ರೈತ ಮಹಿಳೆ, ಹೋರಾಟಗಾರರನ್ನು ಅವಮಾನಿಸಿರುವುದು ಸಹಿಸಲಾಗಲ್ಲ
ಮೈಸೂರು

ರೈತ ಮಹಿಳೆ, ಹೋರಾಟಗಾರರನ್ನು ಅವಮಾನಿಸಿರುವುದು ಸಹಿಸಲಾಗಲ್ಲ

November 19, 2018

ಬೆಂಗಳೂರು: ರೈತ ಮಹಿಳೆ ಹಾಗೂ ರೈತ ಹೋರಾಟ ಗಾರರನ್ನು ಅವಮಾನಿಸಿರುವುದನ್ನು ಸಹಿಸಲಾಗಲ್ಲ ಎಂದು ಗುಡುಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಸಿಎಂ ಕುಮಾರಸ್ವಾಮಿ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, `ನಾಲ್ಕು ವರ್ಷ ಎಲ್ಲಿ ಮಲಗಿದ್ದೆ’? ಎಂದು ಮುಖ್ಯಮಂತ್ರಿಗಳು ರೈತ ಮಹಿಳೆಯನ್ನು ಕೇಳಿದ್ದಾರಲ್ಲಾ, ಅದರ ಅರ್ಥವೇನು? ಎಂದು ಪ್ರಶ್ನಿಸಿದರು.

ಪ್ರತಿಭಟನೆ ಮಾಡಿದ ರೈತರನ್ನು ಗೂಂಡಾಗಳು, ದರೋಡೆಕೋರರು ಎಂದೆಲ್ಲಾ ಕರೆದಿದ್ದಾರೆ. ಇಂತಹ ಧಿಮಾಕಿನ ಮಾತುಗಳು ಬೇಡ ಎಂದು ಕಿಡಿಕಾರಿದರು. `ನನಗೆ ಓಟ್ ಹಾಕಿಲ್ಲ’ ಎಂದು ಹೇಳುತ್ತಿದ್ದೀರಲ್ಲಾ ಮುಖ್ಯಮಂತ್ರಿಗಳೇ, ಜನರು ನಿಮಗೆ ಓಟ್ ಹಾಕಿಲ್ಲ. 224ರಲ್ಲಿ 37 ಸೀಟು ಮಾತ್ರ ನಿಮಗೆ ಬಂದಿದೆ ಎಂದು ಗೊತ್ತಿದೆ ತಾನೇ? ಹಾಗಿದ್ದರೂ ಯಾಕೆ ಸಿಎಂ ಸ್ಥಾನ ಒಪ್ಪಿಕೊಂಡಿರಿ. ನಿಮಗೆ ಕುರ್ಚಿ ಬೇಕು, ಜನರ ಸಮಸ್ಯೆ ಬಗೆಹರಿಸುವುದು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದರು.

ಬೆಳಗಾವಿ ರೈತರ ಸಮಸ್ಯೆ ಬಗೆಹರಿಸಲು ಬರುತ್ತೇನೆ ಎಂದು ಹೇಳಿದ್ದೀರಲ್ಲಾ, ಪ್ರತೀ ತಿಂಗಳು ರೈತರ ಸಭೆ ನಡೆಸುತ್ತೇನೆ ಎಂದು ಹೇಳಿದ್ದೀರಲ್ಲಾ, ಅದನ್ನು ಮಾಡಿದ್ದೀರಾ? ರೈತರ ಉತ್ಪನ್ನ ಖರೀದಿ ಮಾಡುವ ಯೋಗ್ಯತೆ ನಿಮಗಿಲ್ಲ. ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಯವರಿಗೆ ಅನೇಕ ರೀತಿಯ ಸಹಕಾರ ನೀಡಿದರೂ, ನಿಮ್ಮಿಂದ ರೈತರಿಗೆ ಬಾಕಿ ಹಣ ಕೊಡಿಸಲು ಸಾಧ್ಯವಾಗುತ್ತಿಲ್ಲ.

ಹೋರಾಟಗಾರ ಮಹಿಳೆಯನ್ನು ಎಲ್ಲಿ ಮಲಗಿದ್ದೆ ಎಂದು ಕೇಳುತ್ತೀರಿ. ಈ ಮಾತಿನ ಅರ್ಥವೇನು? ರೈತ ಹೋರಾಟಗಾರರನ್ನು ದರೋಡೆ ಕೋರರು ಎಂದು ಕರೆಯುತ್ತೀರಿ. ಇಂತಹ ದುರಹಂಕಾರ ಇರಬಾರದು. ತೊಘಲಕ್ ದರ್ಬಾರ್ ನಡೆಸುತ್ತಿದ್ದೀರಿ. 104 ಸ್ಥಾನ ಪಡೆದು ವಿರೋಧ ಪಕ್ಷದಲ್ಲಿರುವ ನಾವು ಇದನ್ನು ಸಹಿಸಲಾಗಲ್ಲ. ಬೆಳಗಾವಿ ಅಧಿವೇಶನದಲ್ಲಿ ಇದೇ ಪ್ರಮುಖ ವಿಷಯವಾಗುತ್ತದೆ ಎಂದು ಯಡಿಯೂರಪ್ಪ ಹರಿಹಾಯ್ದರು. ಸಿದ್ದರಾಮಯ್ಯ ಮತ್ತು ಡಾ. ಜಿ.ಪರಮೇಶ್ವರ್ ಅವರನ್ನು ಕೇಳುತ್ತಿದ್ದೇನೆ. ಇಂತಹ ಸೊಕ್ಕಿನ ಮುಖ್ಯಮಂತ್ರಿಗಳನ್ನು ಇಟ್ಟುಕೊಂಡು ಆಡಳಿತ ನಡೆಸಬೇಕೆ? ಇದಕ್ಕೆ ನಿಮ್ಮ ಉತ್ತರವೇನು? ರೇವಣ್ಣನವರು ನೋಟ್ ಪ್ರಿಂಟ್ ಮಾಡುವ ಮಿಷನ್ ಇಟ್ಟುಕೊಂಡಿಲ್ಲ ಎಂದು ಹೇಳುತ್ತಿದ್ದಾರೆ. ಹಣವಿಲ್ಲದಿದ್ದ ಮೇಲೆ ಸಾಲ ಮನ್ನಾ ಎಂದು ಏಕೆ ಹೇಳಿದಿರಿ? ಮಾನ-ಮರ್ಯಾದೆ ಇದ್ದರೆ ಮುಖ್ಯಮಂತ್ರಿಗಳು ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ರೈತರು ಪಕ್ಷ ಭೇದ ಮರೆತು ಒಗ್ಗಟ್ಟಾಗಬೇಕು. ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಯಡಿಯೂರಪ್ಪ ಕರೆ ನೀಡಿದರು.

Translate »