ಬೆಂಗಳೂರು-ಮೈಸೂರು ವಿಶ್ವ ದರ್ಜೆ ರಸ್ತೆ ಯೋಜನೆಗಿದ್ದ ಅಡ್ಡಿ-ಆತಂಕ ನಿವಾರಣೆ
ಮೈಸೂರು

ಬೆಂಗಳೂರು-ಮೈಸೂರು ವಿಶ್ವ ದರ್ಜೆ ರಸ್ತೆ ಯೋಜನೆಗಿದ್ದ ಅಡ್ಡಿ-ಆತಂಕ ನಿವಾರಣೆ

October 24, 2018

ಬೆಂಗಳೂರು: ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ವಿಶ್ವದರ್ಜೆಗೆ ಏರಿಸುವ ಯೋಜನೆಗೆ ಎದುರಾಗಿದ್ದ ಎಲ್ಲಾ ಅಡ್ಡಿ-ಆತಂಕಗಳು ಕೊನೆಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಘೋಷಣೆ ಮಾಡಿದ್ದಾರೆ.

ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ದೊಡ್ಡ ಅಡ್ಡಿಯಾಗಿ ನಿಂತಿತ್ತು, ಅದು ಬಗೆಹರಿದಿದೆ. ಇನ್ನು 10 ಪಥಗಳ ರಸ್ತೆ ಕಾಮಗಾರಿ ಆರಂಭಗೊಳ್ಳಲಿದೆ. ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಕೇಂದ್ರದ ಸಹಕಾರದಿಂದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ 36,000 ಕೋಟಿ ರೂ. ವೆಚ್ಚ ಮಾಡಲಿದ್ದಾರೆ.

ಕೊಡಗಿನ ನೆರೆ ಸಂತ್ರಸ್ತರಿಗೆ 10 ಲಕ್ಷದ ಮನೆ: ಭಾರೀ ಮಳೆಯಿಂದ ಭೂ ಕುಸಿತ ಉಂಟಾಗಿ ಸೂರು ಕಳೆದುಕೊಂಡ ಕೊಡಗಿನ ಒಂದು ಸಾವಿರ ಕುಟುಂಬಗಳಿಗೆ ಪ್ರತಿ ಮನೆಗೆ 10 ಲಕ್ಷ ರೂ. ವೆಚ್ಚ ಮಾಡಿ ಎರಡು ಕೊಠಡಿಗಳ ಮನೆ ನಿರ್ಮಿಸಿ ಕೊಡಲಾಗುವುದು ಎಂದರು.

ಕೆಲವರು ಲೀಸ್ ಮೇಲೆ ಮನೆ ಪಡೆದಿದ್ದರು. ಅಂತಹ ಕೆಲವು ಮನೆಗಳೂ ಕುಸಿದಿವೆ. ಆದರೆ ಅದರ ಮಾಲೀಕರು ಲೀಸ್ ಪಡೆದವರಿಗೆ ಹಣ ಹಿಂತಿರುಗಿಸುತ್ತಿಲ್ಲ. ಇಂತಹವರಿಗೂ ಸಮುಚ್ಛಯ ಮನೆಗಳನ್ನು ನಿರ್ಮಿಸಿಕೊಡುವ ಭರವಸೆ ಇತ್ತಿದ್ದಾರೆ.

ಭೂಕುಸಿತದಿಂದ ಭಾರೀ ಪ್ರಮಾಣದ ಕಾಫಿ ಬೆಳೆ ನಾಶವಾಗಿದೆ. ಬರೀ ಬೆಳೆ ನಾಶವಷ್ಟೇ ಅಲ್ಲದೆ, ಕೃಷಿ ಭೂಮಿಯೇ ಕುಸಿತಗೊಂಡಿದೆ. ಇಂತಹ ಎಲ್ಲಾ ರೈತರಿಗೂ ಶೇಕಡ 50ರಷ್ಟು ಪರಿಹಾರ ಭರಿಸುವುದಾಗಿ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಭರವಸೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ತಮಗೆ ಮಾಹಿತಿ ನೀಡುವಂತೆ ಸಲಹೆ ಮಾಡಿದ್ದು, ಅವರ ಮೈಸೂರು ಭೇಟಿ ಸಂದರ್ಭದಲ್ಲಿ ನಾನು ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿದ್ದೇನೆ. ಅವರಿಗೆ ಎಲ್ಲವೂ ಮಾಹಿತಿ ಇದೆ. ರಾಜ್ಯ ಸರ್ಕಾರದ ಜೊತೆ ನಾವೂ ಕೈಜೋಡಿಸುವುದಾಗಿ ತಿಳಿಸಿದ್ದಾರೆ. ಕೊಡಗು ಪರಿಹಾರಕ್ಕೆ ಬಂದಿರುವ ಹಣವನ್ನು ಅಲ್ಲಿನ ಅಭಿವೃದ್ಧಿಗೆ ಬಳಸುತ್ತೇವೆಯೇ ಹೊರತು ಒಂದು ಪೈಸೆಯನ್ನೂ ಬೇರೆ ಉದ್ದೇಶಗಳಿಗೆ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Translate »