ನನ್ನ ಶವವೂ ಬಿಜೆಪಿಗೆ ಹೋಗಲ್ಲ, ಬಿಜೆಪಿ ಮುಗಿಸಿಯೇ ತೀರುತ್ತೇನೆ ಎಂದ ಬಿಎಸ್‍ವೈ, ಶ್ರೀರಾಮುಲು ಈಗೆಲ್ಲಿದ್ದಾರೆ: ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್
ಮೈಸೂರು

ನನ್ನ ಶವವೂ ಬಿಜೆಪಿಗೆ ಹೋಗಲ್ಲ, ಬಿಜೆಪಿ ಮುಗಿಸಿಯೇ ತೀರುತ್ತೇನೆ ಎಂದ ಬಿಎಸ್‍ವೈ, ಶ್ರೀರಾಮುಲು ಈಗೆಲ್ಲಿದ್ದಾರೆ: ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್

October 24, 2018

ಬೆಂಗಳೂರು: ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಮಯ ಸಾಧಕತನ, ದೇವೇಗೌಡ-ಸಿದ್ದರಾಮಯ್ಯ ಹಗಲುವೇಷ ಹಾಕುತ್ತಿದ್ದಾರೆ ಎಂದು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಈ ಹಿಂದೆ ತಮ್ಮ ಪಕ್ಷದ ನಾಯಕರಿಂದಲೇ ಟೀಕೆಗೆ ಗುರಿಯಾಗಿದ್ದನ್ನು ನೆನಪಿಸಿಕೊಳ್ಳಲಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.

ಪ್ರೆಸ್‍ಕ್ಲಬ್-ಬೆಂಗಳೂರು ವರದಿಗಾರರ ಕೂಟ ಆಯೋ ಜಿಸಿದ್ದ ಸುದ್ದಿಗಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದ ಸಂದರ್ಭದಲ್ಲಿ, ನನ್ನ ಶವವೂ ಬಿಜೆಪಿ ಬಾಗಿಲಿಗೆ ಹೋಗುವುದಿಲ್ಲ ಎಂದಿದ್ದರು. ನಂತರ ಆಗಿದ್ದೇನು? ಎಂದು ಪ್ರಶ್ನಿಸಿದರು. ಶ್ರೀರಾಮುಲು ಬಿಎಸ್‍ಆರ್ ಪಕ್ಷ ಕಟ್ಟಿ, ಬಿಜೆಪಿ ನಿರ್ನಾಮ ಮಾಡ್ತೀನಿ ಎಂದಿದ್ದರು, ನಂತರ ಎಲ್ಲಿಗೆ ಬಂದರು.

ಯಡಿಯೂರಪ್ಪ-ಸಿ.ಟಿ.ರವಿ ಪರಸ್ಪರ ಟೀಕಿಸಿಕೊಂಡಿದ್ದರು, ಜಗದೀಶ್ ಶೆಟ್ಟರ್ ಮತ್ತು ಸದಾನಂದಗೌಡ ಅವರು, ಯಡಿಯೂರಪ್ಪ ಅವರ ವಿರುದ್ಧ ಎಲ್ಲ ಕಡೆ ಭ್ರಷ್ಟಾಚಾರ ಆರೋಪ ಮಾಡಿಕೊಂಡು ತಿರುಗಿದ್ದರು. ಇದನ್ನೆಲ್ಲಾ ಮರೆತರೆ? ಎಂದು ಟಾಂಗ್ ನೀಡಿದರು.

ರಾಜಕಾರಣ, ಚುನಾವಣೆಯಲ್ಲಿ ಕೆಲವೊಂದು ಸಂದರ್ಭದಲ್ಲಿ ಆಯಾ ಪರಿಸ್ಥಿತಿಗೆ ಅನುಗುಣವಾಗಿ ಹೇಳಿಕೆ ಕೊಟ್ಟಿರುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ದೇಶ ಹಾಗೂ ರಾಜ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೆಲವೊಂದು ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಮರ್ಥಿಸಿಕೊಂಡರು.

ಉಪ ಚುನಾವಣೆ ಫಲಿತಾಂಶ ಮುಂದಿನ ಎರಡು ತಿಂಗಳಲ್ಲಿ ಎದುರಾಗುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ, ತೆಲಂಗಾಣ, ಮಿಜೋರಾಂ ವಿಧಾನಸಭಾ ಚುನಾವಣೆ ಅಲ್ಲದೆ, ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ 2014 ರಲ್ಲಿದ್ದ ಚರಿಷ್ಮ ಈಗಿಲ್ಲ, ಬಿಜೆಪಿ ನಾಯಕರು ಸುಳ್ಳು ಹೇಳುವುದು ಬಿಟ್ಟು ಅಭಿವೃದ್ಧಿ ಮಾಡಿದ ಅಂಕಿ-ಅಂಶ ನೀಡಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ, ದೇವರದಯೆಯಿಂದ ಮುಖ್ಯಮಂತ್ರಿಯಾಗಿದ್ದೇನೆ, ಐದು ವರ್ಷಗಳ ಅವಧಿಗೆ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ. ಅಷ್ಟು ಸುಲಭದಲ್ಲಿ ಮೈತ್ರಿ ಸರ್ಕಾರ ಕಿತ್ತೊಗೆಯಲಾಗದು.

ಬಿಜೆಪಿಗೆ ವಲಸೆ ಬರಲು 10-12 ಶಾಸಕರು ಸಿದ್ಧವಾಗಿದ್ದಾರೆ ಎಂದು ಕೆಲವು ಬಿಜೆಪಿ ನಾಯಕರು ಈಗಲೂ ಹೇಳುತ್ತಿದ್ದಾರೆ.
ಮೈತ್ರಿ ಸರ್ಕಾರ ಬಿದ್ದು ಹೋಗಲಿದೆ. ಜಾಸ್ತಿ ದಿನ ಬಾಳುವುದಿಲ್ಲ ಎಂದೆಲ್ಲಾ ಹೇಳಿಕೊಂಡು ತಿರುಗುತ್ತಿದ್ದು, ಇದರಲ್ಲಿ ಸತ್ಯಾಂಶವಿಲ್ಲ.

ಈ ವಿಚಾರದಲ್ಲಿ ಮಾಧ್ಯಮಗಳು ಸತ್ಯಾಸತ್ಯತೆ ಪರಿಶೀಲಿಸಿ ಬರೆಯಬೇಕು. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಗೆ ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಸರ್ಕಾರ ಅತಂತ್ರವಾಗಿದೆ ಎಂದು ಪ್ರತಿನಿತ್ಯ ಹೇಳುತ್ತಿದ್ದರೆ ಅಧಿಕಾರಿಗಳು ನನ್ನ ಮಾತು ಕೇಳುತ್ತಾರಾ ಎಂದು ಪ್ರಶ್ನಿಸಿದರು.

Translate »