ಇಂಧನ ಇಲಾಖೆ ಮಳಿಗೆಯಲ್ಲಿ ವಿದ್ಯುತ್ ಸುರಕ್ಷತಾ ಬಳಕೆ, ಉಳಿತಾಯದ ಬಗ್ಗೆ ಭರಪೂರ ಮಾಹಿತಿ
ಮೈಸೂರು

ಇಂಧನ ಇಲಾಖೆ ಮಳಿಗೆಯಲ್ಲಿ ವಿದ್ಯುತ್ ಸುರಕ್ಷತಾ ಬಳಕೆ, ಉಳಿತಾಯದ ಬಗ್ಗೆ ಭರಪೂರ ಮಾಹಿತಿ

October 24, 2018

ಮೈಸೂರು: ವಿದ್ಯುತ್ ವಿತರಣಾ ಕಂಪೆನಿಗಳ ಪ್ರಮುಖ ಕಾರ್ಯಕ್ರಮಗಳು, ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳು, ಸೋಲಾರ್, ಎಲ್‍ಇಡಿ ದೀಪ ಬಳಸಿ ವಿದ್ಯುತ್ ಉಳಿಸಿ, ವಿದ್ಯುತ್ ಸುರಕ್ಷತಾ ಮತ್ತು ವಿದ್ಯುತ್ ಉಳಿತಾಯದ ಮಾರ್ಗ ಸೂಚಿ ನಾಮಫಲಕಗಳು ಅನಾವರಣಗೊಂಡಿವೆ.

ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸೇವ್ ಎನರ್ಜಿ, ಅರ್ಥ್ ಅಂಡ್ ಗ್ರೀನ್ ಶೀರ್ಷಿಕೆಯಡಿ ಇಂಧನ ಇಲಾಖೆ ತೆರೆದಿ ರುವ ಮಳಿಗೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ತಮ್ಮ ವ್ಯಾಪ್ತಿಯ ಹಾಸನ, ಕೊಡಗು, ಮೈಸೂರು, ಮಂಡ್ಯ ಹಾಗೂ ಚಾಮ ರಾಜನಗರ ಜಿಲ್ಲೆಗಳಲ್ಲಿ ಜಾರಿಗೊಳಿಸಿರುವ ಯೋಜನೆಗಳಾದ ನಿರಂತರ ವಿದ್ಯುತ್ ಯೋಜನೆ, ಅಕ್ರಮ ಪಂಪ್‍ಸೆಟ್‍ಗಳ ಸಕ್ರಮೀಕರಣ, ಸ್ಟಾರ್ಟ್ ಗ್ರಿಡ್ ಪೈಲೆಟ್ ಯೋಜನೆ, ಡಿಎಸ್‍ಎಂ ಚಟುವಟಿಕೆ, ಗಂಗಾ ಕಲ್ಯಾಣ, ಕುಡಿಯುವ ನೀರು ಯೋಜನೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.

ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳು: ಕೇಂದ್ರ ಸರ್ಕಾರದ ಅನುದಾನದಲ್ಲಿ ರಾಜ್ಯದ 222 ಪಟ್ಟಣಗಳಲ್ಲಿ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯನ್ನು (ಐಪಿಡಿಪಿಎಸ್) 1197.66 ಕೋಟಿ ರೂ.ವೆಚ್ಚದಲ್ಲಿ ಅನುಷ್ಠಾನ. ರಾಜ್ಯದ ಎಲ್ಲಾ ಗ್ರಾಮ, ಉಪಗ್ರಾಮ ಮತ್ತು ತಾಂಡಗಳ ವಿದ್ಯುದ್ಧೀಕರಣಕ್ಕಾಗಿ ರಾಜೀವ್‍ಗಾಂಧಿ ಗ್ರಾಮೀಣ ವಿದ್ಯುದ್ಧೀಕರಣ ಯೋಜನೆ-12ನೇ ಯೋಜನೆ ಯಡಿ ಕಾಮಗಾರಿ ಕೈಗೊಂಡು ವಿದ್ಯುತ್ ಸಂಪರ್ಕ ಕಲ್ಪಿಸಿರುವ ಕುರಿತು.

ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ 1754.30 ಕೋಟಿ ರೂ. ವೆಚ್ಚದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿ ಮತ್ತು ಕೃಷಿಯೇತರ ಫೀಡರ್‍ಗಳ ಬೇರ್ಪಡಿಸುವಿಕೆ, ವಿದ್ಯುತ್ ಉಪ ಪ್ರಸರಣ ಹಾಗೂ ವಿತರಣಾ ವ್ಯವಸ್ಥೆಯ ಬಲವರ್ಧನೆ, ಗ್ರಾಮೀಣ ವಿದ್ಯುದೀ ಕರಣ ಮತ್ತು ಮಾಪಕೀಕರಣ ಕಾಮಗಾರಿಗಳ ಅನುಷ್ಠಾನ ಹಾಗೂ ದಟ್ಟ ಅರಣ್ಯ, ಬೆಟ್ಟ ಹಾಗೂ ಗಡಿ ಪ್ರದೇಶದಲ್ಲಿನ ವಿದ್ಯುತ್ ರಹಿತ ವಸತಿಗಳಿಗೆ ವಿದ್ಯುದೀಕರಣ ಗೊಳಿಸುತ್ತಿರುವ ಡಿ.ಸೆಂಟ್ರಲೈಜ್ಡ್ ಡಿಸ್ಟ್ರೀಬ್ಯೂಟೆಡ್ ಜನರೇಷನ್ ಯೋಜನೆಗಳ ಕುರಿತ ಮಾಹಿತಿ ನೀಡಲಾಗಿದೆ.

ವಿದ್ಯುತ್ ಸುರಕ್ಷತಾ ಮಾರ್ಗಸೂಚಿಗಳು: ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಯನ್ನು ಮುಟ್ಟ ಬೇಡಿ ಹಾಗೂ ನಿಮ್ಮ ಸುತ್ತಮುತ್ತ ಬಾಗಿರುವ, ಜೋತು ಬಿದ್ದಿರುವ ವೈರುಗಳು ಇದ್ದಲ್ಲಿ ಕೂಡಲೇ ಹತ್ತಿರದ ನಿಗಮದ ಕಚೇರಿ ಮಾಹಿತಿ ನೀಡುವುದು. ವಿದ್ಯುತ್ ಕಂಬಗಳನ್ನು ಇತರೆ ಬಳಕೆಗೆ ಬಳಸದಿರು ವುದು. ತಂತಿ ಬೇಲಿಗೆ ವಿದ್ಯುತ್ ಹರಿಸುವುದು ಭಾರ ತೀಯ ವಿದ್ಯುಚ್ಛಕ್ತಿ ಕಾಯ್ದೆ 1910ರ ಉಪಬಂಧ 39ರ ಪ್ರಕಾರ ಶಿಕ್ಷಾರ್ಹ ಅಪರಾಧ. 5 ಸ್ಟಾರ್ ಗುರುತಿನ ವಿದ್ಯುತ್ ಸಾಧನಗಳಲ್ಲೇ ಬಳಸುವುದು.

ವಿದ್ಯುತ್ ಉಳಿತಾಯದ ಮಾರ್ಗಗಳು: ಎಲ್‍ಇಡಿ ಮತ್ತು ಸಿಎಫ್‍ಎಲ್ ಬಲ್ಬ್‍ಗಳನ್ನೇ ಬಳಸುವುದು. ನೀರು ಕಾಯಿಸಲು ಸೋಲಾರ್ ವಾಟರ್ ಹೀಟರ್ ಬಳಸುವುದು. ಅನಾವಶ್ಯಕವಾಗಿ ಫ್ರಿಡ್ಜ್‍ಗಳ ಬಾಗಿಲನ್ನು ಪದೇ ಪದೆ ತೆರೆಯಬಾರದು. ಅಗತ್ಯವಿಲ್ಲದಾಗ ದೀಪಗಳನ್ನು ಆರಿಸುವುದು. ಅಲಂಕಾರಿಕ ದೀಪಗಳನ್ನು ಬಳಸಬಾರದು. ಸಾರ್ವಜನಿಕರು ಉದ್ಯಾನವನ ಮತ್ತು ತೋಟಗಳ ದೀಪಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕು ಎಂಬ ಸಂದೇಶಗಳುಳ್ಳ ಫಲಕಗಳು, ಜೊತೆಗೆ ಕೆಪಿಟಿಸಿಎಲ್‍ನ ಟ್ರಾನ್ಸ್‍ಮಿಷನ್ ಜೋನ್ ಮಾದರಿಯನ್ನು ಅನಾವರಣಗೊಳಿಸಲಾಗಿದೆ.

Translate »