ ಕೆಲವೊಮ್ಮೆ ಸಿಡಿದ ಪರಿಣಾಮ ಕೆಲ ವರು ಅಂಗವಿಕಲರಾಗಿದ್ದಾರೆ. ಕೆ.ಆರ್. ನಗರ, ಕೆಆರ್‍ಎಸ್, ಶ್ರೀರಂಗಪಟ್ಟಣ ದಲ್ಲಿ ಹೀಗೆ ಕೈ ಕಳೆದುಕೊಂಡಿರುವ ಹಲವು ಮೀನುಗಾರರಿದ್ದಾರೆ. ಓರ್ವ ಮೀನುಗಾರನಿಗೆ ಎರಡೂ ಕೈ ಜಖಂ ಗೊಂಡಿವೆ. ಜೀವನ ನಿರ್ವಹಿಸಲಾ ಗದೆ ಪರಿತಪಿಸುತ್ತಿದ್ದಾರೆ. ಅವರ ಪತ್ನಿ ಕೂಲಿ ಮಾಡಿ ಮನೆಯವರನ್ನು ಸಾಕುವ ದುಸ್ಥಿತಿ ಎದುರಾಗಿದೆ.

ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾದಿಸಬಹುದೆಂಬ ಆಸೆಯಿಂದ ಕಳೆದ ಎರಡು ವರ್ಷದ ಹಿಂದೆ ಹೀಗೆ ಮೀನು ಹಿಡಿಯಲು ಹೋಗಿ ಕೈ ಕಳೆದುಕೊಂಡಿದ್ದೇನೆ. ಕೆಲ ದಿನ ಯಶಸ್ವಿ ಯಾಗಿ ಮೀನು ಹಿಡಿದಿದ್ದೆ. ಅದೊಂದು ದಿನ ಬತ್ತಿ ಬೇಗನೆ ಉರಿದು ಕೈಯಲ್ಲಿ ದ್ದಾಗಲೇ ಸಿಡಿಯಿತು. ಮುಂಗೈ ಛಿದ್ರವಾಗಿ ನದಿಗೆ ಬಿತ್ತು, ರಕ್ತ ಸುರಿ ಯಲಾರಂಭಿಸಿತು. ದಡದಲ್ಲಿದ್ದವರು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆ ದೊಯ್ದು ಚಿಕಿತ್ಸೆ ಕೊಡಿಸಿದರು. ಇದೀಗ ಸಾರಿಗೆ ಸಂಸ್ಥೆ ನೀಡುವ ಉಚಿತ ಬಸ್‍ಪಾಸ್ ಪಡೆದಿದ್ದೇನೆ.

– ಎಂ.ಟಿ.ಯೋಗೇಶ್ ಕುಮಾರ್

Translate »