ಮಲೆಮಹದೇಶ್ವರಬೆಟ್ಟ ಇನ್ನು ಮುಂದೆ ಹುಲಿ ಸಂರಕ್ಷಣಾ ವಲಯ
ಚಾಮರಾಜನಗರ, ಮೈಸೂರು

ಮಲೆಮಹದೇಶ್ವರಬೆಟ್ಟ ಇನ್ನು ಮುಂದೆ ಹುಲಿ ಸಂರಕ್ಷಣಾ ವಲಯ

January 11, 2019

ಚಾಮರಾಜನಗರ: ಹುಲಿ ಸಂರಕ್ಷಿತ ಮೀಸಲು ಅರಣ್ಯವಾಗಿ ಜಿಲ್ಲೆಯ ಪ್ರಸಿದ್ಧ ವನ್ಯಧಾಮ ಮಹದೇಶ್ವರ ಬೆಟ್ಟವನ್ನು ಘೋಷಿಸಲಾಗಿದೆ. ಈ ಪ್ರಸ್ತಾಪಕ್ಕೆ ಕೇಂದ್ರ ಅನುಮೋದನೆ ನೀಡಿದರೆ ಜಿಲ್ಲೆಯು ಮೂರು ಹುಲಿ ರಕ್ಷಿತಾರಣ್ಯ ವನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದರೊಂದಿಗೆ ರಾಜ್ಯದಲ್ಲಿ 6 ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ. 960 ಚ.ಕಿ.ಮೀ. ವ್ಯಾಪ್ತಿಯ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಮೀಸಲು ಅರಣ್ಯ ಎಂದು ಘೋಷಿಸಬೇಕು ಎಂದು ಬೆಂಗಳೂರಿನಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಈ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.

ಅಂತಿಮವಾಗಿ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ. ಜಿಲ್ಲೆಯಲ್ಲಿ ಈಗಾಗಲೇ ಬಂಡೀ ಪುರ, ಬಿಳಿಗಿರಿರಂಗನಬೆಟ್ಟ ಹುಲಿ ರಕ್ಷಿತಾರಣ್ಯ ಪ್ರದೇಶಗಳಿವೆ. ಈ ಸಾಲಿಗೆ ಈಗ ಮಲೆ ಮಹ ದೇಶ್ವರಬೆಟ್ಟವೂ ಸೇರಲಿದೆ. ದೇಶದ ಯಾವುದೇ ಜಿಲ್ಲೆಯು ಎರಡು ಹುಲಿ ಸಂರಕ್ಷಿತಾರಣ್ಯ ಹೊಂದಿಲ್ಲ. ಪ್ರಸ್ತುತ ಗಡಿ ಜಿಲ್ಲೆ ಚಾಮರಾಜನಗರ ಮೂರು ಹುಲಿ ಸಂರಕ್ಷಿತಾರಣ್ಯ ಪ್ರದೇಶ ಹೊಂದಿದ ಹಿರಿಮೆಗೆ ಪಾತ್ರವಾಗಲಿದೆ.

ಜಿಲ್ಲೆಯ ಒಟ್ಟು ಭೂ ಪ್ರದೇಶದಲ್ಲಿ ಶೇ. 51ರಷ್ಟು ಅರಣ್ಯ ಇದೆ. ಇದರಲ್ಲಿ ಮಲೆಮಹದೇಶ್ವರ ಬೆಟ್ಟ, ಬಂಡೀಪುರ, ಬಿಳಿಗಿರಿರಂಗನಬೆಟ್ಟ ಹಾಗೂ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶ ಒಳಗೊಂಡಿದೆ.

ಮಲೆಮಹದೇಶ್ವರ ಬೆಟ್ಟ ಅರಣ್ಯ ಪ್ರದೇಶ 2013-14ನೇ ಸಾಲಿನಲ್ಲಿ ವನ್ಯಧಾಮವಾಗಿ ಘೋಷಣೆ ಯಾಗಿತ್ತು. ಈ ಪ್ರದೇಶದಲ್ಲಿ ಹುಲಿಗಳ ಸಂತತಿ ಹೆಚ್ಚುತ್ತಿರುವ ಕಾರಣ ಹುಲಿ ಮೀಸಲು ಅರಣ್ಯ ವನ್ನಾಗಿ ಘೋಷಿಸುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ರಾಜ್ಯದಲ್ಲಿಯೇ ಹೆಚ್ಚು ಹುಲಿಗಳನ್ನು ಹೊಂದಿದೆ. ಬಿಳಿಗಿರಿರಂಗನ ಬೆಟ್ಟ ಅರಣ್ಯದಲ್ಲಿ ಸಾಕಷ್ಟು ಹುಲಿಗಳು ಇರುವುದು ಗಣತಿಯ ವೇಳೆ ಕಂಡು ಬಂದಿದೆ. ಮಹದೇಶ್ವರಬೆಟ್ಟದ ಅರಣ್ಯ ದಲ್ಲಿಯೂ ಹುಲಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇದನ್ನು ಹುಲಿ ರಕ್ಷಿತಾರಣ್ಯ ಎಂದು ಘೋಷಿಸುತ್ತಿರುವುದು ಪ್ರಾಣಿ ಪ್ರಿಯರಲ್ಲಿ ಸಂತಸ ಮೂಡಿಸಿದೆ.

Translate »