ಮಹದೇಶ್ವರ ಬೆಟ್ಟ ಸುತ್ತಮುತ್ತಲ ಕುಗ್ರಾಮಗಳಿಗೆ ವೈರ್‍ಲೆಸ್ ಭಾಗ್ಯ
ಮೈಸೂರು

ಮಹದೇಶ್ವರ ಬೆಟ್ಟ ಸುತ್ತಮುತ್ತಲ ಕುಗ್ರಾಮಗಳಿಗೆ ವೈರ್‍ಲೆಸ್ ಭಾಗ್ಯ

November 19, 2018

ಮೈಸೂರು: ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡಂಚಿನ ಗ್ರಾಮಗಳ ಜನರ ವಿಶ್ವಾಸ ಗಳಿಸುವುದರೊಂದಿಗೆ ಗ್ರಾಮಗಳಿಗೆ ಪ್ರಾಣಿಗಳು ನುಗ್ಗಿದ ಮಾಹಿತಿಯನ್ನು ತ್ವರಿತಗತಿಯಲ್ಲಿ ಪಡೆದು ಕೊಳ್ಳುವುದಕ್ಕಾಗಿ ವೈರ್‍ಲೆಸ್ ಅನ್ನು ನೀಡಲು ಮುಂದಾಗಿದೆ.

ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಕಳೆದ ವರ್ಷ ಸೂಕ್ಷ್ಮ ಪರಿಸರ ವಲಯ ಎಂದು ಘೋಷಣೆಯಾಗುತ್ತಿದ್ದಂತೆ ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದ ಸುತ್ತಲೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಸುಮಾರು 35 ಗ್ರಾಮಗಳು ಸಂಪರ್ಕದ ಕೊರತೆ ಎದುರಿಸುತ್ತಿವೆ. ಚಂಗಡಿ, ಪೊನ್ನಾಚಿ, ಮರೂರು ಸೇರಿದಂತೆ ಹಲವು ಗ್ರಾಮಗಳು ಸಾಕಷ್ಟು ಅರಣ್ಯ ಭಾಗಕ್ಕೆ ಹೊಂದಿಕೊಂಡಂತೆ ಇದೆ. ಇದರಿಂದ ಆನೆ, ಹುಲಿ, ಚಿರತೆ ಸೇರಿದಂತೆ ವಿವಿಧ ಪ್ರಾಣಿಗಳು ಗ್ರಾಮಗಳಿಗೆ ಆಗಮಿಸಿ ಗ್ರಾಮಸ್ಥರನ್ನು ಭಯದ ವಾತಾವರಣದಲ್ಲಿ ಸಿಲುಕುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ನಡುವೆ ಕಂದಕ ಏರ್ಪಟಿದ್ದು, ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಕಳೆದ 2 ತಿಂಗಳ ಹಿಂದೆಯಷ್ಟೇ ಮರೂರು ಗ್ರಾಮಕ್ಕೆ ನುಗ್ಗಿದ ಆನೆಯೊಂದು ಹೊಲದಲ್ಲಿ ರಾಗಿ ಬೆಳೆ ಕಾಯಲು ಮಲಗಿದ್ದ ಸಿದ್ದಪ್ಪ (60) ಎಂಬಾತನ ಮೇಲೆ ದಾಳಿ ಮಾಡಿ ಹತ್ಯೆಗೈಯ್ದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಗ್ರಾಮಸ್ಥರು ಅರಣ್ಯ ಇಲಾಖೆ ಆರ್‍ಎಫ್‍ಓ ಮತ್ತು ಡಿಆರ್‍ಎಫ್‍ಓ ಮೇಲೆ ಹಲ್ಲೆ ನಡೆಸಿದ್ದರು. ಸಕಾಲಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಸಂಪರ್ಕವನ್ನು ಗಟ್ಟಿಗೊಳಿಸಲು ಇಲಾಖೆ ಕ್ರಮ ಕೈಗೊಂಡಿದೆ.

ವೈರ್‍ಲೆಸ್: ಮಲೆ ಮಹದೇಶ್ವರ ವನ್ಯಧಾಮದ ಸುತ್ತಮುತ್ತ ಸುಮಾರು 35 ಗ್ರಾಮಗಳು ಕೇಂದ್ರ ಸ್ಥಾನದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿವೆ. ಈ ಗ್ರಾಮಗಳಿಗೆ ಮೊಬೈಲ್ ಸಂಪರ್ಕ ಸಿಗುವುದೇ ಕಷ್ಟವಾಗಿದೆ. ಇದರಿಂದ ವನ್ಯಜೀವಿಗಳು ದಾಳಿ ನಡೆಸಿದರೆ, ಆ ಮಾಹಿತಿ ಅರಣ್ಯ ಇಲಾಖೆಗೆ ತಡವಾಗಿ ತಲುಪುವಂತಾಗಿದೆ. ಈ ಸಮಸ್ಯೆಯೇ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಸಂಪರ್ಕ ಕಡಿದುಕೊಂಡಿರುವ ಗ್ರಾಮಗಳಿಗೆ ವಾಕಿಟಾಕಿ ನೀಡಲು ಇಲಾಖೆ ಮುಂದಾಗಿದೆ.

ಸಂಪರ್ಕವೇ ಇಲ್ಲ: ಮರೂರು, ಪೊನ್ನಾಚಿ ಹಾಗೂ ಚಂಗಡಿ ಗ್ರಾಮದ ಹಲವಾರು ಗ್ರಾಮಸ್ಥರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಮಳೆ ಬಂದರೆ ನಮ್ಮ ಗ್ರಾಮಗಳಿಗೆ ವಿದ್ಯುತ್ ಹಾಗೂ ಮೊಬೈಲ್ ಸಂಪರ್ಕ ಕಡಿತವಾಗುತ್ತದೆ. ಮೊಬೈಲ್ ಸಿಗ್ನಲ್ ಕಡಿಮೆ ಪ್ರಮಾಣದಲ್ಲಿ ದೊರೆಯುವುದರಿಂದ ಒಂದು ಕರೆ ಮಾಡಬೇಕಾದರೆ ಪರದಾಡುವ ಪರಿಸ್ಥಿತಿ ಇದೆ. ಆನೆಗಳು ಗ್ರಾಮಗಳಿಗೆ ನುಗ್ಗಿ ದಾಳಿ ಮಾಡಿದರೆ, ಆ ವಿಷಯವನ್ನು ಅರಣ್ಯ ಇಲಾಖೆ ತಿಳಿಸಲು ಸಾಧ್ಯವಾಗುವುದಿಲ್ಲ. ದಾಳಿ ನಡೆದು ಸಾಕಷ್ಟು ಹಾನಿಯಾದ ನಂತರ ಇಲಾಖೆಯ ಸಿಬ್ಬಂದಿಗಳು ಆಗಮಿಸುತ್ತಾರೆ. ಇದರಿಂದ ಜನರ ಆಕ್ರೋಶಕ್ಕೆ ಸಹಜವಾಗಿಯೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ತುತ್ತಾಗುತ್ತಿದ್ದಾರೆ. ಇದೀಗ ಗ್ರಾಮಗಳಿಗೆ ವೈರ್‍ಲೆಸ್ ನೀಡುವುದಕ್ಕೆ ಇಲಾಖೆ ಮುಂದಾಗಿರುವುದು ಸ್ವಾಗತಕರ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.

– ಎಂ.ಟಿ.ಯೋಗೇಶ್ ಕುಮಾರ್

Translate »