ಮಾದಪ್ಪನ ಯುಗಾದಿ ಜಾತ್ರೆಗೆ ಪ್ರವಾಸಿಗರ ನಿರ್ಬಂಧ
ಚಾಮರಾಜನಗರ

ಮಾದಪ್ಪನ ಯುಗಾದಿ ಜಾತ್ರೆಗೆ ಪ್ರವಾಸಿಗರ ನಿರ್ಬಂಧ

April 5, 2021

ಹನೂರು, ಏ.4(ಸೋಮು)-ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ಈ ಬಾರಿಯ ಯುಗಾದಿ ಜಾತ್ರೆಯನ್ನು ಅತ್ಯಂತ ಸಾಂಪ್ರದಾಯಿಕ ವಾಗಿ ಮತ್ತು ಸ್ಥಳೀಯವಾಗಿ ನಡೆಸಲು ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.
ರಾಜ್ಯದಲ್ಲಿ ಕೊರೊನಾ 2ನೇ ಅಲೆ ಭೀತಿ ಉಂಟಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಉಲ್ಬಣವಾಗುತ್ತಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಏ. 10ರಿಂದ 13ರವರೆಗೆ ನಡೆಯುವ ಯುಗಾದಿ ಜಾತ್ರಾ ಮಹೋತ್ಸವದ ವೇಳೆಯಲ್ಲಿ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸುವಂತೆ ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಭಕ್ತಾದಿಗಳ ಸುರಕ್ಷತೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಏ.10ರಿಂದ 4 ದಿನಗಳ ಕಾಲ ವಿಶೇಷ ಪೂಜಾ ಕಾರ್ಯಗಳಿಗೆ ದೇವಾಲಯದ ಅರ್ಚ ಕರು, ಸಿಬ್ಬಂದಿ, ಸ್ಥಳೀಯರು, ಸರ್ಕಾರಿ ಕೆಲ ಸದ ನಿಮಿತ್ತ ತೆರಳುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಹೊರತುಪಡಿಸಿ ತಾಲೂಕು, ಜಿಲ್ಲಾ ಹಾಗೂ ಅಂತರಜಿಲ್ಲಾ ಸಾರ್ವಜನಿಕರು ಮತ್ತು ಭಕ್ತಾದಿಗಳ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *