ಮೈಸೂರು-ಬೆಂಗಳೂರು ಹೆದ್ದಾರಿ: ಸಮರೋಪಾದಿ ಕಾಮಗಾರಿ
ಮೈಸೂರು

ಮೈಸೂರು-ಬೆಂಗಳೂರು ಹೆದ್ದಾರಿ: ಸಮರೋಪಾದಿ ಕಾಮಗಾರಿ

January 11, 2019

ಬೆಂಗಳೂರು: ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ವಿಶ್ವ ದರ್ಜೆಗೆ ಏರಿಸುವ ಕಾಮಗಾರಿ ಸದ್ದಿಲ್ಲದೆ ಭರ ದಿಂದ ಸಾಗಿದೆ. ನಗರದ ಹೊರವಲಯದಲ್ಲಿರುವ ಒಕ್ಕಲಿಗ ಮಹಾಸಂಸ್ಥಾನ ಮಠದಿಂದ ರಸ್ತೆಯ ಇಕ್ಕೆಲಗಳಲ್ಲೂ ಕಾಮಗಾರಿ ಹಗಲು-ರಾತ್ರಿಯೆನ್ನದೆ ನಡೆಯುತ್ತಿದೆ. ನೈಸ್ ಕೂಡು ರಸ್ತೆಯಿಂದ ಬಿಡದಿವರೆಗೂ ಭೂಸ್ವಾಧೀನ ಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹೆದ್ದಾರಿಗೆ ವಶ ಪಡಿಸಿಕೊಂಡ ಮನೆ ಮತ್ತು ಕಟ್ಟಡಗಳನ್ನು ತೆರವುಗೊಳಿಸಿ, ಸಮತಟ್ಟು ಮಾಡಲಾಗುತ್ತಿದೆ.

ಈ ಭಾಗದಲ್ಲೇ ವರನಟ, ದಿವಂಗತ ಡಾ. ರಾಜ್‍ಕುಮಾರ್ ಅವರ ಕುಟುಂಬದ ಒಡೆತನಕ್ಕೆ ಸೇರಿದ ಪುನೀತ್ ಫಾರಂನ ಮೂರು ಎಕರೆಗೂ ಹೆಚ್ಚು ಭೂಮಿ ಸ್ವಾಧೀನ ಪಡಿಸಿಕೊಂಡು ಸಮತಟ್ಟು ಮಾಡಲಾಗಿದೆ. ಇದೇ ವ್ಯಾಪ್ತಿಗೆ ಬರುವ ಅಮೃತ್ ಡಿಸ್ಟಿಲರಿ ಸೇರಿದಂತೆ ಕೆಲವು ಪ್ರಮುಖ ಕೈಗಾರಿಕೆ ವ್ಯಾಪ್ತಿ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡಿರುವ ಕೇಂದ್ರ ಭೂಸಾರಿಗೆ ಇಲಾಖೆ ಈ ಭಾಗದಲ್ಲಿನ ಕಟ್ಟಡಗಳನ್ನು ತೆರವುಗೊಳಿಸಿ, ಭೂಮಿ ಮಾಲೀಕರ ಜಾಗಕ್ಕೆ ಸರ್ಕಾರವೇ ಗೋಡೆ ನಿರ್ಮಿಸಿಕೊಡುತ್ತಿದೆ.

ಸಂಕ್ರಾಂತಿ ಕಳೆದ ನಂತರ ಮುಖ್ಯ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದರು. ಆದರೆ, ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ನಿಗದಿತ ಅವಧಿಗೂ ಮುನ್ನವೇ ಯೋಜನೆ ಪೂರ್ಣಗೊಳಿಸಿ ರಾಷ್ಟ್ರಕ್ಕೆ ಸಮರ್ಪಿಸುವ ಉದ್ದೇಶದಿಂದ ಎಲ್ಲ ಸವಲತ್ತುಗಳೂ ಲಭ್ಯವಿರು ವಂತಹ 11 ಕೇಂದ್ರಗಳನ್ನು ಈ ಮಾರ್ಗದಲ್ಲಿ ಸ್ಥಾಪಿಸಲಾಗಿದೆ.

ಏಕಕಾಲಕ್ಕೆ ನಗರದ ಹೊರವಲಯದಲ್ಲಿ ಕೈಗೆತ್ತಿಕೊಂಡಿರುವ ಉದ್ದೇಶಿತ ಬೈಪಾಸ್ ರಸ್ತೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಜೊತೆಗೆ ಹೊಸದಾಗಿ ಸೇತುವೆಗಳ ನಿರ್ಮಾಣ ಕೈಗೆತ್ತಿಕೊಳ್ಳಲು ಜಾಗಗಳನ್ನು ಗುರುತಿಸಲಾಗಿದೆ. ತಮ್ಮ ಆಡಳಿತಾವಧಿಯಲ್ಲೇ ಯೋಜನೆ ಪೂರ್ಣಗೊಳ್ಳಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ಎಲ್ಲಾ ನೆರವನ್ನು ಭೂಸಾರಿಗೆ ಇಲಾಖೆಗೆ ನೀಡುವುದಲ್ಲದೆ, ಇದುವರೆಗೆ ಶೇಕಡ 80ರಷ್ಟು ಭೂಮಿಯನ್ನೂ ಹಸ್ತಾಂತರಿಸಿದ್ದಾರೆ. ರಸ್ತೆ ಬದಿಯಲ್ಲಿರುವ ಕೆಲವು ಪ್ರಮುಖ ಹೋಟೆಲ್ ಮತ್ತು ಕಟ್ಟಡಗಳು ಮುಂದಿನ ದಿನಗಳಲ್ಲಿ ನೆಲಸಮವಾಗಲಿವೆ.

ಯೋಜನೆಗೆ ಭೂಸ್ವಾಧೀನ ಸೇರಿ ಒಟ್ಟಾರೆ 6,500 ಕೋಟಿ ರೂ. ವೆಚ್ಚವಾಗಲಿದೆ. ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧ ಗುತ್ತಿಗೆದಾರರು ಕಾಮಗಾರಿ ನಡೆಸುತ್ತಿದ್ದಾರೆ.

Translate »